ಬಿಜೆಪಿಯ ಮಂಗಳೂರು ರ್ಯಾಲಿ: ಜನರ ಗಾಯಗಳಿಗೆ ಬರೆ

Update: 2017-09-07 19:12 GMT

ಕಾಲಡಿಯನ್ನು ಆವರಿಸುತ್ತಿರುವ ಕಳ್ಳ ನೀರಿನಂತೆ ಬೆಲೆ ಏರಿಕೆ ಸದ್ದಿಲ್ಲದೆ ನಮ್ಮ ಸೊಂಟದೆತ್ತರಕ್ಕೆ ಬಂದಿದೆ. ಪೆಟ್ರೋಲ್ ಬೆಲೆ ಕಳೆದೆರಡು ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ರಾಜಕಾರಣಿಗಳು ತುಟಿ ಹೊಲಿದು ಕೂತಿದ್ದಾರೆ. ಪ್ರತೀ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯೂ ಏರುತ್ತಿದೆ. ಶೀಘ್ರದಲ್ಲೇ ಅದರ ಸಬ್ಸಿಡಿ ಇಲ್ಲವಾಗಲಿದೆ. ಜಿಎಸ್‌ಟಿಯಿಂದ ತೆರಿಗೆ ಸುಧಾರಣೆಯಾಗುತ್ತದೆ ಎಂದು ಸರಕಾರವೇನೋ ಭರವಸೆಕೊಟ್ಟಿದೆಯಾದರೂ, ಬಹುತೇಕ ಕಡೆಗಳಲ್ಲಿ ವಸ್ತುಗಳಿಗೆ ಜಿಎಸ್‌ಟಿಯ ನೆಪದಲ್ಲಿ ಬೆಲೆಯೇರಿಸಿದ್ದಾರೆಯೇ ಹೊರತು, ಇಳಿಸಿದ ಒಂದೇ ಒಂದು ಉದಾಹರಣೆಯಿಲ್ಲ.

ಎರಡು ದಶಕಗಳ ಹಿಂದೆ ಪೆಟ್ರೋಲ್ ಬೆಲೆ 50 ಪೈಸೆ ಹೆಚ್ಚಾದರೂ ಬೀದಿಗಿಳಿದು ಗದ್ದಲ ಎಬ್ಬಿಸುತ್ತಿದ್ದ ಜನಸಮೂಹ ಬೆದರಿ ಮನೆಯೊಳಗೆ ಕೂತಿದೆ. ಹಾಗೆಂದು ಪ್ರತಿಭಟನೆ, ರ್ಯಾಲಿಗಳು ನಡೆಯುವುದೇ ಇಲ್ಲ ಎಂದಿಲ್ಲ. ಇಂದು ಮಂಗಳೂರಿನಲ್ಲಿ ಬಿಜೆಪಿ ನಡೆಸಿರುವ ರ್ಯಾಲಿ ಮತ್ತು ಸಮಾವೇಶ ಈ ನಾಡಿನ ಶ್ರೀಸಾಮಾನ್ಯರ ಅಕ್ಕಿ, ಬೇಳೆ, ಸೀಮೆಎಣ್ಣೆ ಇತ್ಯಾದಿಗಳಿಗೆ ಸಂಬಂಧಪಟ್ಟದ್ದೇ ಆಗಿದ್ದಿದ್ದರೆ ರಾಜ್ಯ ಸರಕಾರ ಮಾತ್ರವಲ್ಲ, ಕೇಂದ್ರ ಸರಕಾರವೂ ಈ ಕಡೆಗೆ ಇಣುಕಿ ನೋಡುತ್ತಿತ್ತೇನೋ. ಅಷ್ಟೇ ಅಲ್ಲ ರಾಜ್ಯ ಬಿಜೆಪಿಯ ವಿವಿಧ ನಾಯಕರು ವಿವಿಧೆಡೆಗಳಿಂದ ಮಂಗಳೂರಿಗೆ ಬಂದು ಇಲ್ಲಿನ ನಗರದ ಜನಜೀವನ ಅಸ್ತವ್ಯಸ್ತಗೊಳಿಸಿರುವುದನ್ನೂ ಜನರು ಕ್ಷಮಿಸುತ್ತಿದ್ದರು.

