ಒಂದೇ ರೀತಿಯ ಪಿಸ್ತೂಲಿನಿಂದ ಗೌರಿ, ಕಲ್ಬುರ್ಗಿ ಹತ್ಯೆ

Update: 2017-09-14 04:20 GMT

ಬೆಂಗಳೂರು, ಸೆ.14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಹಾಗೂ ಹಿರಿಯ ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಗೆ ಆಯುಧಗಳ ಬಳಕೆಯಲ್ಲಿ 80 ಶೇ. ಸಾಮ್ಯತೆ ಇರುವುದನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ಪತ್ತೆಹಚ್ಚಿದೆ.

ಎರಡೂ ಹತ್ಯೆ ಪ್ರಕರಣಗಳಲ್ಲಿ 7.65 ಎಂ.ಎಂ. ದೇಶೀ ನಿರ್ಮಿತ ಪಿಸ್ತೂಲ್ ಅನ್ನು ಬಳಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಆಯುಧಗಳ ಬಳಕೆಯಲ್ಲಿ 80 ಶೇ. ಸಾಮ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು ವರದಿಯಲ್ಲಿ ಉಲ್ಲೇಖಿಸಿದೆ.

ಕಲ್ಬುರ್ಗಿಯ ಹತ್ಯೆಯು 2015ರಲ್ಲಿ ಧಾರವಾಡದಲ್ಲಿರುವ ಅವರ ಮನೆಯಲ್ಲಿ ನಡೆದಿತ್ತು. ಅವರ ಮನೆಮಂದಿ ತಿಳಿಸಿರುವ ಪ್ರಕಾರ ಕಲ್ಬುರ್ಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಯಾರೋ ಬಾಗಿಲು ತಟ್ಟಿದ್ದರು. ಈ ವೇಳೆ ಬಾಗಿಲು ತೆರೆದ ಡಾ.ಕಲ್ಬುರ್ಗಿಯರ ಹಣೆಗೆ ಗುಂಡಿಕ್ಕಿ ದುಷ್ಕರ್ಮಿಗಳು ಅವರನ್ನು ಹತ್ಯೆಗೈದಿದ್ದರು.

ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಮಹತ್ವದ ಸುಳಿವು ಲಭಿಸಿರುವುದಾಗಿ ಗೃಹಸಚಿವ ರಾಮಲಿಂಗಾರೆಡ್ಡಿ ಬುಧವಾರ ತಿಳಿಸಿದ್ದರು. ಹತ್ಯೆ ಪ್ರಕರಣದ ಜವಾಬ್ದಾರಿ ವಹಿಸಿರುವ ಎಸ್.ಐ.ಟಿ.ಯು ತನಿಖೆಗೆ ಸಂಬಂಧಿಸಿ ಪ್ರಥಮ ಹಂತದ ವರದಿಯನ್ನು ಬುಧವಾರ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ವಿಶೇಷ ತನಿಖಾ ತಂಡ (ಸಿಟ್) ವರದಿಯಲ್ಲಿ ಉಲ್ಲೇಖಿಸಿರುವಂತೆ ಹಂತಕನು ಸೆ.5ರಂದು ಗೌರಿ ಲಂಕೇಶ್ ಮನೆ ಬಳಿ ಮೂರು ಬಾರಿ ಬಂದಿದ್ದ. ಉದ್ದ ತೋಳಿನ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಬೈಕಿನಲ್ಲಿ ಗೌರಿ ಮನೆ ಬಳಿ ಸುಳಿದಾಡಿರುವುದು ಎರಡು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News