ಮೇಲ್ಮನೆ ಸದಸ್ಯರ ಜತೆ ಚರ್ಚಿಸಿ,ಶಿಕ್ಷಕರ ಸಮಸ್ಯೆ ಪರಿಹರಿಸಿ: ಕುಮಾರಸ್ವಾಮಿ

Update: 2017-09-09 12:40 GMT

ಬೆಂಗಳೂರು, ಸೆ. 9: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿರುವ ವಿಧಾನ ಪರಿಷತ್ ಸದಸ್ಯರನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದು ಸಮಾಲೋಚನೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಬಳಿಕ ಧರಣಿನಿತರ ಮೇಲ್ಮನೆ ಸದಸ್ಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಬಳಿಕ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸೆ.15ಕ್ಕೆ ಸಭೆ ಕರೆಯುವುದಾಗಿ ಹೇಳಿರುವುದು ಬೇಜವಾಬ್ದಾರಿ ಮತ್ತು ಉದ್ಧಟತನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರು ಬೀದಿಗೆ ಬಂದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆಂಬ ಮೇಲ್ಮನೆ ಸದಸ್ಯರು ಪಕ್ಷಾತೀತ ಹೋರಾಟ ನಡೆಸುತ್ತಿದ್ದು, ರಾಜ್ಯ ಸರಕಾರ ಕೂಡಲೇ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಆದರೆ, ಸರಕಾರ ಆ ನಿಟ್ಟಿನಲ್ಲಿ ಮುಂದಾಗದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಆಶಾ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುವವರೆಗೂ ರಾಜ್ಯ ಸರಕಾರ ಏನು ಮಾಡುತ್ತಿರುತ್ತದೆ. ಅವರು ಹೋರಾಟಕ್ಕೆ ಅಣಿಯಾಗುವ ಮೂದಲೇ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕಿತ್ತು ಎಂದ ಅವರು, ರಾಜ್ಯ ಸರಕಾರ, ತಕ್ಷಣವೇ ಸಭೆ ಕರೆದು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ, ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯರಾದ ಮರಿತಿಬ್ಬೇಗೌಡ, ಪುಟ್ಟಣ್ಣ, ಗಣೇಶ ಕಾರ್ಣಿಕ್, ಶ್ರೀಕಂಠೇಗೌಡ, ಅರುಣ್ ಶಹಾಪುರ, ರಮೇಶ್‌ಬಾಬು, ಶರಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News