ಪೆಟ್ರೋಲ್ ಬೆಲೆಯೆಂಬ ಬುಲೆಟ್ ಟ್ರೈನ್

Update: 2017-09-17 18:42 GMT

ಬುಲೆಟ್ ಟ್ರೈನ್ ಹಳಿಯ ಮೇಲೆ ಓಡುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಅನುಮಾನಗಳಿವೆ. ಆದರೆ ದೇಶದ ಪೆಟ್ರೋಲ್ ಬೆಲೆಯಂತೂ ಜನಸಾಮಾನ್ಯರ ಬದುಕಿನ ಹಳಿಯ ಮೇಲೆ ಬುಲೆಟ್ ಟ್ರೈನ್‌ಗಿಂತ ವೇಗದಲ್ಲಿ ಓಡುತ್ತಿದೆ. ಈ ಪೆಟ್ರೋಲ್ ಬೆಲೆಯ ಚುಂಗು ಹಿಡಿದು ಇತರ ಪದಾರ್ಥಗಳ ಬೆಲೆಗಳೂ ವೇಗವಾಗಿ ಮುಂದಕ್ಕೆ ಓಡುತ್ತಿವೆ. ಈ ಹಿಂದೆಲ್ಲ, ವರ್ಷಕ್ಕೆ ಎರಡು ಬಾರಿ ಪೆಟ್ರೋಲ್‌ಗೆ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಹೆಚ್ಚಳ ಮಾಡಿದರೆ ಸರಕಾರದ ವಿರುದ್ಧ ಜನರು ಬೀದಿಗಿಳಿಯುತ್ತಿದ್ದರು. ಎಲ್ಲ ಪತ್ರಿಕೆಗಳೂ ‘ಪೆಟ್ರೋಲ್‌ಗೆ ಬೆಂಕಿ’ ಎಂದು ಗದ್ದಲ ಎಬ್ಬಿಸುತ್ತಿದ್ದವು. ವಿಪರ್ಯಾಸವೆಂದರೆ, ಈಗ ಬೆಲೆ ಏರಿಕೆ ನಿಯಂತ್ರಣ ತನ್ನ ಕೈಯಲ್ಲಿಲ್ಲ ಎನ್ನುವ ಗುರಾಣಿಯ ಮರೆಯಲ್ಲಿ ನಿಂತು ಸರಕಾರ ಯಾವ ಅಂಜಿಕೆಯೂ ಇಲ್ಲದೆ ಪೆಟ್ರೋಲ್ ಬೆಲೆಯೇರಿಕೆಗೆ ಮೌನ ಸಮ್ಮತಿ ನೀಡಿದೆ.

ದೇಶದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ಗೂ ಅಂತಾರಾಷ್ಟ್ರೀಯ ಬೆಲೆಗೂ ಯಾವ ಸಂಬಂಧವೂ ಇಲ್ಲವಾಗಿದೆ. ಪೆಟ್ರೋಲ್ ಬೆಲೆಯೇರಿಕೆಯನ್ನು ಈ ಹಿಂದಿನ ಸರಕಾರಗಳೂ ಮಾಡಿವೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಮಾರುಕಟ್ಟೆಯ ನಡುವೆ ಈ ಮಟ್ಟಿನ ಅಂತರ ಈ ಹಿಂದೆ ಇದ್ದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಇಂತಹ ಬೆಲೆಯೇರಿಕೆಯ ಸಂದರ್ಭದಲ್ಲಿ ಸರಕಾರಕ್ಕೆ ಜನಸಾಮಾನ್ಯರ ಕುರಿತಂತೆ ಸಣ್ಣದೊಂದು ಆತಂಕ ಇರುತ್ತದೆ. ಈ ಹಿಂದೆ, ಬೆಲೆಯೇರಿಕೆಯ ಸಂದರ್ಭದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಲು ಸರಕಾರಗಳು ಪ್ರಯತ್ನಿಸಿದ್ದನ್ನು ನಾವು ನೋಡಿದ್ದೇವೆ. ವಿಪರ್ಯಾಸವೆಂದರೆ, ಸದ್ಯದ ಸರಕಾರ ಬೆಲೆಯೇರಿಕೆಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ಜನರನ್ನು ಸಂತೈಸಿ ಸೂಕ್ತ ಪರಿಹಾರವನ್ನು ನೀಡುವ ಭರವಸೆಯನ್ನು ನೀಡದೆ, ಜನರು ಪೆಟ್ರೋಲ್ ದರ ಏರಿಕೆಗೆ ಅರ್ಹರು ಎನ್ನುವಂತಹ ಮಾತುಗಳನ್ನು ಸರಕಾರ ಆಡುತ್ತಿದೆ.

