ಹಲೀಮಾ ಯಾಕೂಬ್ ಬಗ್ಗೆ ನಿಮಗೇನು ಗೊತ್ತು ?

Update: 2017-09-15 16:31 GMT

# ಸಿಂಗಾಪುರದ ಪ್ರಪ್ರಥಮ ರಾಷ್ಟ್ರಾಧ್ಯಕ್ಷೆ 
# ಭಾರತೀಯ ಮೂಲದ ಮುಸ್ಲಿಮ್ ಮಹಿಳೆಯ ಯಶೋಗಾಥೆ 
# ಇಲ್ಲಿದೆ ಆಕೆಯ ಕುರಿತ 12 ಕುತೂಹಲಕಾರಿ ಮಾಹಿತಿಗಳು 

ಸಿಂಗಾಪುರ, ಸೆ. 15: ಸಿಂಗಾಪುರದ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ  ಹಲೀಮಾ ಯಾಕೂಬ್ ಬುಧವಾರ ಆಯ್ಕೆಯಾಗಿದ್ದಾರೆ. ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಅಗತ್ಯ ಅರ್ಹತೆ ಗಳಿಸಿದ ಏಕೈಕ ಅಭ್ಯರ್ಥಿಯಾಗಿ ಅವರು ಹೊರಹೊಮ್ಮಿದರು.

ಸಿಂಗಾಪುರ ಪಾರ್ಲಿಮೆಂಟ್ ಸ್ಪೀಕರ್ ಆಗಿದ್ದ  ಹಲೀಮಾ ಯಾಕೂಬ್ (62) ಹೆಸರು ಜನಜನಿತ. ಇವರು ದೇಶದ ಮೊತ್ತಮೊದಲ ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.

2016ರಲ್ಲಿ ಇವರಿಗೆ ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ, ಗೌರವ ಕಾನೂನು ಡಾಕ್ಟರೇಟ್ ನೀಡಿತು. ಪೀಪಲ್ಸ್ ಆ್ಯಕ್ಷನ್ ಪಾರ್ಟಿಯಲ್ಲಿ ಮೂರು ದಶಕಗಳ ಕಾಲ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಿತು. ಸಮುದಾಯ ಮತ್ತು ಎನ್‌ಯುಎಸ್‌ಗೆ ಗಣನೀಯ ಕೊಡುಗೆ ನೀಡಿದವರಿಗೆ ಸಲ್ಲಿಸುವ ಅತ್ಯುನ್ನತ ಗೌರವ ಇದಾಗಿದೆ. ಮಾಜಿ ಪ್ರಧಾನಿ ಲೀ ಕೌನ್ ಯಾವ್ ಹಾಗೂ ಗೊಹ್ ಚೊಕ್ ತಾಂಗ್ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಧ್ಯಕ್ಷರಾದ ಮೇಡಮ್  ಹಲೀಮಾ ಯಾಕೂಬ್ ಬಗ್ಗೆ ನಾವು ತಿಳಿದುಕೊಳ್ಳುವುದು ಅಗತ್ಯ.

ಅವರ ಬಗೆಗಿನ 12 ಕುತೂಹಲಕಾರಿ ಅಂಶಗಳು ಇಲ್ಲಿವೆ

1. ಸಿಂಗಾಪುರದ ಪಾರ್ಲಿಮೆಂಟ್ ಇತಿಹಾಸದಲ್ಲೇ ಇವರು ಮೊಟ್ಟಮೊದಲ ಮಹಿಳಾ ಸ್ಪೀಕರ್. 2013ರ ಜನವರಿ 14ರಂದು ಇವರು ಸಿಂಗಪುರದ 9ನೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು.

