ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ ನಿಧನ

Update: 2017-09-08 04:14 GMT

ಬೆಂಗಳೂರು, ಸೆ.8: ಅಮೀರೆ ಶರಿಯತ್ ಹಝ್ರತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖ್ವಿ (80) ಇಂದು ಮುಂಜಾನೆ 2:30ರ ಸುಮಾರಿಗೆ ನಿಧರಾಗಿದ್ದಾರೆ.

ರಾಜ್ಯದ ಪ್ರಖ್ಯಾತ ಇಸ್ಲಾಮಿ ವಿದ್ವಾಂಸರು, ದೇಶ ವಿದೇಶಗಳಲ್ಲಿ ಚಿರಪರಿಚಿತರೂ ಆದ ಮೌಲಾನ ಅಶ್ರಫ್ ಅಲಿ, ಬೆಂಗಳೂರಿನ ಗೋವಿಂದಪುರದಲ್ಲಿರುವ ಪ್ರತಿಷ್ಠಿತ ಇಸ್ಲಾಮೀ ಶರೀಯತ್ ಕಾಲೇಜ್, ದಾರುಲ್ ಉಲೂಂ ಸಬೀಲುರ್ರಷಾದ್ ಇದರ ಪ್ರಾಂಶುಪಾಲರಾಗಿದ್ದರು.

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿ ಸದಸ್ಯ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉಪಾಧ್ಯಕ್ಷ, ಇಸ್ಲಾಮಿ ಫಿಖಾ ಅಕಾಡಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ತಂದೆ ಹಝ್ರತ್ ಮೌಲಾನ ಅಬುಸವುದ್ ನಿಧನ ನಂತರ ದಾರೂಲ್ ಉಲೂಂ ಸಬೀಲುರ್ರಷಾದ್ ನ ನೇತೃತ್ವ ವಹಿಸಿಕೊಂಡ ಅಶ್ರಫ್ ಅಲಿ ಅವರು ಅದನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕೇವಲ ಧಾರ್ಮಿಕ ವಿಚಾರಗಳಿಗಷ್ಟೇ ಸೀಮಿತವಾಗಿರದೆ ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು.

ಸೆ. 9ರಂದು ಬೆಳಗ್ಗೆ 10 ಗಂಟೆಗೆ ಸಬೀಲುರ್ರಷಾದ್ ನಲ್ಲಿ ಮೃತರ ಜನಾಝ ನಮಾಝ್ ನೆರವೇರಿಸಲಿದ್ದು, ಅವರ  ಮೃತದೇಹವನ್ನು ಕಾಲೇಜಿನ ಆವರಣದಲ್ಲಿ ದಫನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೌಲಾನ ಅಶ್ರಫ್ ಅಲಿ ಅವರು ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News