ಕನ್ನಡ ವಿಶ್ವವಿದ್ಯಾನಿಲಯಕ್ಕೆ ಗಂಡಾಂತರ

Update: 2017-09-18 05:11 GMT

ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಎದುರಾದ ಈ ಗಂಡಾಂತರದ ಬಗ್ಗೆ ಮಲ್ಲಿಕಾ ಘಂಟಿಯವರು ಕೆಲ ತಿಂಗಳ ಹಿಂದೆ ಚಿಂತನ-ಮಂಥನ ಸಭೆಯನ್ನು ಕೂಡ ನಡೆಸಿದ್ದರು. ಸಭೆಯಲ್ಲಿ ಮಲ್ಲಿಕಾ ಘಂಟಿಯವರು ಸರಕಾರದಿಂದ ಅನುದಾನ ಪಡೆಯಲು ತಾವು ಪಡುತ್ತಿರುವ ಪಡಿಪಾಟಲನ್ನು, ಹೆಜ್ಜೆಹೆಜ್ಜೆಗೂ ಎದುರಾಗುತ್ತಿರುವ ಅಡ್ಡಿ ಆತಂಕವನ್ನು ವಿವರಿಸಿದ್ದರು. ಹಿಂದಿನ ಕುಲಪತಿಗಳು ಸೂಟ್‌ಕೇಸ್ ತುಂಬಾ ಕಡತಗಳನ್ನು ಒಯ್ದು ಸೂಟ್‌ಕೇಸ್ ತುಂಬಾ ಹಣ ತರುತ್ತಿದ್ದರು ಎಂದು ತಮಾಷೆಯಿಂದ ಹೇಳಿದ್ದರು. ಆದರೆ ಈಗ ಕಡತಗಳನ್ನು ಹೊತ್ತುಕೊಂಡು ಹೋದರೂ ಮುಖ್ಯಮಂತ್ರಿಗಳು ಮುಂಗಡ ಪತ್ರದಲ್ಲಿ ಘೋಷಿಸುವ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ವಿಷಾದಿಸಿದರು.


ನಾಡಿನ ಹೆಮ್ಮೆಯ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ. ಕಾಲು ಶತಮಾನದ ಹಿಂದೆ ಅಸ್ತಿತ್ವಕ್ಕೆ ಬಂದ ಇದು ವಿದ್ಯೆಯನ್ನು ಕಲಿಸುವ ವಿಶ್ವವಿದ್ಯಾನಿಲಯ ಅಲ್ಲ, ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾನಿಲಯ ಎಂದು ಇದನ್ನು ಕಟ್ಟಿದ ಮೊದಲ ಕುಲಪತಿ ಡಾ.ಚಂದ್ರಶೇಖರ ಕಂಬಾರರು ಹೇಳುತ್ತಿದ್ದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಕನ್ನಡ ಭಾಷೆಗಾಗಿ ಒಂದು ವಿಶ್ವವಿದ್ಯಾನಿಲಯವಿರಲಿಯೆಂದು ಸರಕಾರ ಇದರ ಸ್ಥಾಪನೆಗೆ ತೀರ್ಮಾನ ಕೈಗೊಂಡಿತು. ಈ ತೀರ್ಮಾನವನ್ನು ಅನುಷ್ಠಾನಕ್ಕೆ ತರಲು ಕಂಬಾರರನ್ನು ನೇಮಕ ಮಾಡಿ, ಹಂಪಿಗೆ ಕಳುಹಿಸಿಕೊಟ್ಟಿತು. ಕಲ್ಲುಬಂಡೆಗಳಿಂದ ತುಂಬಿದ ಹಂಪಿಯಲ್ಲಿ ಕಂಬಾರರು ಶಿಲ್ಪಿಯಾಗಿ ಕಲ್ಲನ್ನು ಕಟಿದು, ಈ ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದಾರೆ.

