ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೆ.12ರಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ: ಚಂಪಾ

Update: 2017-09-10 08:43 GMT

ಬೆಂಗಳೂರು, ಸೆ.10: ಪಿ.ಲಂಕೇಶ್‍ರವರ ವೈಚಾರಿಕ ಪರಂಪರೆಯನ್ನು ಅವರಿಗಿಂತಲೂ ಪ್ರಖರವಾಗಿ ಮುಂದುವರಿಸಿದವರು ಗೌರಿ ಲಂಕೇಶ್. ಅವರ ಹತ್ಯೆಯಾಗಿದೆ. ಇದು ಆತಂಕ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಹಿರಿಯ ಸಾಹಿತಿ ಚಂಪಾ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಒಡನಾಡಿಯ ಕೊಲೆಯಾಗಿದೆ. ಯಾವ ಸ್ವಾತಂತ್ರ್ಯ, ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗಾಗಿ ಗೌರಿ ಮುಂದಾದರೋ ಅದುವೇ ಅವರ ಬಲಿಗೆ ಕಾರಣವಾಗಿದೆ. ಈಗ ಪ್ರಜಾತಂತ್ರದ ರಕ್ಷಣೆಗಾಗಿ ಏನು ಮಾಡುವುದು? ಯಾರು ಮಾಡುವುದು. ಸರ್ಕಾರ ನಿಷ್ಕ್ರಿಯವಾಗಿದೆ. ಈ ವರ್ತಮಾನವನ್ನು ಅರ್ಥ ಮಾಡಿಕೊಂಡು ಮುಂದೇನು ಮಾಡಬೇಕು ಎಂಬುದರ ಆತ್ಮಾವಲೋಕನದ ಜೊತೆಗೆ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ಅದಕ್ಕಾಗಿ ಗೌರಿ ಲಂಕೇಶ್ ಹತ್ಯಾ ವಿರೋಧಿ ಹೋರಾಟ ವೇದಿಕೆಯನ್ನು ರೂಪಿಸಲಾಗಿದೆ. ಸೆ.12ರಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕವಿಗಳು, ಬರಹಗಾರರು, ಹೋರಾಟಗಾರರು, ಕಲಾವಿದರು, ಪತ್ರಕರ್ತರು ಮತ್ತು ಸಾಮಾನ್ಯ ಜನತೆ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭಾರತದ ಶಾಂತಿಯ ತೋಟದೊಳಗೆ ಕಾರಂಜಿ ಚಿಮ್ಮುತ್ತಿದ್ದೇವೆ. ತಾವೂ ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಚಂಪಾ ಮನವಿ ಮಾಡಿದರು.  

ಕೆ.ಮರಳಸಿದ್ದಪ್ಪನವರು ಮಾತನಾಡಿ, ಕಲಬುರ್ಗಿ, ಗೌರಿಯವರನ್ನು ಕೊಲ್ಲುವ ಉದ್ದೇಶ ಒಂದೇ. ಅದು ನೇರವಾಗಿ ಮಾತನಾಡುವವರನ್ನು ನಿಲ್ಲಿಸುವ ಫ್ಯಾಶಿಸ್ಟ್ ಮನೋಭಾವ. ಒಬ್ಬರೇ ಮಾತನಾಡುವುದು ಮತ್ತು ಉಳಿದವರು ಮಾತನಾಡುವುದನ್ನು ನಿಲ್ಲಿಸುವುದು ಅವರ ಉದ್ದೇಶ. ಗೌರಿಯವರ ತಂದೆ ಪಿ.ಲಂಕೇಶ್ ಇನ್ನು ಅಗ್ರಸ್ಸಿವ್ ಆಗಿ ಬರೆಯುತ್ತಿದ್ದರು ಆದರೆ ಅವರನ್ನು ಕೊಲ್ಲುವ ಪ್ರಯತ್ನ ಮಾಡಿರಲಿಲ್ಲ. ಇವತ್ತಿನ ಫ್ಯಾಶಿಸಂ ಕೊಲ್ಲುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಯಪಡಿಸುವ ತಂತ್ರವನ್ನು ವಿಫಲಗೊಳಿಸಿ ನಮ್ಮ ಮಾತನಾಡುವ ಸಂವಿಧಾನದ ಹಕ್ಕನ್ನು ಎತ್ತಿ ಹಿಡಿಯಲು ಸೆ.12ರಂದು ಒಂದಾಗುತ್ತೇವೆ ಎಂದರು.

ಭಯ ಹುಟ್ಟಿಸುವ ತಂತ್ರ ನಡೆಯುವುದಿಲ್ಲ. ಕೆಲವರು ನಮ್ಮನ್ನು ದೇಶದ್ರೋಹಿಗಳು ಅನ್ನುತ್ತಾರೆ. ಪಾಕಿಸ್ತಾನಕ್ಕೆ ಹೋಗಿ ಅನ್ನುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೊಳಕು ಮನಸ್ಸುಗಳು ವಿಜೃಂಭಿಸುತ್ತಿರುವುದು ತಲೆತಗ್ಗಿಸುವ ವಿಚಾರ. ಇಂತಹ ಹೀನಮನಸ್ಸುಗಳನ್ನು ಪ್ರಧಾನಿ ಫಾಲೋ ಮಾಡುವುದು ದೊಡ್ಡ ದುರಂತ ಎಂದರು.