‘‘ವಾಹನಗಳನ್ನು ಹೊಂದಿರುವವರು ಹಸಿನಿಂದ ನರಳುತ್ತಿಲ್ಲ. ನಾವು ಬೆಲೆ ಹೆಚ್ಚಳ ಮಾಡಿದರೆ ಅದನ್ನು ಕಟ್ಟುವ ಶಕ್ತಿ ಜನರಿಗಿದೆ. ವಾಹನ ಮಾಲಕರು ಬಡವರಲ್ಲ. ಆ ತೆರಿಗೆಯ ಹಣವನ್ನು ನಾವು ಸಾರ್ವಜನಿಕ ಶೌಚಾಲಯಗಳಿಗೆ ಬಳಸುತ್ತೇವೆ’’ ಎಂಬ ಹೇಳಿಕೆಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ. ಜೆ. ಅಲ್ಫೋನ್ಸ್ ಹೇಳಿದ್ದಾರೆ. ಅಂದರೆ ಈ ಬೆಲೆ ಏರಿಕೆ, ಕೇಂದ್ರದ ನಿಯಂತ್ರಣ ಮೀರಿ ನಡೆದಿರುವುದಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡಂತಾಗಿದೆ. ದೇಶದ ಜನರಿಗೆ ಪೆಟ್ರೋಲ್ ಬೆಲೆಯನ್ನು ಭರಿಸುವ ಶಕ್ತಿಯಿರುವ ಕಾರಣಕ್ಕಾಗಿಯೇ, ಈ ಏರಿಕೆಯನ್ನು ಮುಕ್ತವಾಗಿ ಜನರ ಮೇಲೆ ಏರಲಾಗಿದೆ ಎನ್ನುವುದನನು ದೇಶದ ಜನರಿಗೆ ಸ್ಪಷ್ಟಪಡಿಸಿದಂತಾಗಿದೆ. ಆದುದರಿಂದ, ಜನರಿಗೆ ಸರಕಾರ ಕೊಡುವ ಕರೆಯೇನೆಂದರೆ, ‘ಪೆಟ್ರೋಲ್ ಹಾಕಿಸುವ ಶಕ್ತಿಯಿರುವವರು ಮಾತ್ರ ವಾಹನವನ್ನು ಇಟ್ಟುಕೊಳ್ಳಿ. ಉಳಿದವರು ವಾಹನಗಳನ್ನು ಮಾರಿಬಿಡಿ’.

ಬಹುಶಃ ಸ್ವಾತಂತ್ರಾನಂತರ ಈ ದೇಶದ ಜನರನ್ನು ಇಷ್ಟೊಂದು ಕೇವಲವಾಗಿ ಗ್ರಹಿಸಿ, ಅವರ ಧ್ವನಿಯನ್ನು ಅಡಗಿಸಲು ನಡೆದಿರುವ ಯತ್ನ ಇದೇ ಮೊದಲಿರಬೇಕು. ಒಬ್ಬ ಸಚಿವ ಇಂತಹದೊಂದು ಹೇಳಿಕೆಯನ್ನು ನೀಡಿದ ಬಳಿಕವೂ ಅದಕ್ಕೆ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದೆ ವಿರೋಧ ಪಕ್ಷಗಳು ಮತ್ತು ಜನಸಮೂಹ ಹೇಗೆ ಭಾರತ ಮಾತು ಸೋತು ಕುಳಿತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