ಜಗತ್ತಿನಲ್ಲಿ ಭಾಷೆಗಾಗಿ ಇರುವ ಏಕೈಕ ವಿಶ್ವವಿದ್ಯಾನಿಲಯ ಎಂಬ ಪ್ರತೀತಿ ಹೊಂದಿರುವ ಕನ್ನಡ ವಿಶ್ವವಿದ್ಯಾನಿಲಯ ರಾಜ್ಯ ಸರಕಾರ ಕೊಡ ಮಾಡಿದ 700 ಎಕರೆ ವಿಸ್ತಾರದಲ್ಲಿ ಮೈಚಾಚಿದೆ. ಒಂದು ಕೋನದಿಂದ ನೋಡಿದರೆ, ರವೀಂದ್ರನಾಥ ಟಾಗೋರರ ಶಾಂತಿನಿಕೇತನದಂತೆ ಹೋಲುವ, ಇನ್ನೊಂದು ದೃಷ್ಟಿಯಿಂದ ನೋಡಿದರೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಂತೆ ಗೋಚರಿಸುವ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದು ಎರಡೂವರೆ ದಶಕಗಳ ನಂತರ ನಾನಾ ಸಂಕಟಗಳನ್ನು ಅನುಭವಿಸುತ್ತಿದೆ.

ಹಂಪಿಯ ವಿಶ್ವವಿದ್ಯಾನಿಲಯ ಉಳಿದ ವಿಶ್ವವಿದ್ಯಾನಿಲಯಗಳಂತೆ ಬರೀ ಪದವಿ ಕೊಡುವ ವಿಶ್ವವಿದ್ಯಾನಿಲಯವಲ್ಲ. ಇದರ ಸ್ವರೂಪವೇ ಬೇರೆಯೆಂದು ಇದನ್ನು ಮುನ್ನಡೆಸಿಕೊಂಡು ಬಂದ ಕುಲಪತಿಗಳೆಲ್ಲ ಸರಕಾರಕ್ಕೆ ತಿಳಿಸಿಕೊಡುತ್ತಲೇ ಬಂದಿದ್ದಾರೆ. ಚಂದ್ರಶೇಖರ ಕಂಬಾರ, ಎಂ.ಎಂ.ಕಲಬುರ್ಗಿ, ವಿವೇಕ ರೈ, ಮುರಿಗೆಪ್ಪ ಹೀಗೆ ಅನೇಕರು ಈ ವಿಶ್ವವಿದ್ಯಾನಿಲಯದ ಘನತೆ ಎತ್ತಿ ಹಿಡಿಯುತ್ತಲೇ ಬಂದಿದ್ದಾರೆ. ಹಂಪಿಯಲ್ಲಿ ನೆಲೆಗೊಂಡಿರುವ ಈ ವಿಶ್ವವಿದ್ಯಾನಿಲಯದ ಕನ್ನಡ ಎಂಬ ಶಬ್ದವನ್ನು ಅಳಿಸಿ ಹಾಕಿ, ಕೃಷ್ಣದೇವರಾಯ ವಿಶ್ವವಿದ್ಯಾನಿಲಯವೆಂದು ನಾಮಕರಣ ಮಾಡಲು ಬಿಜೆಪಿ ಸರಕಾರದ ಗಣಿರೆಡ್ಡಿಗಳು ಯತ್ನಿಸಿದ್ದರು. ಈ ವಿಶ್ವವಿದ್ಯಾನಿಲಯದ 80 ಎಕರೆ ಜಾಗವನ್ನು ಪರಭಾರೆ ಮಾಡಲು ಮಸಲತ್ತು ನಡೆದಿತ್ತು. ಆದರೆ ಇಲ್ಲಿನ ಪ್ರಾಧ್ಯಾಪಕರು ಸೇರಿದಂತೆ ಎಲ್ಲಾ ಸಿಬ್ಬಂದಿ ಪ್ರತಿಭಟನೆಗೆ ಇಳಿದು ಇದನ್ನು ತಡೆ ಹಿಡಿದರು. ನಾಡಿನ ಪ್ರಗತಿಪರ ಸಂಘಟನೆಗಳು ಕೂಡ ಹಂಪಿ ವಿಶ್ವವಿದ್ಯಾನಿಲಯದ ರಕ್ಷಣೆಗೆ ಮುಂದಾಗಿದ್ದವು.