ಒಂದೆಡೆ ನೋಟು ನಿಷೇಧ, ಮಗದೊಂದೆಡೆ ಜಿಎಸ್‌ಟಿ ಹೀಗೆ ವಿವಿಧ ಗಾಯಗಳಿಂದ ನರಳುತ್ತಿರುವ ಮಂಗಳೂರು ನಗರಕ್ಕೆ ರಾಜ್ಯದ ನಾಯಕರು ತಮ್ಮ ಹಿಂಬಾಲಕರ ಜೊತೆಗೆ ಆಗಮಿಸಿ ಇನ್ನಷ್ಟು ನೋವು ಕೊಟ್ಟು ಹೋಗಿದ್ದಾರೆ. ರಾಜ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ಕರಾವಳಿಯಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ನಡೆಸುತ್ತಿರುವ ಯತ್ನದ ಭಾಗವಾಗಿತ್ತು ಇಂದು ಬಿಜೆಪಿ ಹಮ್ಮಿಕೊಂಡ ರ್ಯಾಲಿ. ಜನಸಾಮಾನ್ಯರ ಯಾವುದೇ ದೈನಂದಿನ ಸಂಕಟಗಳನ್ನು ಅಜೆಂಡಾದೊಳಗೆ ಇಟ್ಟುಕೊಳ್ಳದೆ, ತಮ್ಮ ಸಂಘಪರಿವಾರ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬೊಬ್ಬಿರಿದು, ಮಂಗಳೂರಿನಲ್ಲಿ ದಾಂಧಲೆ ನಡೆಸುವ ಬೆದರಿಕೆಯೊಡ್ಡಿದ ಈ ಜನರು ಈ ಮೂಲಕ ಜನಸಾಮಾನ್ಯರಿಂದ ಇನ್ನಷ್ಟೂ ದೂರವಾಗಿದ್ದಾರೆ. ಒಂದು ರೀತಿಯಲ್ಲಿ, ಗುರುವಾರ ಬಿಜೆಪಿ ಹಮ್ಮಿಕೊಂಡ ರ್ಯಾಲಿ, ಪಕ್ಷಕ್ಕೆ ಲಾಭವಾಗುವುದಕ್ಕಿಂತ ಅದರಿಂದ ಇನ್ನಷ್ಟು ಜನರ ಆಕ್ರೋಶವನ್ನು ಅದು ಕಟ್ಟಿಕೊಂಡಿದೆ.
 
 ಇದೊಂದು ರೀತಿ ಹತಾಶೆಯ ರ್ಯಾಲಿಯಾಗಿತ್ತು. ಬಹುಶಃ ಈ ಮೂಲಕ, ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಯಾವುದೇ ಜನಪರವಾದ ಕಾರಣಗಳು ಇಲ್ಲ ಎನ್ನುವುದು ಘೋಷಿಸಿಕೊಂಡಂತಾಗಿದೆ. ಸಂಘಪರಿವಾರ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ, ಇದಕ್ಕೆ ಸಚಿವ ರಮಾನಾಥ ರೈ ಕಾರಣರಾಗಿದ್ದಾರೆ ಎನ್ನುವುದು ಬಿಜೆಪಿಯ ಆರೋಪವಾಗಿದೆ. ರಮಾನಾಥ ರೈ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದಾರೆ ಮತ್ತು ಅವರ ದೌರ್ಬಲ್ಯದಿಂದಲೇ ಕಾನೂನು ವ್ಯವಸ್ಥೆ ದುರ್ಬಲಗೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಂದು ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ತಾನು ಹೇಳಿದಂತೆ ಕೇಳುತ್ತಿಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಅವರು ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಅವರ ಹೇಳಿಕೆಗಳು ವಾಟ್ಸ್‌ಆ್ಯಪ್‌ನಲ್ಲಿ ಈಗಾಗಲೇ ಹರಿದಾಡಿ ಸುದ್ದಿಯಾಗಿತ್ತು. ರಮಾನಾಥ ರೈ ಅವರ ನಿಷ್ಕ್ರಿಯತೆಯ ಫಲವನ್ನು ಬಂಟ್ವಾಳದ ಜನರು ಈಗಾಗಲೇ ಉಣ್ಣುತ್ತಿದ್ದಾರೆ. ಬಹುಶಃ ಬರೇ ಒಬ್ಬ ರಮಾನಾಥ ರೈ ಅವರ ರಾಜೀನಾಮೆಗಾಗಿ ಇಡೀ ರಾಜ್ಯದ ಬಿಜೆಪಿ ನಾಯಕರು ಒಂದಾಗಿ ಮಂಗಳೂರಿಗೆ ಬರುವ ಮತ್ತು ಮಂಗಳೂರಿನ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುವ ಅಗತ್ಯವಿತ್ತೆ ಎಂದು ಸ್ವತಃ ಬಿಜೆಪಿಯೊಂದಿಗೆ ಒಲವಿರುವ ಅದರ ತಳಮಟ್ಟದ ಕಾರ್ಯಕರ್ತರೇ ಪ್ರಶ್ನೆಯನ್ನು ತಮ್ಮ ನಾಯಕರಿಗೆ ಕೇಳುತ್ತಿದ್ದಾರೆ. ಮಂಗಳೂರು ನಗರ ಇತ್ತೀಚಿನ ದಿನಗಳಲ್ಲಿ ವಾಹನ ನಿಬಿಡತೆಯಿಂದ ನರಳುತ್ತಿದೆ. ಇಲ್ಲಿಯ ಜನರ ಸಂಕಟಗಳು, ನೋವುಗಳೇ ವಿಭಿನ್ನವಾದುದು.

