ಸೈಕಲ್ ರ‍್ಯಾಲಿಗಾಗಿ ಪ್ರಮುಖ ಹೆದ್ದಾರಿ ಬಂದ್ ಮಾಡಲು ಸಿದ್ಧವಾದ ಉತ್ತರಾಖಂಡ ಸಚಿವೆ!

Update: 2017-09-09 09:38 GMT

ಡೆಹ್ರಾಡೂನ್, ಸೆ.9:  ಡೆಹ್ರಾಡೂನ್ ನಿಂದ ಹರಿದ್ವಾರಕ್ಕೆ 55 ಕಿಮೀ ದೂರದ ಸೈಕಲ್  ರ‍್ಯಾಲಿಯೊಂದನ್ನು ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಸೆಪ್ಟೆಂಬರ್ 17ರಂದು ಆಯೋಜಿಸಲುದ್ದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿಯ 'ಬೇಟಿ ಬಚಾವೋ, ಬೇಟಿ ಪಡಾವೋ' ಆಂದೋಲನದ ಬಗ್ಗೆ ಜನಜಾಗೃತಿ ಮೂಡಿಸುವುದೇ ಈ ರ‍್ಯಾಲಿಯ ಉದ್ದೇಶವಾಗಿದೆ. ಆದರೆ ಈ ರ‍್ಯಾಲಿಗೆ ಅನುಕೂಲ ಕಲ್ಪಿಸಲು ಸಚಿವೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದನ್ನು ಬಂದ್ ಮಾಡಲು ಇಚ್ಛಿಸಿರುವುದು ಈಗ ಪ್ರಮುಖ ಸುದ್ದಿಯಾಗಿದೆ.

ಈ ರ‍್ಯಾಲಿಗಾಗಿ ಸಚಿವೆ ಈಗಾಗಲೇ ತರಬೇತಿಯನ್ನು ಪಡೆಯಲು ಆರಂಭಿಸಿದ್ದಾರೆ. ಆದರೆ ಅವರೆಣಿಸಿದಂತೆಯೇ ಈ ರ‍್ಯಾಲಿ ನಡೆದಿದ್ದೇ ಆದಲ್ಲಿ ಡೆಹ್ರಾಡೂನ್-ಹರಿದ್ವಾರ ನಡುವಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಘರ್ವಾಲ್ ಹಾಗೂ ಕುಮೌನ್ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ಇಲ್ಲಿ ಭಾರೀ ವಾಹನ ಸಂಚಾರವಿದ್ದು ಪರ್ಯಾಯ ಸಂಚಾರ ವ್ಯವಸ್ಥೆ ಸಾಧ್ಯವಿಲ್ಲವೆಂದು ಅವರು ಹೇಳುತ್ತಾರೆ. ಮೇಲಾಗಿ ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಕೈಗಾರಿಕೆಗಳೂ ಇವೆ.

ಆದರೆ ಸಚಿವೆಗೆ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲ. "ವಾರ್ಷಿಕ ಕನ್ವರ್ ಮೇಳಕ್ಕಾಗಿ ಪೊಲೀಸರು ವಾಹನ ಸಂಚಾರ ನಿಲ್ಲುಸುತ್ತಾರೆಂದಾದರೆ ಈ ರ್ಯಾಲಿಗೇಕಿಲ್ಲ ?'' ಎಂದು ಆಕೆ ಪ್ರಶ್ನಿಸುತ್ತಾರೆ. "ಅವರು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲೇಬೇಕು. ಆದರೆ ಅವರು ತಮ್ಮ ಕೆಲಸದ  ಒತ್ತಡವನ್ನು ಕಡಿಮೆ ಮಾಡುವುದರಲ್ಲಷ್ಟೇ ಆಸಕ್ತರಾಗಿದ್ದಾರೆ'' ಎಂದು ಆರ್ಯ ಹೇಳಿದರಲ್ಲದೆ ರ್ಯಾಲಿಯಲ್ಲಿ ಭಾಗವಹಿಸುವವರು ಸಂಚಾರ ನಿಯಮಗಳನ್ನು ಪಾಲಿಸಲಿದ್ದಾರೆ ಎಂದು ಹೇಳಿದರು.

ರ‍್ಯಾಲಿಯಲ್ಲಿ ಸುಮಾರು 500 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.ರ‍್ಯಾಲಿಯನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಉದ್ಘಾಟಿಸಲಿದ್ದಾರಾದರೆ, ಅದರ ಅಂತ್ಯದ ವೇಳೆಗೆ ಕೇಂದ್ರ ಮಹಿಳಾ ಸಬಲೀಕರಣ ಖಾತೆಯ ಸಚಿವ ಮೇನಕಾ ಗಾಂಧಿ ಹರಿದ್ವಾರದ ಹರ್ ಕಿ ಪೌರಿ ಎಂಬಲ್ಲಿ ಉಪಸ್ಥಿತರಿರಲಿದ್ದಾರೆ.
ಉನ್ನತ ಪ್ರಾಧಿಕಾರಗಳ ಆದೇಶದಂತೆ ರ‍್ಯಾಲಿಗೆ ಏರ್ಪಾಟು ಮಾಡಲಾಗುವುದು ಎಂದು ಡೆಹ್ರಾಡೂನ್ ಎಸ್ಪಿ ಧೀರೇಂದ್ರ ಗುಂಜ್ಯಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News