ಇಂಥ ವಿಶ್ವವಿದ್ಯಾನಿಲಯದ ಈಗಿನ ಕುಲಪತಿ ಮಲ್ಲಿಕಾ ಘಂಟಿ. ಹೇಗಾದರೂ ಮಾಡಿ ಈ ವಿಶ್ವವಿದ್ಯಾನಿಲಯವನ್ನು ಉಳಿಸಿಕೊಳ್ಳಬೇಕು ಎಂದು ಪಣತೊಟ್ಟಿರುವ ಅವರು ಬೆಳ್ಳಿಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಆಡಿದ ಮಾತು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸೆಪ್ಟಂಬರ್ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಬಂದು ಬೆಳ್ಳಿಹಬ್ಬದ ಕಾರ್ಯಕ್ರಮ ಉದ್ಘಾಟಿಸಿದರು. ಎರಡನೆ ದಿನ ಸೆಪ್ಟಂಬರ್ 13ರಂದು ಈ ವಿಶ್ವವಿದ್ಯಾನಿಲಯದ ಭವಿಷ್ಯದ ಬಗ್ಗೆ ವಿಚಾರಗೋಷ್ಠಿಯೊಂದು ನಡೆಯಿತು. ಹಿಂದಿನ ಕುಲಪತಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಈ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾ ಘಂಟಿಯವರು ಹಂಪಿ ವಿಶ್ವವಿದ್ಯಾನಿಲಯ ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ವಿವರಿಸಿದರು.

ಹೀಗೆ ವಿವರಿಸುವಾಗ ಪ್ರಾಸಂಗಿಕವಾಗಿ, ಹಿಂದಿನ ಕುಲಪತಿಗಳು ವಿಧಾನಸೌಧಕ್ಕೆ ಹೋದಾಗ ಅಧಿಕಾರಿಗಳು ಎದ್ದು ನಿಂತು ಸ್ವಾಗತಿಸಿ ಅವರ ಕೆಲಸ ಮಾಡಿಕೊಡುತ್ತಿದ್ದರು. ಈಗ ನಾನು ಹೋದರೆ, ಕಡತಗಳನ್ನು ಹೊತ್ತುಕೊಂಡು ಅನುದಾನಕ್ಕಾಗಿ ಅಧಿಕಾರಿಗಳ ಎದುರು ಹಲ್ಲು ಗಿಂಜ ಬೇಕಾಗುತ್ತದೆ ಎಂದು ಅವರು ಹೇಳಿದರು. ಅಧಿಕಾರಶಾಹಿ ವಿರುದ್ಧ ಘಂಟಿ ವ್ಯಕ್ತಪಡಿಸಿದ ಆಕ್ರೋಶ ಸಿದ್ದರಾಮಯ್ಯ ಸರಕಾರದ ವಿರುದ್ಧ ಅಸಮಾಧಾನ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಯಿತು. ಇದಕ್ಕಾಗಿ ಕಾಯುತ್ತಿದ್ದ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಈ ಹೇಳಿಕೆಯನ್ನು ಬಳಸಿಕೊಂಡು ಸರಕಾರದ ಭ್ರಷ್ಟಾಚಾರಕ್ಕೆ ಕೈಗನ್ನಡಿ ಎಂಬಂತೆ ಹೇಳಿಕೆ ನೀಡಿದರು.

ಮಲ್ಲಿಕಾ ಘಂಟಿ ಅವರು ಕಳೆದ ನಾಲ್ಕು ದಶಕಗಳಿಂದ ಗೊತ್ತಿರುವ ಹೆಣ್ಣುಮಗಳು. ನಮ್ಮದೇ ಬಿಜಾಪುರ ಜಿಲ್ಲೆಯವರು. ಧಾರವಾಡದಲ್ಲಿ ಓದುವಾಗಲೇ ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡವರು. ಕ್ರಾಂತಿಕಾರಿ ಸಾಹಿತಿ ಬಸವರಾಜ ಕಟ್ಟಿಮನಿಯವರ ಒಡನಾಟದಲ್ಲಿ ಸ್ಪಷ್ಟವಾದ ವೈಚಾರಿಕ ನಿಲುವನ್ನು ರೂಪಿಸಿಕೊಂಡವರು. ಬದುಕಿನುದ್ದಕ್ಕೂ ರಾಜಿ ರಹಿತ ಮನೋಭಾವದಿಂದಾಗಿ ಅವರು ಹಲವು ರೀತಿಯ ತೊಂದರೆಗಳನ್ನು ಅನುಭವಿಸಿದರು. ಅಂತರಾಳದ ಸಂಕಟಗಳನ್ನು ಮುಲಾಜಿಲ್ಲದೇ ವ್ಯಕ್ತಪಡಿಸುವ ದೋರಣೆಗಳಿಂದ ಅವರು ಅನೇಕ ಬಾರಿ ತೊಂದರೆಗೆ ಸಿಲುಕಿಕೊಂಡಿದ್ದಾರೆ.