ಪೆಟ್ರೋಲ್ ಎನ್ನುವುದು ಶೋಕಿ ವಾಹನಗಳನ್ನು ಬಳಸುವ ಜನರ ಸೊತ್ತು ಎಂದು ತಿಳಿದುಕೊಂಡಿರುವ ಸರಕಾರವಷ್ಟೇ ಇಂತಹ ಮಾತುಗಳನ್ನು ಆಡಬಹುದು. ತೈಲ ಬೆಲೆ ಈ ದೇಶದ ಮಾರುಕಟ್ಟೆಯ ಏರಿಳಿತಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸುತ್ತದೆ ಎನ್ನುವುದನ್ನು ಸರಕಾರ ಮರೆತಿದೆ. ಬೈಕ್, ಕಾರುಗಳನ್ನು ಹೊಂದಿದವರಷ್ಟೇ ಪೆಟ್ರೋಲ್‌ನ್ನು ಅವಲಂಬಿಸಿರುವುದಲ್ಲ. ಮುಖ್ಯವಾಗಿ ಪೆಟ್ರೋಲ್ ಬೆಲೆಯೇರಿಕೆ ಅದ್ದೂರಿ ಕಾರು, ಬೈಕ್‌ಗಳನ್ನು ಹೊಂದಿರುವವರ ಸಮಸ್ಯೆಯೇ ಅಲ್ಲ. ಈ ದೇಶದಲ್ಲಿ, ವಾಹನಗಳ ಮೂಲಕವೇ ಬದುಕು ಕಟ್ಟಿಕೊಳ್ಳುವ ಬಡ ವರ್ಗಗಳಿವೆ. ಆಟೋ ರಿಕ್ಷಾ, ಟ್ಯಾಕ್ಸಿಯಂತಹ ವಾಹನಗಳನ್ನು ಇಟ್ಟುಕೊಂಡು ದಿನ ದೂಡುವವರು ಇವರು. ಪ್ರತೀ ದಿನ ಹೆಚ್ಚುತ್ತಿರುವ ಬೆಲೆ ಇವರ ಮೇಲೆ ನೇರವಾಗಿ ತನ್ನ ಪರಿಣಾಮಗಳನ್ನು ಬೀರಿದೆ.

ಈ ಬೆಲೆಯೇರಿಕೆಯ ಕೆಡುಕುಗಳು ಇಲ್ಲಿಗೇ ಮುಗಿಯುವುದಿಲ್ಲ. ಇಂದು ದೇಶದ ಮೂಲೆ ಮೂಲೆಗೆ ದಿನಸಿ, ತರಕಾರಿ, ಆಹಾರ ಪದಾರ್ಧಗಳನ್ನು ಸಾಗಿಸುವ ಲಾರಿಗಳು, ಟ್ರಕ್‌ಗಳು, ಟೆಂಪೋಗಳಂತಹ ಲಕ್ಷಾಂತರ ವಾಹನಗಳ ಮೇಲೂ ಪೆಟ್ರೋಲ್ ಬೆಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್ ಬೆಲೆ ಹಳಿತಪ್ಪಿದಂತೆಯೇ ಈ ವಾಹನಗಳ ಮಾಲಕರು, ಚಾಲಕರ ಸ್ಥಿತಿ ಚಿಂತಾಜನಕವಾಗತೊಡಗುತ್ತದೆೆ. ಸಾಗಾಟ ವೆಚ್ಚ ಹೆಚ್ಚಿದ ಹಾಗೆಯೇ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚತೊಡಗುತ್ತದೆ. ಇಷ್ಟು ಸಣ್ಣ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಮನುಷ್ಯನೊಬ್ಬ ಕೇಂದ್ರದಲ್ಲಿ ಸಚಿವರಾಗಿರುವುದೇ ದೇಶದ ಜನರ ದುರ್ಗತಿಯನ್ನು ಹೇಳುತ್ತದೆ. ಈ ಸಚಿವರು ಇನ್ನೊಂದು ಬೀಸು ಹೇಳಿಕೆಯನ್ನೂ ನೀಡಿದ್ದಾರೆ. ಈ ದೇಶದಲ್ಲಿ ಶೇ. 30ರಷ್ಟು ಭಾರತೀಯರು ಶೌಚಾಲಯಗಳಿಲ್ಲದೆ ನರಳುತ್ತಿದ್ದಾರಂತೆ. ಸಂಗ್ರಹಿಸುವ ತೆರಿಗೆಯನ್ನು ಇವರಿಗಾಗಿ ಬಳಸುತ್ತಾರಂತೆ. ಬಹುಶಃ ಬಡ ಜನರ ಏಳಿಗೆಗಾಗಿ ಪೆಟ್ರೋಲ್ ಮೇಲಿನ ದರವನ್ನು ಹೆಚ್ಚಿಸಲಾಗುತ್ತಿದೆ ಎಂಬ ಸಮರ್ಥನೆಯನ್ನು ನೀಡಿದ ದೇಶದ ಮೊತ್ತ ಮೊದಲ ಸಚಿವರು ಇವರು.