ಆರ್ಥಿಕವಾಗಿ ತತ್ತರಿಸಿದ ಬಳಿಕ ಮಂಗಳೂರಿನ ಜನರು ಕೋಮು ವಿಷಯಗಳ ಬಗ್ಗೆ ತಲೆಕೆಡಿಸಿರುವುದು ಕಡಿಮೆ. ಕಲ್ಲಡ್ಕದಲ್ಲಿ ಆರೆಸ್ಸೆಸ್ ನಾಯಕರು ಸರ್ವ ಪ್ರಯತ್ನದಿಂದ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರೂ ಅದು ಮಂಗಳೂರನ್ನು ಕಾಡದೇ ಇರುವುದಕ್ಕೆ ಇದೂ ಒಂದು ಕಾರಣವಾಗಿದೆ. ಆದರೆ ಈಗಾಗಲೇ ಇಲ್ಲಿನ ಸಂಸದರು ಉಳ್ಳಾಲದ ಪ್ರತಿಭಟನಾ ಸಭೆಯೊಂದರಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ನಮಗೆ ಗೊತ್ತಿದೆ ಎಂದು ಬೆದರಿಕೆ ಒಡ್ಡಿದ್ದರು. ಆದರೂ ಮಂಗಳೂರಿನ ಜನರು ಸಹನೆಯನ್ನು, ಶಾಂತಿಯನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮಂಗಳೂರಿಗೆ ಬಂದು, ರಾಜ್ಯಕ್ಕೇ ಬೆಂಕಿ ಹಚ್ಚಲಿದ್ದೇವೆ ಎಂಬರ್ಥ ಬರುವ ಮಾತುಗಳನ್ನು ಆಡಿದರು. ಆದರೂ ಮಂಗಳೂರಿನ ಜನರು ಅದಕ್ಕೆ ಸ್ಪಂದಿಸಲಿಲ್ಲ. ಇವೆಲ್ಲ ಬೆಳವಣಿಗೆಗಳ ಬಳಿಕ, ರಾಜ್ಯಕ್ಕೆ ಅಮಿತ್ ಶಾ ಅವರ ಆಗಮನವಾಯಿತು.

ರಾಜ್ಯದ ಬಿಜೆಪಿ ನಾಯಕರ ಕಳಪೆ ಪ್ರದರ್ಶನ ಅವರನ್ನೂ ಅಸಹಾಯಕವಾಗಿಸಿದೆ. ಹೇಗಾದರೂ ಸರಿ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲೇ ಬೇಕು. ಸಿದ್ದರಾಮಯ್ಯ ಅವರ ಆಡಳಿತದ ವಿರುದ್ಧ ಮಾತನಾಡುವುದಕ್ಕೆ ಸಾಧ್ಯವಾಗದೇ ಇದ್ದರೆ ಜನರ ಭಾವನೆಗಳನ್ನು ಕೆರಳಿಸಿ, ಕೋಮುವಿಭಜನೆಯ ಮೂಲಕವಾದರೂ ರಾಜ್ಯದಲ್ಲಿ ಬಿಜೆಪಿ ಆರಿಸಿ ಬರುವಂತೆ ಮಾಡಿ ಎಂದು ಅಪ್ಪಣೆಕೊಡಿಸಿದ್ದಾರೆ. ಅದರ ಪರಿಣಾಮವಾಗಿಯೇ, ಬಿಜೆಪಿಯ ನಾಯಕರು ತರಾತುರಿಯಿಂದ ಮಂಗಳೂರು ರ್ಯಾಲಿಯನ್ನು ಹಮ್ಮಿಕೊಂಡರು. ಬಿಜೆಪಿಯ ಮಂಗಳೂರು ರ್ಯಾಲಿಯನ್ನು ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದರು ಎನ್ನುವುದಕ್ಕಿಂತ ಕರಾವಳಿಯ ಜನರೇ ಅದಕ್ಕೆ ಸಹಕರಿಸದೇ ಬೆನ್ನು ತಿರುಗಿಸಿ ವಿಫಲವಾಗುವಂತೆ ಮಾಡಿದರು.