ಸಂಡೂರು ಬಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಉಪನ್ಯಾಸಕಿಯಾಗಿದ್ದಾಗ, ಸಂಡೂರಿನ ಕುಮಾರಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಮಹಿಳೆಯರು ಪ್ರವೇಶಿಸಿದರೆ, ರಕ್ತ ಕಾರಿ ಸಾಯುತ್ತಾರೆ ಎಂಬ ಮೂಢನಂಬಿಕೆ ಒಡೆದು ಹಾಕಲು ಮಲ್ಲಿಕಾ ಘಂಟಿ ನೂರಾರು ಮಹಿಳೆಯರನ್ನು ಕರೆದುಕೊಂಡು ಈ ದೇವಾಲಯ ಪ್ರವೇಶಿಸಿದ್ದರು.

ಇಂಥ ಮಲ್ಲಿಕಾ ಘಂಟಿಯವರಿಗೆ ಈಗ ಹಂಪಿ ವಿಶ್ವವಿದ್ಯಾನಿಲಯವನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆಗೆ ಸರಕಾರ ತಂದಿರುವ ತಿದ್ದುಪಡಿ ವಿಧೆೇಯಕದೊಂದಿಗೆ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕ ಎದುರಾಗಿದೆ. ಈ ಮಸೂದೆ ಶಾಸನವಾದರೆ, ನೇಮಕಾತಿ ಮತ್ತು ಆಡಳಿತದಲ್ಲಿರುವ ಅಧಿಕಾರವನ್ನು ವಿಶ್ವವಿದ್ಯಾನಿಲಯದಿಂದ ಕಿತ್ತುಕೊಂಡು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ತುಂಬಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಈ ವಿಧೇಯಕ ತಂದಿರುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳುತ್ತಿದ್ದಾರೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಸಮಗ್ರ ಶಾಸನ ರೂಪಿಸುವುದಾಗಿ ರಾಯರೆಡ್ಡಿ ಹೇಳಿದ್ದಾರೆ. ಆದರೆ ಕನ್ನಡಕ್ಕಾಗಿ ಇರುವ ಈ ವಿಶ್ವವಿದ್ಯಾನಿಲಯವನ್ನು ಈ ವಿಧೇಯಕದ ವ್ಯಾಪ್ತಿಗೆ ತಂದು ಅದರ ಮೂಲಸ್ವರೂಪಕ್ಕೆ ಧಕ್ಕೆ ತರುವ ಹುನ್ನಾರ ನಡೆದಿದೆ ಎಂಬ ಆತಂಕ ಮಲ್ಲಿಕಾ ಘಂಟಿಯವರಿಗೆ ಕಾಡುತ್ತಿದೆ.

ಈ ತಿದ್ದುಪಡಿ ಅಂಗೀಕೃತಗೊಂಡರೆ, ಕುಲಪತಿಗಳ ನೇಮಕಾತಿ ಪ್ರಕ್ರಿಯೆಯನ್ನು ಸರಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಈಗಿರುವ ನಿಯಮಾವಳಿ ಪ್ರಕಾರ, ರಾಜ್ಯಪಾಲರು ಕುಲಪತಿಗಳನ್ನು ನೇಮಕ ಮಾಡುತ್ತಾರೆ. ಇದರ ಒಟ್ಟು ಪರಿಣಾಮವೇನೆಂದರೆ, ವಿಶ್ವವಿದ್ಯಾನಿಲಯಗಳನ್ನು ಉನ್ನತ ಶಿಕ್ಷಣ ಸಚಿವಾಲಯದ ಇಲಾಖೆ ಎಂಬಂತೆ ಪರಿಗಣಿಸಲಾಗುತ್ತದೆ. ವಿಶ್ವವಿದ್ಯಾನಿಲಯದ ಸ್ವಾಯತ್ತತೆ ಹೆಚ್ಚು ಕಡಿಮೆ ಮಾಯವಾಗುತ್ತದೆ. ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ನಡೆದಿರಬಹುದು. ಆದರೆ ಸರಕಾರ ತಂದಿರುವ ಮಸೂದೆಯಿಂದ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ.

ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಎದುರಾದ ಈ ಗಂಡಾಂತರದ ಬಗ್ಗೆ ಮಲ್ಲಿಕಾ ಘಂಟಿಯವರು ಕೆಲ ತಿಂಗಳ ಹಿಂದೆ ಚಿಂತನ-ಮಂಥನ ಸಭೆಯನ್ನು ಕೂಡ ನಡೆಸಿದ್ದರು. ಈ ಸಭೆಯಲ್ಲಿ ಹಂಪನಾ, ಕಮಲಾ ಹಂಪನಾ, ಚಂಪಾ, ಗಿರಡ್ಡಿ, ಪಟ್ಟಣಶೆಟ್ಟಿ, ವಿವೇಕ ರೈ, ಜಯಪ್ರಕಾಶ ಮಾವಿನಕುಳಿ ಸೇರಿದಂತೆ ನಾಡಿನ ಹಲವಾರು ತಜ್ಞರು ಪಾಲ್ಗೊಂಡಿದ್ದರು. ಈ ಚಿಂತನ-ಮಂಥನ ಸಭೆಯಲ್ಲೂ ಕೂಡ ಮಲ್ಲಿಕಾ ಘಂಟಿಯವರು ಸರಕಾರದಿಂದ ಅನುದಾನ ಪಡೆಯಲು ತಾವು ಪಡುತ್ತಿರುವ ಪಡಿಪಾಟಲನ್ನು, ಹೆಜ್ಜೆಹೆಜ್ಜೆಗೂ ಎದುರಾಗುತ್ತಿರುವ ಅಡ್ಡಿ ಆತಂಕವನ್ನು ವಿವರಿಸಿದ್ದರು. ಹಿಂದಿನ ಕುಲಪತಿಗಳು ಸೂಟ್‌ಕೇಸ್ ತುಂಬಾ ಕಡತಗಳನ್ನು ಒಯ್ದು ಸೂಟ್‌ಕೇಸ್ ತುಂಬಾ ಹಣ ತರುತ್ತಿದ್ದರು ಎಂದು ತಮಾಷೆಯಿಂದ ಹೇಳಿದ್ದರು. ಆದರೆ ಈಗ ಕಡತಗಳನ್ನು ಹೊತ್ತುಕೊಂಡು ಹೋದರೂ ಮುಖ್ಯಮಂತ್ರಿಗಳು ಮುಂಗಡ ಪತ್ರದಲ್ಲಿ ಘೋಷಿಸುವ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ವಿಷಾದಿಸಿದರು.

