ಗೌರಿ ಲಂಕೇಶ್ ಹತ್ಯೆ ಬಗ್ಗೆ ಮೋದಿ ಮೌನವನ್ನು ಪ್ರಶ್ನಿಸಿದ ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ

Update: 2017-09-09 10:29 GMT

ಬೆಂಗಳೂರು, ಸೆ.9: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಿರುವ ದಿವ್ಯ ಮೌನವನ್ನು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬಲವಾಗಿ ಖಂಡಿಸಿದೆ. ಮೋದಿ ಆಕೆಯ ಕೊಲೆಯನ್ನು ಖಂಡಿಸಿ ಹಿಂದೂ ತೀವ್ರವಾದಿಗಳ ವಿರೋಧಿಗಳು ಎದುರಿಸುತ್ತಿರುವ ಬೆದರಿಕೆಗಳನ್ನೂ ಟೀಕಿಸದೇ ಇದ್ದಲ್ಲಿ ಭಾರತದ ಪಾಲಿಗೆ ಕರಾಳ ದಿನಗಳು ಕಾದಿವೆ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಎಚ್ಚರಿಸಲಾಗಿದೆ.

ಪ್ರಧಾನಿಯು ಗೌರಿ ಹತ್ಯೆಯನ್ನು ಟೀಕಿಸದೇ ಇದ್ದಲ್ಲಿ ಹೆಚ್ಚಿನ ಟೀಕಾಕಾರರು ಸದಾ ಭಯದ ವಾತಾವರಣದಲ್ಲಿಯೇ ಇರುವಂತಾಗುವುದಲ್ಲದೆ ಭಾರತದ ಪ್ರಜಾಪ್ರಭುತ್ವ ಕರಾಳ ದಿನಗಳನ್ನು ಕಾಣಲಿದೆ ಎಂದು ‘ದಿ ಮರ್ಡರ್ ಆಫ್ ಎನ್ ಇಂಡಿಯನ್ ಜರ್ನಲಿಸ್ಟ್’ ಎಂಬ ಶೀರ್ಷಿಕೆಯ ಈ ಸಂಪಾದಕೀಯದಲ್ಲಿ ಪತ್ರಿಕೆಯು ಬರೆದಿದೆ.

‘‘ಭಾರತದಲ್ಲಿ ಬಲಪಂಥೀಯ ಬೆಂಬಲಿಗರು ಜಾತ್ಯತೀತರನ್ನು ಬೆದರಿಸುವ ಮೂಲಕ ಇಂತಹ ವಾತಾವರಣ ಬೆಳೆಯಲು ಮೋದಿ ಅನುಕೂಲ ಕಲ್ಪಿಸಿದ್ದಾರೆ’’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಪ್ರಧಾನಿ ಮೋದಿಯ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ಇಂತಹ ಕಠಿಣ ನಿಲುವು ತಾಳಿರುವುದು ಇದೇ ಮೊದಲಲ್ಲ. ಈ ಹಿಂದೆ ‘ಮೋದೀಸ್ ಪೆರಿಲಸ್ ಎಂಬ್ರೇಸ್ ಆಫ್ ಹಿಂದೂ ಎಕ್ಸ್‌ಟ್ರೀಮಿಸ್ಟ್ಸ್’ ಎಂಬ ಶೀರ್ಷಿಕೆಯ ಸಂಪಾದಕೀಯವನ್ನು ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾಗ ನ್ಯೂಯಾರ್ಕ್ ಟೈಮ್ಸ್ ಬರೆದಿದ್ದರೆ ಅದನ್ನು ಇಲ್ಲಿನ ವಿದೇಶಾಂಗ ಸಚಿವಾಲಯ ಕಟುವಾಗಿ ಟೀಕಿಸಿ ಪ್ರಶ್ನಾರ್ಹ ಎಂದು ಬಣ್ಣಿಸಿತ್ತು. ‘‘ಮೋದಿಯ ಕನಸಿನ ಭೂಮಿ ಭಾರತೀಯ ಅಲ್ಪಸಂಖ್ಯಾತರಿಗೆ ದುಃಸ್ವಪ್ನವಾಗಿ ಪರಿವರ್ತನೆಯಾಗಿದೆ’’ ಎಂದು ಆ ಸಂಪಾದಕೀಯದಲ್ಲಿ ತೀಕ್ಷ್ಣವಾಗಿ ಬರೆಯಲಾಗಿತ್ತು.
ಎನ್‌ಡಿಟಿವಿ ಮೇಲೆ ಸಿಬಿಐ ದಾಳಿಗಳಾದಾಗಲೂ ಪತ್ರಿಕೆ ಸಂಪಾದಕೀಯವೊಂದನ್ನು ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News