ರಾಮಯ್ಯ, ಗೌರಿ ಲಂಕೇಶ್‌ಗೆ ಪೆರಿಯಾರ್ ಪ್ರಶಸ್ತಿ

Update: 2017-09-13 12:25 GMT
ಗೌರಿ ಲಂಕೇಶ್‌

ಬೆಂಗಳೂರು, ಸೆ. 13: ವಿಚಾರವಾದಿಗಳ ವೇದಿಕೆ ವತಿಯಿಂದ ವಿಚಾರವಾದಿ ಪೆರಿಯಾರ್‌ರ 138ನೆ ಜನ್ಮದಿನಾಚರಣೆ ಅಂಗವಾಗಿ 2017 ನೆ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಗೌರಿ ಲಂಕೇಶ್(ಮರಣಾ ನಂತರ)ಗೆ ಹಾಗೂ 2016 ನೆ ಸಾಲಿನ ಪ್ರಶಸ್ತಿಯನ್ನು ಕೋಟಿಗಾನಹಳ್ಳಿ ರಾಮಯ್ಯಗೆ ನೀಡಲಾಗುತ್ತಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಸರ್ದಾರ್ ಅಹ್ಮದ್ ಖುರೇಷಿ, ಬಂಡಾಯ ಬರಹಗಾರರಾದ ಕೋಟಿಗಾನಹಳ್ಳಿ ರಾಮಯ್ಯ ತಮ್ಮ ಜೀವನದುದ್ದಕ್ಕೂ ವೈಚಾರಿಕತೆ ಮೈಗೂಡಿಸಿಕೊಂಡು ಹಳ್ಳಿ ಜನರಲ್ಲಿ ಮೂಡಿರುವ ಮೌಢ್ಯದ ವಿರುದ್ಧ ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಸಾಮಾಜಿಕ ಕಾರ್ಯಕರ್ತೆಯಾಗಿ ಹಾಗೂ ಪೆರಿಯಾರ್ ವಿಚಾರಗಳನ್ನು ಮೈಗೂಡಿಸಿಕೊಂಡ ಪ್ರಖರ ಪತ್ರಕರ್ತೆಯಾಗಿ, ತಾನು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಿದ ಗೌರಿ ಲಂಕೇಶ್‌ಗೆ ಮರಣೋತ್ತರವಾಗಿ ಪೆರಿಯಾರ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.17 ರಂದು ಬೆಳಗ್ಗೆ 11.30ಕ್ಕೆ ನಗರದ ಕಾನಿಷ್ಕ ಹೊಟೇಲ್‌ನ ಬಾದಾಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿಂತಕ ಪ್ರೊ.ರವಿವರ್ಮಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ ಹಾಗೂ ಜ್ಞಾನಪ್ರಕಾಶ್ ಸ್ವಾಮೀಜಿ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೆ.ಮುಕುಡಪ್ಪ, ಪತ್ರಕರ್ತ ಅಗ್ನಿಶ್ರೀಧರ್, ಹುಲಿಕಲ್ ನಟರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಸಂಚಾಲಕರಾದ ಲೋಲಾಕ್ಷ, ವೈ.ಮರಿಸ್ವಾಮಿ, ಡಾ.ಜಿ.ಗೋವಿಂದಯ್ಯ, ಮುನಿ ಆಂಜನಪ್ಪ, ಅಣ್ಣಯ್ಯ, ಎಸ್.ನಾಗರತ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News