ಹಂಪಿ ವಿಶ್ವವಿದ್ಯಾನಿಲಯ ಉಳಿದ ವಿಶ್ವವಿದ್ಯಾನಿಲಯಗಳಂತೆ ಒಂದೆರಡು ಜಿಲ್ಲೆಗೆ ಸೀಮಿತವಾದ ವ್ಯಾಪ್ತಿಯನ್ನು ಹೊಂದಿಲ್ಲ. ಕನ್ನಡ ಮತ್ತು ಕನ್ನಡಿಗರು ಇರುವ ಪ್ರದೇಶವೆಲ್ಲ ಹಂಪಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುತ್ತದೆ. ಪಾರಂಪರಿಕ ವಿಶ್ವವಿದ್ಯಾನಿಲಯಗಳಿಗೆ ನಿರ್ದಿಷ್ಟ ಕಾಲೇಜುಗಳು ಒಳಗೊಂಡಿರುತ್ತವೆ. ಆದರೆ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಇತರ ವಿಶ್ವವಿದ್ಯಾನಿಲಯಗಳಲ್ಲಿ ಇಲ್ಲದ ಪ್ರತಿಮಾಶಾಸ್ತ್ರ, ದ್ರಾವಿಡ ಸಂಸ್ಕೃತಿ, ಖಗೋಳ ಶಾಸ್ತ್ರ ಇಂತಹ ಹಲವಾರು ಜ್ಞಾನಶಾಖೆಗಳಿವೆ. ಈ ವಿಶಿಷ್ಟ ಸ್ವರೂಪವನ್ನು ಕಾಪಾಡಿಕೊಳ್ಳುವುದು ಕನ್ನಡಿಗರೆಲ್ಲರ ಕರ್ತವ್ಯವಾಗಿದೆ. ವಿಧಾನಸೌಧದಲ್ಲಿರುವ ಐಎಎಸ್ ಅಧಿಕಾರಿಗಳಿಗೆ ಈ ವಿಶ್ವವಿದ್ಯಾನಿಲಯದ ವೈಶಿಷ್ಟತೆ ಅರ್ಥ ಆಗುವುದಿಲ್ಲ. ಅನುದಾನಕ್ಕೆ ಕೋರಿದರೆ, ನಿಮ್ಮ ಸಂಪನ್ಮೂಲ ನೀವೇ ಕ್ರೋಡೀಕರಿಸಿಕೊಳ್ಳಿ ಎಂದು ಉಪದೇಶಿಸುತ್ತಾರೆ. ಉಳಿದ ವಿಶ್ವವಿದ್ಯಾನಿಲಯಗಳಂತೆ ಸಂಪನ್ಮೂಲ ಕ್ರೋಢಿಕರಿಸಿಕೊಳ್ಳಲು ಇಲ್ಲಿ ತರಗತಿಗಳು ನಡೆಯುವುದಿಲ್ಲ. ಸೀಟುಗಳನ್ನು ಮಾರಾಟ ಮಾಡಿ, ಸಂಪನ್ಮೂಲ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಸಂಶೋಧನೆಗಾಗಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾನಿಲಯದ ಸ್ವರೂಪವೇ ಬೇರೆ. ಇದನ್ನು ಅರ್ಥ ಮಾಡಿಸಲು ಕುಲಪತಿಗಳು ಪ್ರಯಾಸ ಪಡುತ್ತಿದ್ದಾರೆ.

ಹಂಪಿ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದು ಕಾಲು ಶತಮಾನವಾದರೂ ಈ ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನೇಕ ವಿದ್ಯಾರ್ಥಿನಿಯರು ಓದುತ್ತಿದ್ದರೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕೂಡ ಇರಲಿಲ್ಲ. ಮಲ್ಲಿಕಾ ಘಂಟಿಯವರು ಬಂದ ನಂತರ ಇದು ಅವರ ಗಮನಕ್ಕೆ ಬಂತು. ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಇಂಥ ಸಣ್ಣ ಕೆಲಸ ಮಾಡಲು ಕೂಡ ಮಹಿಳೆಯರೇ ಅಧಿಕಾರ ವಹಿಸಿಕೊಳ್ಳಬೇಕಿದೆ.

ಇಂಥ ಹಂಪಿ ವಿಶ್ವವಿದ್ಯಾನಿಲಯಕ್ಕೆ ಈಗ ಗಂಡಾಂತರ ಎದುರಾಗಿದೆ. ಅದರ ಅಡಿಪಾಯ ಅಲುಗಾಡುತ್ತಿದೆ. ಅದನ್ನು ಈಗಿರುವ ಸ್ವರೂಪದಲ್ಲಿ ಉಳಿಸಿಕೊಳ್ಳುವುದು ಅಲ್ಲಿನ ಸಿಬ್ಬಂದಿ ಮತ್ತು ಕುಲಪತಿಗಳ ಹೊಣೆಗಾರಿಕೆ ಮಾತ್ರವಲ್ಲ, ಇಡೀ ಕರ್ನಾಟಕದ ಜನರು ಕನ್ನಡಕ್ಕಾಗಿ ಇರುವ ವಿಶ್ವವಿದ್ಯಾನಿಲಯವನ್ನು ಕಾಪಾಡಿಕೊಳ್ಳಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News