ಪೆಟ್ರೋಲ್ ಬೆಲೆ ಏರಿಕೆಯೂ ಅಂತಿಮವಾಗಿ ಬಡವರ ಬದುಕಿನ ಮೇಲೆಯೇ ದಾಳಿ ನಡೆಸುತ್ತದೆ ಎನ್ನುವ ಸೂಕ್ಷ್ಮ ಸಂಗತಿಯೂ ಇವರಿಗೆ ತಿಳಿದಂತಿಲ್ಲ. ಇರಲಿ, ದೇಶದ ಶೌಚಾಲಯ ನಿರ್ಮಾಣ ಮಾಡಲು ಇದನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಇಂದು ಸ್ವಚ್ಛತಾ ಸೆಸ್ ಎಂದು ಜನರಿಂದ ಸರಕಾರ ತೆರಿಗೆಯನ್ನು ವಸೂಲು ಮಾಡುತ್ತಿದೆ. ಈ ತೆರಿಗೆ ಯಾರ ಶೌಚಾಲಯಕ್ಕೆ ಹೋಗಿ ಸೇರುತ್ತದೆ? ಎನ್ನುವುದನ್ನಾದರೂ ಈ ಸಚಿವರು ಜನರಿಗೆ ವಿವರಿಸಬೇಕಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಶೇ. 50ರಷ್ಟು ಕುಸಿತವುಂಟಾಗಿದ್ದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಏರಿಕೆಯನ್ನು ಕಂಡಿದೆ. ಖಾಸಗಿ ಕಾರ್ಪೊರೇಟ್ ಸಂಸ್ಥೆಗಳು ಪೆಟ್ರೋಲ್ ಬೆಲೆಯೇರಿಕೆಯ ಮೂಲಕ ಜನರನ್ನು ಹಾಡಹಗಲೇ ದೋಚುತ್ತಿವೆೆ.

ಇಂತಹ ಸಂದರ್ಭದಲ್ಲಿ ಇವುಗಳ ಮೇಲೆ ನಿಯಂತ್ರಣ ನಮ್ಮ ಕೈಯಲ್ಲಿಲ್ಲ ಎನ್ನುವ ಸರಕಾರವನ್ನು ಪ್ರಜಾಸತ್ತಾತ್ಮಕ ತಳಹದಿಯಲ್ಲಿ ನಿಂತಿರುವ ಸರಕಾರವೆಂದು ನಂಬುವುದು ಹೇಗೆ? ಜನರ ಹಿತಾಸಕ್ತಿಗಿಂತ ಕಾರ್ಪೊರೇಟ್ ದಣಿಗಳ ಹಿತಾಸಕ್ತಿ ಕಾಯುವ ಸರಕಾರದಿಂದ ಈ ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವುದು ಸಾಧ್ಯವೇ? ಈಗಾಗಲೇ ನೋಟು ನಿಷೇಧದಿಂದ ದೇಶದ ಅರ್ಥ ವ್ಯವಸ್ಥೆ ಚೆಲ್ಲಾಪಿಲ್ಲಿಯಾಗಿದೆ. ಗ್ರಾಮೀಣ ಉದ್ಯಮವಂತೂ ತೀರಾ ಸಂಕಷ್ಟದಲ್ಲಿದೆ. ಹೀಗಿರುವಾಗ ಪೆಟ್ರೋಲ್ ಬೆಲೆ ಈ ಪರಿಯಲ್ಲಿ ಏರಿಕೆಯಾದರೆ ಜನರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಬಹುದು. ಈಗಾಗಲೇ ಸರಕಾರದ ವಿರುದ್ಧ ದೇಶಾದ್ಯಂತ ಅಸಹನೆ ಭುಗಿಲೇಳುತ್ತಿದೆ. ಈ ಅಸಹನೆಗೆ ಇನ್ನಷ್ಟು ಪೆಟ್ರೋಲ್ ಸುರಿಯುತ್ತಾ ಹೋದರೆ ಅದು ದೇಶವನ್ನು ಸಂಪೂರ್ಣ ಆಹುತಿ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News