ಬೆಂಗಳೂರು: ಪೊಲೀಸರ ಮೇಲೆ ದಾಳಿ ನಡೆಸಿದ ದರೋಡೆಕೋರರಿಗೆ ಗುಂಡೇಟು

Update: 2017-09-10 09:03 GMT
ಗುಂಡೇಟು ತಿಂದ ದರೋಡೆಕೋರರು

ಬೆಂಗಳೂರು, ಸೆ.10: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಇಬ್ಬರು ಸಿಬ್ಬಂದಿಗೆ ಚಾಕುವಿನಿಂದ ಇರಿದ ದರೋಡೆಕೋರರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ ಘಟನೆ ನಗರದ ಬೆಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳನ್ನು ಅಮರ್ ಮತ್ತು ಮುಝಮ್ಮಿಲ್ ಎಂದು ಗುರುತಿಸಲಾಗಿದೆ.

ನಾಲ್ವರು ದರೋಡೆಕೋರರು ತನ್ನಿಂದ ಮೊಬೈಲೊಂದನ್ನು ದೋಚಿದ್ದಾರೆ ಎಂದು ಆನಂದ್ ಎಂಬವರು ನಿನ್ನೆ ತಡರಾತ್ರಿ ಬೆಳಂದೂರು ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಕಾಬಂಧಿ ನಿರ್ಮಿಸಿ, ಪೊಲೀಸ್ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ವಿಶೇಷ ತಂಡವೊಂದನ್ನು ರಚಿಸಿದ್ದರು. ಇಂದು ಬೆಳಗ್ಗೆ ವಿಕ್ಟರ್ ಸೈಮನ್, ವರ್ತೂರು ಇನ್ಸ್ ಪೆಕ್ಟರ್ ಸುಧಾಕರ್ ಹಾಗೂ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ದರೋಡೆಕೋರರ ವಾಹನಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಈ ಸಂದರ್ಭ ಅಲ್ಲಿಗೆ ತೆರಳಿದ ಪೊಲೀಸರು ದರೋಡೆಕೋರರೊಂದಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಇದಕ್ಕೊಪ್ಪದ ದರೋಡೆಕೋರರು ಪೊಲೀಸರ ಮೇಲೆಯೇ ದಾಳಿ ನಡೆಸಿ, ಚಾಕುವಿನಿಂದ ಇಬ್ಬರು ಸಿಬ್ಬಂದಿಗೆ ಇರಿದಿದ್ದಾರೆ. ಆತ್ಮರಕ್ಷಣೆಗಾಗಿ ಸೈಮನ್ ದರೋಡೆಕೋರರಾದ ಅಮರ್ ಹಾಗೂ ಮುಝಮ್ಮಿಲ್ ನ ಕಾಲಿಗೆ ಗುಂಡಿಕ್ಕಿದ್ದಾರೆ ಎನ್ನಲಾಗಿದೆ.

ಗಾಯಗೊಂಡಿರುವ ಪೊಲೀಸ್ ಪೇದೆಗಳನ್ನು ಹಾಗೂ ದರೋಡೆಕೋರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಆನಂದ್ ಎಂಬವರು ಬೆಳಂದೂರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು. 2 ಬೈಕ್ ನಲ್ಲಿ ಬಂದ ನಾಲ್ವರು ಮೊಬೈಲ್ ದರೋಡೆ ಮಾಡಿದ್ದಾರೆ ಎಂದವರು ದೂರು ನೀಡಿದ್ದರು. ಅದರಂತೆ ಇಂದು ಪೊಲೀಸರು ಆರೋಪಿಗಳ ವಾಹನವನ್ನು ಗುರುತಿಸಿ ಅವರಿದ್ದಲ್ಲಿಗೆ ತೆರಳಿದ್ದಾರೆ. ಆದರೆ ಈ ಸಂದರ್ಭ ಆರೋಪಿಗಳು ಇಬ್ಬರು ಪೊಲೀಸರ ಮೇಲೆಯೇ ದಾಳಿ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ಆತ್ಮರಕ್ಷಣೆಗಾಗಿ ಇನ್ ಸ್ಪೆಕ್ಟರ್ ಸೈಮನ್ ಇಬ್ಬರ ಕಾಲಿಗೂ ಗುಂಡಿಕ್ಕಿದ್ದಾರೆ.

-ಅಬ್ದುಲ್ ಅಹದ್ , ಬೆಂಗಳೂರು ವೈಟ್ ಫೀಲ್ಡ್  ಪೊಲೀಸ್ ಉಪ ಆಯುಕ್ತ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News