2. ಮನೆಯಿಂದ ಹೊರಹಾಕಲ್ಪಟ್ಟಿದ್ದರು

1954ರಲ್ಲಿ ಜನಿಸಿದ ಮೇಡಮ್  ಹಲೀಮಾ ಯಾಕೂಬ್ ಬಡ ಕುಟುಂಬದ ಹೆಣ್ಣುಮಗಳು. ತಂದೆ ಸರ್ಕಾರಿ ವಾಚ್‌ಮನ್. ಈಕೆಗೆ 8 ವರ್ಷ ಆಗಿದ್ದಾಗಲೇ ಮೃತಪಟ್ಟಿದ್ದ. ಸರ್ಕಾರಿ ಕ್ವಾಟ್ರಸ್‌ನಿಂದ ಇವರ ಕುಟುಂಬವನ್ನು ಹೊರಕ್ಕೆ ಕಳುಹಿಸಲಾಯಿತು. ಇದರಿಂದ ಬಂಧುಗಳ ಮನೆಯಲ್ಲಿ ಉಳಿಯಬೇಕಾಯಿತು. ಕುಟುಂಬ ನಿರ್ವಹಣೆಗಾಗಿ ತಾಯಿ ಅಕ್ರಮ ತಳ್ಳುಗಾಡಿಯವನಿಂದ ನಾಸಿ ಪದಂಗ್ ಮಾರಾಟ ಮಾಡುತ್ತಿದ್ದರು. ಲೈಸನ್ಸ್ ಪಡೆಯುವ ಮುನ್ನ ಅಕ್ರಮವಾಗಿ ಇದನ್ನು ಮಾರುತ್ತಿದ್ದರು. ಆದರೂ ಹಲೀಮಾ ಅವರಿಗೆ ತಮ್ಮ ಸ್ವಂತಿಕೆಯಲ್ಲೇ ಬದುಕು ನಡೆಸಬೇಕು; ಎಂದೂ ಸಾಲ ಮಾಡಬಾರದು ಎಂಬ ಪಾಠ ಕಲಿಸಿದರು.

3. ತರಗತಿಯಲ್ಲೇ ನಿದ್ದೆ

ತರಗತಿಯಲ್ಲಿ ಹಿಂದಿನ ಬೆಂಚ್‌ನಲ್ಲಿ ಕೂರುತ್ತಿದ್ದ ಹಲೀಮಾ ತರಗತಿಯಲ್ಲೇ ನಿದ್ದೆ ಮಾಡುತ್ತಾ, ಹೋಂವರ್ಕ್ ಪೂರ್ಣಗೊಳಿಸುತ್ತಿರಲಿಲ್ಲ ಎಂಬ ಅಂಶವನ್ನು ಹಲೀಮಾ ಅವರೇ ಬಹಿರಂಗಪಡಿಸಿದ್ದರು. ಹಾಗೆಂದ ಮಾತ್ರಕ್ಕೆ ಇವರು ಕೆಟ್ಟ ವಿದ್ಯಾರ್ಥಿನಿಯಲ್ಲ. ತಾಯಿಗೆ ನೆರವಾಗುವ ಸಲುವಾಗಿ ಮುಂಜಾನೆ 5ಕ್ಕೇ ಏಳುತ್ತಿದ್ದುದು ಇದಕ್ಕೆ ಕಾರಣ. ತರಗತಿಯಲ್ಲಿ ಕಿಟಕಿ ಬದಿ ಕುಳಿತು ಹಗಲು ಕನಸು ಕಾಣುವುದು ಇವರ ಇಷ್ಟದ ಹವ್ಯಾಸ. ತಾಯಿಗೆ ನೆರವಾಗುವುದಕ್ಕಾಗಿ ಈ ಹವ್ಯಾಸ ನಿಲ್ಲಿಸಿದರು.

4. ಅಲ್ ಗರ್ಲ್ಸ್ ಶಾಲೆ

ಸಿಂಗಾಪುರ ಚೈನೀಸ್ ಗರ್ಲ್ಸ್ ಸ್ಕೂಲ್ ಮತ್ತು ಕಟೋಂಗ್ ಗರ್ಲ್ಸ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಬಳಿಕ ಸಿಂಗಾಪುರ ವಿವಿ ಹಾಗೂ ಮೆಕ್ವೇರ್ ವಿವಿಯಲ್ಲಿ ಸ್ಕಾಲರ್‌ಶಿಪ್ ಪಡೆದು ಶಿಕ್ಷಣ ಮುಂದುವರಿಸಿದರು. 1978ರಲ್ಲಿ ಕಾನೂನು ಪದವಿ ಪಡೆದರು. ವಕೀಲರಾಗಿ 1981ರಿಂದ ಕೆಲಸ ಆರಂಭಿಸಿದರು. ಎನ್‌ಯುಎಸ್‌ನಲ್ಲಿ 2001ರಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪೂರೈಸಿದರು.

5. ವಿವಾಹವಾದಾಗ ಇವರ ಬಳಿ ಸೋಫಾ ಕೂಡಾ ಇರಲಿಲ್ಲ.