ಒಂದು ರೀತಿಯಲ್ಲಿ, ಕೋಮುಹಿಂಸಾಚಾರದ ಮೂಲಕ ಜನರನ್ನು ಒಡೆದು ಮತ ಕೇಳಲು ಬಂದರೆ ನಾವು ಅದಕ್ಕೆ ಸ್ಪಂದಿಸಲಾರೆವು ಎನ್ನುವುದನ್ನು ಜನ ಸಾಮಾನ್ಯರು ಈ ಮೂಲಕ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ, ರ್ಯಾಲಿ ವಿಫಲವಾದ ಹತಾಶೆಯಿಂದ ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಅವರು ಪೊಲೀಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಮತ್ತು ಮಂಗಳೂರನ್ನು ಬಂದ್ ಮಾಡುವುದಕ್ಕೆ ಬೆದರಿಕೆ ಒಡ್ಡಿದ್ದಾರೆ. ಪೊಲೀಸ್ ಅಧಿಕಾರಿಯ ಮೊಬೈಲ್‌ನ್ನು ಕಿತ್ತುಕೊಳ್ಳಲು ನೋಡಿದ್ದಾರೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಹೀನಾಯ ಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದರೂ, ಅವರು ಸಂಘಪರಿವಾರದ ಜನರಿಗೆ ತಗ್ಗಿ ಬಗ್ಗಿ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಎನ್ನುವುದನ್ನು ಈ ಘಟನೆ ರಾಜ್ಯಕ್ಕೆ ಸಾಬೀತು ಮಾಡಿದೆ. ಜಿಲ್ಲೆಯಲ್ಲಿ ರಮಾನಾಥ ರೈ ಉಸ್ತುವಾರಿ ಸಚಿವರಾಗಿದ್ದರೂ, ನಿಜವಾದ ಉಸ್ತುವಾರಿ ಯಾರ ಕೈಯಲ್ಲಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿ ಒತ್ತಾಯಿಸಲಿ, ಒತ್ತಾಯಿಸದೇ ಇರಲಿ, ರಮಾನಾಥ ರೈ ಬದಲಾಗಬೇಕಾದುದು ಜಿಲ್ಲೆಯ ಅಗತ್ಯ ಮಾತ್ರವಲ್ಲ, ಕಾಂಗ್ರೆಸ್‌ನ ಅಗತ್ಯ ಕೂಡ. ಇದೇ ಸಂದರ್ಭದಲ್ಲಿ, ಜನ ಸಾಮಾನ್ಯರು ಕೋಮುಉದ್ವಿಗ್ನತೆಯನ್ನು ಸೃಷ್ಟಿಸುವ ಇಂತಹ ಸಂಚುಗಳಿಗೆ ಬಲಿಯಾಗದೇ, ತಮ್ಮ ದೈನಂದಿನ ಬದುಕಿನ ಹಕ್ಕುಗಳಿಗಾಗಿ ಬೀದಿಗಿಳಿಯಲು ಮುಂದಾಗಬೇಕಾಗಿದೆ. ಸಿಲಿಂಡರ್, ಪ್ರೆಟ್ರೋಲ್ ದರಗಳ ಏರಿಕೆಯ ಬಿಸಿ ಹಿಂದೂ, ಮುಸ್ಲಿಮ್, ಕ್ರೈಸ್ತರನ್ನೆಲ್ಲ ಒಂದಾಗಿಸಬೇಕಾಗಿದೆ. ಧರ್ಮದ ಹೆಸರಿನಲ್ಲಿ ಸಾಯುವುದಕ್ಕೆ ಪ್ರೇರೇಪಿಸುವ ರಾಜಕೀಯ ನಾಯಕರ ಮುಂದೆ ಬದುಕುವ ನಮ್ಮ ಹಕ್ಕನ್ನು ಎತ್ತಿ ಹಿಡಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News