ಶ್ರೀಕಂಠದತ್ತ ಒಡೆಯರ್ ಹೆಸರಿನಲ್ಲಿ ನಕಲಿ ಒಪ್ಪಂದ:ಜ್ಯೋತಿಷಿ ಚಂದ್ರಶೇಖರ್ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್

Update: 2017-09-13 12:31 GMT

ಬೆಂಗಳೂರು, ಸೆ.13: ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ್ ಹೆಸರಿನಲ್ಲಿ ನಕಲಿ ಒಪ್ಪಂದ ಮಾಡಿದ ಆರೋಪದ ಮೇಲೆ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಸೇರಿದಂತೆ ಆರು ಮಂದಿ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ.

ನಗರದ ಅರಮನೆ ಮೈದಾನದ ಸುತ್ತ 150 ಜಾಹೀರಾತು ಫಲಕ ಹಾಕಲು ಪರವಾನಗಿ ಪಡೆದ ನಕಲಿ ಒಪ್ಪಂದ ಸೃಷ್ಟಿಸಿದ್ದರು. ಈ ಸಂಬಂಧ ಅರಮನೆ ಮೈದಾನ ನಿರ್ವಹಣೆ ಮುಖ್ಯಸ್ಥ ಪಾಂಡಿಯನ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ, ಮಧು ಆಚಾರ್ಯ, ಗಿರೀಶ್ ಕಾಮತ್, ಸಿ.ರಜನಿ ಭಟ್ ವಿರುದ್ಧ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದ್ದು, ಒಡೆಯರ್ ಬದುಕಿದ್ದ ವೇಳೆ 2012 ಜು.18ರಂದು 7.5 ಕೋಟಿ ರೂ. ನೀಡಿ ಒಪ್ಪಂದ ಮಾಡಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.

2013ರಲ್ಲಿ ಶ್ರೀಕಂಠದತ್ತ ಒಡೆಯರ್ ಅಕಾಲಿಕ ಮರಣ ಹೊಂದಿದ ಬಳಿಕ 2014 ಫೆಬ್ರವರಿ 2 ರಂದು ಆರೋಪಿಗಳು ರಾಣಿ ಪ್ರಮೋದಾದೇವಿ ಅವರನ್ನು ಭೇಟಿಯಾಗಿ ಉಳಿದ ದಾಖಲೆಗಳಿಗೆ ಸಹಿ ಹಾಕಲು ಕೇಳಿದ್ದರು. ಈ ವೇಳೆ ದಾಖಲೆ ಪತ್ರಗಳನ್ನು ತರುವಂತೆ ಹೇಳಿದ್ದ ರಾಣಿಗೆ ಆರೋಪಿಗಳು ನಕಲಿ ದಾಖಲೆಗಳನ್ನು ತೋರಿಸಿದ್ದರು ಎಂಬ ಆರೋಪವಿದೆ. ರಾಣಿ ದಾಖಲೆಗಳನ್ನು ನೀಡುವಂತೆ ಕೇಳಿದಾಗ ಆರೋಪಿಗಳು ಸ್ವತಃ ಕೋರ್ಟ್ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಎರಡು ಬಾರಿ ಪ್ರಮೋದಾದೇವಿ ಪರವಾಗಿ ತೀರ್ಪು ನೀಡಿತ್ತು.

ಅಲ್ಲದೇ, ಹೈಕೋರ್ಟ್ ತನಿಖೆ ನಡೆಸಿ ವರದಿ ನೀಡಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು. ಈ ವೇಳೆ ತಮ್ಮ ಅಸಲಿ ಬಣ್ಣ ಬಯಲಾಗುವ ಭಯದಿಂದ 2016ರಲ್ಲಿ ಆರೋಪಿಗಳು ತನಿಖೆಗೆ ವಿರಾಮ ತಂದಿದ್ದರು. ವಿರಾಮದ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News