ಬ್ಲೂವೇಲ್ ಚಾಲೆಂಜ್ ಗೇಮ್ ಪ್ರಕರಣ: ಸಾವಿನಿಂದ ಪಾರಾದ ವಿದ್ಯಾರ್ಥಿ

Update: 2017-09-09 16:16 GMT

ಬೆಂಗಳೂರು, ಸೆ.9: ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ರಶ್ಯಾ ಮೂಲದ ಅಪಾಯಕಾರಿ ಆನ್‌ಲೈನ್ ‘ಬ್ಲೂ ವೇಲ್ ಚಾಲೆಂಜ್’ ಗೇಮ್ ಪ್ರಕರಣದಲ್ಲಿ ನಗರದ ವಿದ್ಯಾರ್ಥಿಯೊಬ್ಬ ಸಿಲುಕಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬ್ಲೂವೇಲ್ ಗೇಮ್‌ಗೆ ಒಳಗಾಗಿದ್ದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಯೊಬ್ಬ ಇನ್ನೇನು ಆತ್ಮಹತ್ಯೆಗೆ ಮುಂದಾಗಬೇಕು ಅನ್ನುವಷ್ಟರಲ್ಲಿ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ.

ಪ್ರಕರಣದ ವಿವರ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಈ ಅಪಾಯಕಾರಿ ಬ್ಲೂ ವೇಲ್ ಗೇಮ್‌ನ ಅಂತಿಮ ಹಂತಕ್ಕೆ ತಲುಪಿ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ, ಈ ಹಂತದಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಭಯವಾಗಿ ವಾಪಸ್ ಬಂದಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿದ್ಯಾರ್ಥಿ ತನ್ನ ವಾಟ್ಸ್ ಆಪ್ ಸ್ಟೇಟಸ್‌ನಲ್ಲಿ ಕೂಡ ಬ್ಲೂವೇಲ್ ಅಂತ ಹಾಕಿಕೊಂಡಿದ್ದ. ಇದರಿಂದ ಅನುಮಾನಗೊಂಡ ಸ್ನೇಹಿತರು ಉಪನ್ಯಾಸಕರಿಗೆ ಮಾಹಿತಿ ನೀಡಿದ್ದರು. ಬಳಿಕ ಉಪನ್ಯಾಸಕರಿಂದ ವಿಷಯ ಪಾಲಕರ ಗಮನಕ್ಕೆ ಬಂದಿದೆ. ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ಆಟದ ಮೊದಲ ಹಂತದಲ್ಲಿ ಹರಿತವಾದ ವಸ್ತುವಿನಿಂದ ಕೈ ಕುಯ್ದುಕೊಂಡಿದ್ದ. ಎರಡನೆ ಹಂತದಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಹಾರರ್ ಸಿನೆಮಾ ನೋಡಿದ್ದ. ಅಂತಿಮ ಹಂತದಲ್ಲಿ ಬಹುಮಹಡಿ ಕಟ್ಟಡವೇರಿ ಜೋರಾಗಿ ಕಿರುಚುತ್ತಾ ಜಿಗಿಯಬೇಕಿತ್ತು. ಆದರೆ, ಧೈರ್ಯ ಸಾಲದೆ ವಾಪಸಾಗಿದ್ದ ಎನ್ನಲಾಗಿದೆ.

ವಿದ್ಯಾರ್ಥಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News