ವಿಶ್ವದ ಮೊದಲ ಸೊನ್ನೆ ಯಾವುದು ಗೊತ್ತೇ?

Update: 2017-09-16 04:44 GMT

ಲಂಡನ್, ಸೆ.16: ಮೂರನೇ ಶತಮಾನದ ಭಾರತದ ಹಸ್ತಪ್ರತಿಯೊಂದರಲ್ಲಿ ಉಲ್ಲೇಖಿಸಿರುವ ಕಪ್ಪು ಚುಕ್ಕೆ, ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲಾದ ಶೂನ್ಯದ ಸಂಕೇತವಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ.

ಮೊಟ್ಟಮೊದಲ ಬಾರಿಗೆ ಶೂನ್ಯ ಬಳಕೆಯಾಗಿದೆ ಎಂದು ಪ್ರಸ್ತುತ ಇರುವ ದಾಖಲೆಗಳಿಗಿಂತ 500 ವರ್ಷ ಹಿಂದೆಯೇ ಈ ಸಂಕೇತ ಹಸ್ತಪ್ರತಿಯಲ್ಲಿ ಬಳಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

"ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಬೋಡ್ಲಿಯನ್ ಗ್ರಂಥಾಲಯದ ವಿಜ್ಞಾನಿಗಳು ಕಾರ್ಬನ್ ಡೇಟಿಂಗ್ ವಿಧಾನದ ಮೂಲಕ ಇದನ್ನು ದೃಢಪಡಿಸಿದ್ದಾರೆ. ಇದು ಜಾಗತಿಕ ಗಣಿತಶಾಸ್ತ್ರಕ್ಕೆ ಭಾರತೀಯರು ನೀಡಿದ ಕೊಡುಗೆ ಎಂದು ಪರಿಗಣಿಸಲಾಗಿದ್ದು, ಇದರ ಮೂಲವನ್ನು ಈಗ ಪತ್ತೆಹಚ್ಚಲಾಗಿದೆ" ಎಂದು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.

ಭಕ್ಷಾಲಿ ಹಸ್ತಪ್ರತಿ ಎಂದು ಕರೆಯಲಾದ ಈ ಹಸ್ತಪ್ರತಿ 1881ರಲ್ಲಿ ಪಾಕಿಸ್ತಾನದಲ್ಲಿ ಪತ್ತೆಯಾಗಿತ್ತು. ಇದನ್ನು ಬೋಡ್ಲಿಯನ್ ಗ್ರಂಥಾಲಯಕ್ಕೆ 1902ರಲ್ಲಿ ತರಲಾಗಿತ್ತು.

"ಶೂನ್ಯವನ್ನು ಸಂಖ್ಯಾ ಸರಣಿಯಲ್ಲಿ ಸೇರಿಸಿದ್ದರ ಮೂಲ ಅರಸುತ್ತಾ ಹೋದಾಗ, ಭಕ್ಷಾಲಿ ಹಸ್ತಪ್ರತಿಯಲ್ಲಿ ಇದನ್ನು ನಮೂದಿಸಿದ್ದು ಕಂಡುಬಂದಿದೆ. ಇದು ಗಣಿತದ ಇತಿಹಾಸದಲ್ಲಿ ಬಲುದೊಡ್ಡ ಸಂಶೋಧನೆ" ಎಂದು ಆಕ್ಸ್‌ಫರ್ಡ್ ಪ್ರಾಧ್ಯಾಪಕ ಮಾರ್ಕುಸ್ ಡೂ ಸತಾಯ್ ಹೇಳಿದ್ದಾರೆ.

ಭಾರತದ ಗಣಿತಜ್ಞರು ಮೂರನೇ ಶತಮಾನದಲ್ಲೇ ಇದಕ್ಕೆ ಅಡಿಪಾಯ ಹಾಕಿದ್ದರು. ಮುಂದಿನ ದಿನಗಳಲ್ಲಿ ಇದು ಆಧುನಿಕ ವಿಶ್ವದ ಗಣಿತದ ಮೂಲತತ್ವವಾಗಿದೆ ಎಂದು ಅವರು ಹೇಳಿದ್ದಾರೆ. ಭಕ್ಷಾಲಿ ಹಸ್ತಪ್ರತಿ ಭಾರತದ ಮೊಟ್ಟಮೊದಲ ಗಣಿತ ಬರಹ ಎಂಬ ಖ್ಯಾತಿ ಹೊಂದಿದ್ದರೂ, ಇದರ ಕಾಲಾವಧಿ ಬಗ್ಗೆ ಒಮ್ಮತ ಇರಲಿಲ್ಲ. ಇದೀಗ ಕಾರ್ಬನ್ ಡೇಟಿಂಗ್ ವಿಧಾನದ ಮೂಲಕ ಇದು ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ.

ಈ ಹಸ್ತಪ್ರತಿಯಲ್ಲಿ ಹಲವು ಬಾರಿ ಸೊನ್ನೆ ಬಳಕೆಯಾಗಿದ್ದು, ಪ್ರಾಚೀನ ಭಾರತದ ಸಂಖ್ಯಾ ವ್ಯವಸ್ಥೆಯನ್ನು ಇದು ಪ್ರತಿನಿಧಿಸುತ್ತದೆ. ಗ್ವಾಲಿಯರ್‌ನಲ್ಲಿ 9ನೇ ಶತಮಾನದಲ್ಲಿ ಮೊದಲ ಬಾರಿಗೆ ಶೂನ್ಯದ ಸಂಕೇತ ಬಳಕೆಯಾಗಿದೆ ಎಂದು ಈ ಹಿಂದೆ ನಂಬಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News