ಮ್ಯಾನ್ಮಾರ್‌ನಲ್ಲಿ ನಿಲ್ಲದ ಹಿಂಸಾಚಾರ: ರೋಹಿಂಗ್ಯನ್ನರ ಹಲವು ಹಳ್ಳಿಗಳಿಗೆ ಬೆಂಕಿ

Update: 2017-09-09 16:57 GMT

ಯಾಂಗೂನ್,ಸೆ.9: ರಾಖ್ನೆ ಪ್ರಾಂತದಲ್ಲಿ ಮ್ಯಾನ್ಮಾರ್‌ ಸೇನೆ ಹಾಗೂ ಬೌದ್ಧ ತೀವ್ರಗಾಮಿಗಳು ಭೀಕರ ಹಿಂಸಾಚಾರ ನಡೆಸಿದ ಬಳಿಕ ಅಲ್ಲಿಂದ ಪರಾರಿಯಾದ ಸಾವಿರಾರು ರೋಹಿಂಗ್ಯನ್ನರು ಆಶ್ರಯ ಪಡೆದುಕೊಂಡಿರುವ ವಾಯುವ್ಯ ಮ್ಯಾನ್ಮಾರ್‌ನ ಹಳ್ಳಿಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

 ಸಮ್ಮಿಶ್ರ ಜನಾಂಗೀಯ ಪ್ರದೇಶವಾದ ರಾಥೆಡಾಂಗ್ ಪ್ರಾಂತದಲ್ಲಿ ರೋಹಿಂಗ್ಯಾಗಳ ಬಾಹುಳ್ಯವಿರುವ ಎಂಟು ಹಳ್ಳಿಗಳಿಗೆ ಶುಕ್ರವಾರ ಬೆಂಕಿ ಹಚ್ಚಲಾಗಿದೆ. ಈ ಹಿಂಸಾಚಾರದಿಂದಾಗಿ ಈ ಪ್ರಾಂತದ ಅಲ್ಪಸಂಖ್ಯಾತ ರೋಹಿಂಗ್ಯನ್ನರು ಕೂಡಾ ನೆರೆಯ ರಾಷ್ಟ್ರವಾದ ಬಾಂಗ್ಲಾಕ್ಕೆ ಪಲಾಯನಗೈಯುವ ಆತಂಕ ವ್ಯಕ್ತವಾಗಿದೆ. ಮ್ಯಾನ್ಮಾರ್ ಸೇನೆ ಹಾಗೂ ಬೌದ್ಧತೀವ್ರಗಾಮಿಗಳು ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.

 ರಾಥೆಡಾಂಗ್‌ನಲ್ಲಿರುವ ನಾಲ್ಕು ರೋಹಿಂಗ್ಯಾ ವಸಾಹತುಗಳಿಗೆ ಶನಿವಾರ ಬೆಂಕಿಹಚ್ಚಲಾಗಿದ್ದು, ಇದರೊಂದಿಗೆ ಈ ಪ್ರದೇಶದಲ್ಲಿರುವ ಮುಸ್ಲಿಂ ಬಾಹುಳ್ಯದ ಎಲ್ಲಾ ಹಳ್ಳಿಗಳು ನಾಶವಾಗುವ ಸಾಧ್ಯತೆಯಿದೆಯೆಂದು ಮೂಲಗಳು ಕಳವಳ ವ್ಯಕ್ತಪಡಿಸಿವೆ.

‘‘ನಿಧಾನವಾಗಿ ಒಂದರ ನಂತರ ಇನ್ನೊಂದರಂತೆ ರೋಹಿಂಗ್ಯನ್ನರಿರುವ ಗ್ರಾಮಗಳನ್ನು ಸುಟ್ಟುಹಾಕಲಾಗುತ್ತಿದೆ. ಈಗಾಗಲೇ ರಾಥೆಡಾಂಗ್‌ನಿಂದ ರೋಹಿಂಗ್ಯನ್ನರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲಾಗಿದೆಯೆಂಬಂತೆ ಭಾಸವಾಗುತ್ತಿದೆಯೆಂದು ರೋಹಿಂಗ್ಯನ್ನರ ಮೇಲಿನ ದೌರ್ಜನ್ಯದ ಕುರಿತ ಕಣ್ಗಾವಲು ಸಂಸ್ಥೆ ಅರಾಕಾನ್ ಪ್ರಾಜೆಕ್ಟ್ ವರದಿ ಮಾಡಿದೆ.

‘‘ರಾಥೆಡಾಂಗ್‌ನಲ್ಲಿ 11 ಮುಸ್ಲಿಂ ಬಾಹುಳ್ಯದ ಗ್ರಾಮಗಳಿದ್ದವು. ಆದರೆ ಕಳೆದ ಎರಡು ದಿನಗಳ ಬಳಿಕ ಅವು ಸಂಪೂರ್ಣವಾಗಿ ನಾಶವಾಗಿವೆ’’ ಎಂದು ಅದು ಹೇಳಿದೆ.

 ನಾಶಗೊಂಡ ಹಳ್ಳಿಗಳನ್ನು ಪ್ರವೇಶಿಸಲು ಭದ್ರತಾಪಡೆಗಳು ಪತ್ರಕರ್ತರಿಗೆ ಅನುಮತಿ ನೀಡುತ್ತಿಲ್ಲವೆಂದು ಅರಾಕಾನ್ ಪ್ರಾಜೆಕ್ಟ್ ಆರೋಪಿಸಿದೆ.

 ಎರಡು ವಾರಗಳ ಹಿಂದೆ ರಾಖ್ನೆ ಪ್ರಾಂತದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಸುಮಾರು 2.90 ಲಕ್ಷ ರೋಹಿಂಗ್ಯನ್ನರು ಬಾಂಗ್ಲಾ ಗಡಿದಾಟಿದ್ದು, ಘೋರವಾದ  ಮಾನವೀಯ ಬಿಕ್ಕಟ್ಟು ಎದುರಾಗಿದೆಯೆಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News