×
Ad

ಕಾಶ್ಮೀರಿಗಳನ್ನು `ಆಕ್ರಮಿತ ಜನ'ರೆಂದು ಉಲ್ಲೇಖಿಸಿದ ಅಮೆರಿಕ ವಿವಿ ಪ್ರತಿಭಟನಾಕಾರರು

Update: 2024-05-03 21:28 IST

PC : NDTV

ವಾಷಿಂಗ್ಟನ್: ಫೆಲೆಸ್ತೀನೀಯರನ್ನು ಬೆಂಬಲಿಸಿ ಅಮೆರಿಕದಾದ್ಯಂತದ ವಿವಿಗಳ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿರುವಂತೆಯೇ, ನ್ಯೂಜೆರ್ಸಿ ರಾಜ್ಯದ ರುಟ್ಗರ್ಸ್ ವಿವಿಯ ವಿದ್ಯಾರ್ಥಿಗಳು ಆಡಳಿತ ವರ್ಗದವರಿಗೆ ಸಲ್ಲಿಸಿರುವ 10 ಅಂಶಗಳ ಬೇಡಿಕೆ ಪಟ್ಟಿಯಲ್ಲಿ ಕಾಶ್ಮೀರಿಗಳನ್ನು `ಆಕ್ರಮಿತ ಜನ'ರೆಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಗಾಝಾ ಯುದ್ಧವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರುಟ್ಗರ್ಸ್ ವಿವಿ ವಿದ್ಯಾರ್ಥಿಗಳು ವಿವಿ ಆಡಳಿತ ವರ್ಗಕ್ಕೆ 10 ಅಂಶಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಒಂದು ಬೇಡಿಕೆ `ರುಟ್ಗರ್ಸ್ ವಿವಿಯ ಅಧೀನದಲ್ಲಿರುವ ಎಲ್ಲಾ ಸಂಸ್ಥೆಗಳ ಕ್ಯಾಂಪಸ್‍ಗಳಲ್ಲಿ ಅಂತರಾಷ್ಟ್ರೀಯ ಧ್ವಜಗಳ ಜತೆಗೆ ಆಕ್ರಮಿತ ಜನರ (ಫೆಲೆಸ್ತೀನಿಯನ್ನರು, ಕುಡ್ರ್ಸ್ ಮತ್ತು ಕಾಶ್ಮೀರಿಗಳು ಸೇರಿದಂತೆ) ಧ್ವಜಗಳನ್ನು ಪ್ರದರ್ಶಿಸಬೇಕು' ಎಂಬುದಾಗಿದೆ ಎಂದು ವಿವಿಯ ಅಸೋಸಿಯೇಟ್ ಪ್ರೊಫೆಸರ್ ಆಡ್ರೆ ಟುಶ್ಕೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬೇಡಿಕೆಗೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ ` ಕುಲಪತಿಗಳ ಕಚೇರಿಯು ವಿವಿ ಕ್ಯಾಂಪಸ್‍ನಾದ್ಯಂತ ಪ್ರದರ್ಶಿಸುವ ಧ್ವಜಗಳ ಬಗ್ಗೆ ನಿರ್ಧರಿಸುತ್ತದೆ ಮತ್ತು ಶೈಕ್ಷಣಿ ಮತ್ತು ಇತರ ಕ್ಷೇತ್ರಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ' ಎಂದು ಪ್ರಕಟಣೆ ನೀಡಿದೆ.

ಪ್ರತಿಭಟನಾ ನಿರತ ವಿದ್ಯಾರ್ಥಿಗಳ 10 ಬೇಡಿಕೆಗಳಲ್ಲಿ 8ನ್ನು ಪರಿಶೀಲಿಸಲು ಆಡಳಿತ ಮಂಡಳಿ ಸಮ್ಮತಿಸಿದ್ದರಿಂದ ವಿದ್ಯಾರ್ಥಿಗಳು ವಿವಿ ಕ್ಯಾಂಪಸ್‍ನಲ್ಲಿ ರಚಿಸಿರುವ ಪ್ರತಿಭಟನಾ ಟೆಂಟ್ ಅನ್ನು ತೆಗೆಯಲು ಒಪ್ಪಿದ್ದಾರೆ. ಇಸ್ರೇಲ್‍ನ ಟೆಲ್‍ಅವೀವ್ ವಿವಿಯೊಂದಿಗಿನ ಶೈಕ್ಷಣಿಕ ಸಂಬಂಧವನ್ನು ರದ್ದುಗೊಳಿಸಬೇಕು ಮತ್ತು ಇಸ್ರೇಲ್ ಜತೆ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳಿಂದ ದೂರ ಇರಬೇಕು ಎಂದು ಆಗ್ರಹಿಸಿ ರುಟ್ಗರ್ಸ್ ವಿವಿಯಲ್ಲಿ ಎಪ್ರಿಲ್ 29ರಿಂದ ಪ್ರತಿಭಟನೆ ಆರಂಭಗೊಂಡಿದೆ.

ವಿದ್ಯಾರ್ಥಿಗಳ ಬಹುತೇಕ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಘೋಷಿಸಿದ್ದರೂ, ಗುರುವಾರ ಬೆಳಿಗ್ಗೆ ಮತ್ತೆ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಆದ್ದರಿಂದ ಅಂತಿಮ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಿಗದಿತ 28 ಪರೀಕ್ಷೆಗಳನ್ನು ಮುಂದೂಡಲಾಗಿದ್ದು 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ, ಅಂತಿಮ ಪರೀಕ್ಷೆಗಳ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದೆ.

ಭಾರತದ ಪ್ರತಿಕ್ರಿಯೆ

ಅಮೆರಿಕದ ವಿವಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ಕಾಶ್ಮೀರದ ಬಗ್ಗೆ ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ ` ಪ್ರತಿಯೊಂದು ಪ್ರಜಾಪ್ರಭುತ್ವದಲ್ಲೂ ಅಭಿವ್ಯಕ್ತಿಯ ಸ್ವಾತಂತ್ರ್ಯ, ಜವಾಬ್ದಾರಿಯ ಪ್ರಜ್ಞೆ ಮತ್ತು ಸಾರ್ವಜನಿಕ ಸುರಕ್ಷತೆಯ ನಡುವೆ ಸರಿಯಾದ ಸಮತೋಲನ ಇರಬೇಕು. ನಿರ್ದಿಷ್ಟವಾಗಿ ಪ್ರಜಾಪ್ರಭುತ್ವಗಳು ಇತರ ಸಹವರ್ತಿ ಪ್ರಜಾಪ್ರಭುತ್ವಗಳಿಗೆ ಸಂಬಂಧಿಸಿದಂತೆ ಈ ತಿಳುವಳಿಕೆಯನ್ನು ಪ್ರದರ್ಶಿಸಬೇಕು' ಎಂದಿದೆ.

` ಏನೇ ಇರಲಿ, ವಿದೇಶದಲ್ಲಿ ಹೇಳುವುದನ್ನು ಆಧರಿಸಿ ಅಲ್ಲ, ನಾವು ಮನೆಯಲ್ಲಿ ಏನು ಮಾಡುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಬಗ್ಗೆ ನಿರ್ಣಯಿಸಲಾಗುತ್ತದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News