ನಟ ಚೇತನ್ ಮಾತನಾಡಿ, ಗೌರಿ ಲಂಕೇಶ್ ನನಗೆ ಪರಿಚಯವಿದ್ದರು. ನಾನು ಅವರನ್ನು ಬಹಳ ಗೌರವಿಸುತ್ತಿದ್ದೆ ಮತ್ತು ಮುಂದಕ್ಕೂ ಹೆಚ್ಚು ಗೌರವಿಸುತ್ತೇನೆ. ಅವರು ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಗಳನ್ನು ಕಲಿಸಿದ್ದಾರೆ. ಅವರು ಶೋಷಿತರ ಪರವಾಗಿ ಲೇಖನ ಬರೆದು ಧ್ವನಿ ಎತ್ತಿದ್ದಾರೆ.  ಧಾರ್ಮಿಕ ಮೂಲಭೂತವಾದವನ್ನು ಖಂಡಿಸಿದ್ದಾರೆ.  ಸೌಹಾರ್ದಕ್ಕಾಗಿ ಶ್ರಮಿಸಿದ್ದಾರೆ ಎಂದರು. 

ಪ್ರಜಾಪ್ರಭುತ್ವವನ್ನು ನುಚ್ಚು ನೂರು ಮಾಡಲು ಹೊರಟವರು ಮೊದಲು ಗುರಿ ಮಾಡುವುದು ಹೋರಾಟಗಾರರನ್ನು ಮತ್ತು ಪತ್ರಕರ್ತರನ್ನು. ಗೌರಿ ಲಂಕೇಶ್ ಇವೆರಡೂ ಆಗಿದ್ದರು. ಆದರೆ ಇದನ್ನು ಮುಂಗಾಣುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಅವರಿಗೆ ಈಗ ಬುದ್ದಿ ಬಂದಿದ್ದು ಪ್ರಗತಿಪರರಿಗೆ ರಕ್ಷಣೆ ಒದಗಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಗೌರಿ ಲಂಕೇಶ್ ಅವರ ಹಾದಿಯಲ್ಲಿ ಮುನ್ನಡೆಯುತ್ತೇವೆ. ನಾವು ಅಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರು. ಹೊಡೆಯುವರಲ್ಲಿ ಶಕ್ತಿಯಿರುವುದಿಲ್ಲ, ಬದಲಿಗೆ ಹೊಡೆಸಿಕೊಳ್ಳುವವರಲ್ಲಿ ಶಕ್ತಿ ಇರುತ್ತದೆ.  ಗನ್ ಗಿಂತ ಪೆನ್ ಶಕ್ತಿ ದೊಡ್ಡದು ಮತ್ತು ಬುಲೆಟ್ ಗಿಂತ ಬ್ಯಾಲೆಟ್ ಮುಖ್ಯ ಎಂದು ಜನ ನಂಬಿದ್ದಾರೆ. ಅದನ್ನು ನಾವು ಎತ್ತಿ ಹಿಡಿಯುತ್ತೇವೆ ಎಂದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ಸೆ.12ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಮಾವೇಶ ನಡೆಸುತ್ತಿದ್ದೇವೆ. ಇದನ್ನು ಪ್ರತಿರೋಧ ಸಮಾವೇಶ ಎಂದು ಕರೆದಿದ್ದೇವೆ. ಇದರಲ್ಲಿ ವಿವಿಧ ನಾಯಕರುಗಳಾದ ಜಿ.ಎನ್.ಗಣೇಶ್ ದೇವಿ, ಸೀತಾರಾಂ ಯೆಚೂರಿ, ಪಿ.ಸಾಯಿನಾಥ್, ಮೇಧಾ ಪಾಟ್ಕರ್, ಆನಂದ್ ಪಟವರ್ಧನ್, ತೀಸ್ತಾ ಸೆಟಲ್ವಾಡ್, ಯೋಗೆಂದ್ರ ಯಾದವ್, ಜಿಗ್ನೇಶ್ ಮೇವಾನಿ,  ರಾಕೇಶ್ ಶರ್ಮಾ ಇತರರು ಭಾಗವಹಿಸುತ್ತಿದ್ದಾರೆ ಎಂದರು.

ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಗೌರಿ ಲಂಕೇಶ್ ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಲು ಪ್ರಯತ್ನಿಸಿದವರು. ಕನ್ನಡಪರ ಮತ್ತು ಕಾರ್ಮಿಕ ಚಳವಳಿಯ ಜೊತೆ ಒಡನಾಟ ಇಟ್ಟುಕೊಂಡವರು. ಅವರು ಕರ್ನಾಟಕದಲ್ಲಿ ಹಲವಾರು ಸ್ವಾಮೀಜಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಹಾಗಾಗಿ ಸೆ.12ರಂದು ನೂರಾರು ಸ್ವಾಮೀಜಿಗಳು, ಕ್ರಿಶ್ಚಿಯನ್ ಪಾದ್ರಿಗಳು ಮತ್ತು ಮುಸ್ಲಿಂ ಮುಖಂಡರು ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಎನ್.ಮುನಿಸ್ವಾಮಿ ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News