ಫ್ಯಾನ್ ಗಾಳಿಯನ್ನು ಬಳಸಿ ಚಂಡಮಾರುತವನ್ನು ತಡೆಯಲು ಮುಂದಾದ ಜನತೆ!

Update: 2017-09-09 14:49 GMT

ಹೊಸದಿಲ್ಲಿ, ಸೆ.9: ಅಮೆರಿಕದ ಹಲವೆಡೆ ‘ಇರ್ಮಾ’ ಚಂಡಮಾರುತದ ಅಬ್ಬರ ತೀವ್ರವಾಗುತ್ತಿರುವ ನಡುವೆ ಜನರು ಪರಸ್ಪರ ಸಹಾಯ ಮಾಡುತ್ತಿರುವ, ಒಬ್ಬರಿಗೊಬ್ಬರು ನೆರವಾಗುತ್ತಿರುವುದು ಸುದ್ದಿಯಾಗುತ್ತಿದೆ.

ಆದರೆ ಕುತೂಹಲಕಾರಿ ವಿಷಯವೆಂದರೆ ಸುಮಾರು 60 ಸಾವಿರ ಮಂದಿ ಫ್ಯಾನ್ ಗಳ ಗಾಳಿಯ ಮೂಲಕ ಚಂಡಮಾರುತವನ್ನು ತಡೆಯಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ರವಿವಾರ ಫ್ಲೋರಿಡಾಕ್ಕೆ ‘ಇರ್ಮಾ’ ಅಪ್ಪಳಿಸಲಿದೆ ಎನ್ನುವ ಮಾಹಿತಿಯ ನಂತರ  ಫೇಸ್ಬುಕ್ ಮೂಲಕ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರ ಮಂದಿ ಭಾಗವಹಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ‘ಚಂಡಮಾರುತವನ್ನು ತಡೆಯಲು ಎಲ್ಲರೂ ಫ್ಯಾನ್ ಗಳ ಗಾಳಿಯನ್ನು ಹಾಯಿಸಿ’ ಎನ್ನುವ ಘೋಷಣೆಯೊಂದನ್ನು ಹಾಕಲಾಗಿದೆ.

ಸೆಪ್ಟೆಂಬರ್ 13ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇತರ 45 ಸಾವಿರ ಮಂದಿ ಭಾಗವಹಿಸಲು ಆಸಕ್ತಿ ವ್ಯಕ್ತಪಡಿದ್ದಾರೆ.

“ಎಲ್ಲರೂ ತಮ್ಮಲ್ಲಿರುವ ಫ್ಯಾನ್ ಗಳನ್ನು ಹೊರಗೆ ತೆಗೆದುಕೊಂಡು ಬಂದು ‘ಇರ್ಮಾ’ ಚಂಡಮಾರುತದ ಕಡೆಗೆ ತೋರಿಸಿ. ಆ ಮೂಲಕ ಚಂಡಮಾರುತವನ್ನು ತಡೆಯಿರಿ. ಬ್ಲೋ ಗನ್ ಇರುವ ಏರ್ ಕಂಪ್ರೆಶರ್ ಇದ್ದರೆ ಇನ್ನೂ ಉತ್ತಮ. ಕ್ರಿಯಾಶೀಲರಾಗಿ. ಬದಲಾಗುವ ಇರ್ಮಾದ ಪಥದಂತೆ ದಿನಾಂಕ, ಸಮಯ ಹಾಗೂ ವಿಷಯವೂ ಬದಲಾಗಲಿದೆ” ಎಂದು ಈ ಕಾರ್ಯಕ್ರಮದ ಪೇಜ್ ನಲ್ಲಿ ಹೇಳಲಾಗಿದೆ.

ಈ ಕಾರ್ಯಕ್ರಮವನ್ನು ಸ್ಟನಾಲ್ಯಾಂಡ್ ಎಂಬಾತ ಹುಟ್ಟುಹಾಕಿದ್ದು, ಇದು ಕಾರ್ಯರೂಪಕ್ಕೆ ಬರಲಿದೆಯೇ ಅಥವಾ ಇದು ಸಾಧ್ಯವೇ ಎನ್ನುವ ಅನುಮಾನವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಜನರು ಮನೆಯಲ್ಲಿ ಬಳಸುವ ಫ್ಯಾನ್ ಗಳನ್ನು, ಇಂಡಸ್ಟ್ರಿಯಲ್ ಫ್ಯಾನ್ ಗಳನ್ನು ಅಲ್ಲದೆ ಹೇರ್ ಡ್ರೈಯರ್ ಗಳನ್ನು ಹಿಡಿದುಕೊಂಡಿರುವ ಫೊಟೊಗಳು ವೈರಲ್ ಆಗುತ್ತಿದೆ.

ಕ್ಯೂಬಾದ ಉತ್ತರ ಕರಾವಳಿಯ ಭಾಗಕ್ಕೆ ಶನಿವಾರ ಅಪ್ಪಳಿಸಿರುವ ‘ಇರ್ಮಾ’ ರವಿವಾರ ಫ್ಲೋರಿಡಾಕ್ಕೆ ಅಪ್ಪಳಿಸಲಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News