6. ಇಂದಿಗೂ ಇವರು ಐದು ಕೊಠಡಿಗಳ ಎಚ್‌ಡಿಬಿ ಫ್ಲಾಟ್‌ನಲ್ಲೇ ಪತಿ ಜತೆ ವಾಸವಿದ್ದಾರೆ.

7. ಹೋರಾಟಗಾರ್ತಿ: ಮಹಿಳಾ ನಾಗರಿಕ ಸೇವಾ ಸಿಬ್ಬಂದಿಗೆ ಕೂಡ ಸಮಾನ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಇವರು ಹೋರಾಟ ಕೈಗೊಂಡಿದ್ದರು. ಮಹಿಳಾ ಹಕ್ಕುಗಳು ಮತ್ತು ಮುಸ್ಲಿಂ ಸಮುದಾಯದ ಹಕ್ಕುಗಳ ಪ್ರತಿಪಾದಕಿ.

8. ಸಮಯ ಪರಿಪಾಲನೆಯಲ್ಲಿ ಇವರು ಎತ್ತಿದ ಕೈ

ಸ್ಪೀಕರ್ ಆಗಿ ಇವರು ನೀಡಿದ ಸಲಹೆ, "ನಿಮ್ಮ ಫಾಲೊ ಅಪ್ ಪ್ರಶ್ನೆಗಳು ಸಂಕ್ಷಿಪ್ತವಾಗಿರಲಿ" ಎನ್ನುವುದು. ಸಂಸದರಿಗೆ ನೀಡಿದ ಅವಧಿ ಮುಗಿದ ಮೇಲೆ ಪದೇ ಪದೇ ಅವರ ಭಾಷಣಕ್ಕೆ ಅಡ್ಡಿಪಡಿಸಿ, ಇತರ ಸಂಸದರಿಗೆ ಅವಕಾಶ ಕೊಡಿ ಎಂದು ನೇರವಾಗಿ ಸೂಚಿಸುತ್ತಿದ್ದರು.

9. ಹತ್ತು ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಬೆರ್ಟಿಯಾ ಹರಿಯನ್/ ಮೆಕ್ ಡೊನಾಲ್ಡ್ ಅವರ ಅಚೀವರ್ ಆಫ್ ದ ಇಯರ್ ಪ್ರಶಸ್ತಿ 2001ರಲ್ಲಿ ಇವರಿಗೆ ಸಂದಿದೆ. 2004ರಲ್ಲಿ ವರ್ಲ್ಡ್ ಮ್ಯಾಗಝಿನ್ ಇವರಿಗೆ ವರ್ಷದ ಮಹಿಳೆ ಪ್ರಶಸ್ತಿ ನೀಡಿದೆ.

10. ಚುನಾವಣೆಯ ದಿನವೇ ತಾಯಿಯ ಸಾವು ಇವರ ಅತ್ಯಂತ ಬೇಸರದ ದಿನ. 2015ರ ಸೆಪ್ಟಂಬರ್ 11ರಂದು ಹಲೀಮಾರ ತಾಯಿ 90ನೆ ವಯಸ್ಸಿನಲ್ಲಿ ನಿಧನರಾಗಿದ್ದರು.

11. ವೈಯಕ್ತಿಕ ಸಂಪರ್ಕ

ಮೇಡಮ್  ಹಲೀಮಾ ಯಾಕೂಬ್ ಒಂದು ಅಥವಾ ಎರಡು ಕೊಠಡಿಯ ಫ್ಲಾಟ್‌ಗಳಿಗೂ ಭೇಟಿ ನೀಡಿ ವೈಯಕ್ತಿಕ ಸಂಪರ್ಕ ಮಾಡುತ್ತಾರೆ.

12. ನತದೃಷ್ಟರಿಗೆ ನೆರವು

ಹತಭಾಗ್ಯರಿಗೆ ನೆರವು ನೀಡಲು ತಮ್ಮ ಅಮೂಲ್ಯ ಸಮಯದಲ್ಲಿ ಒಂದು ಭಾಗವನ್ನು ಮೀಸಲಿಡುವುದು ಇವರ ವಿಶೇಷ. ಅಪಾರ ಜನರ ಹೃದಯವನ್ನು ಮಾತಿನಿಂದಲ್ಲ; ಕೃತಿಯಿಂದ ಗೆದ್ದವರು ಇವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News