ದೇಶದಲ್ಲಿ ‘ಅಚ್ಛೇ ದಿನ್‌’ನ ಹತ್ಯೆ: ಶಿವಸೇನೆ

Update: 2017-09-18 12:15 GMT

ಮುಂಬೈ, ಸೆ. 18: ಹಣದುಬ್ಬರ ಹಾಗೂ ಗಗನಕ್ಕೇರುತ್ತಿರುವ ತೈಲ ಬೆಲೆಯ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಹಾರಾಷ್ಟ್ರದ ಆಡಳಿತಾರೂಡ ಪಕ್ಷದ ಮಿತ್ರ ಪಕ್ಷ ಶಿವಸೇನೆ, ದೇಶದಲ್ಲಿ ಅಚ್ಛೇ ದಿನ್ ಅನ್ನು ಕೊಲೆ ಮಾಡಲಾಗುತ್ತಿದೆ ಎಂದಿದೆ.

ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹೆಚ್ಚು ಬೆಲೆ ನೀಡಲು ಸಾಮರ್ಥ್ಯವಿರುವವರು ಹಸಿವೆಯಿಂದ ಬಳಲುತ್ತಿಲ್ಲ ಎಂದು ಕೇಂದ್ರ ಸಚಿವ ಕೆ.ಜೆ. ಅಲ್ಫೋನ್ಸ್ ನೀಡಿದ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಶಿವಸೇನೆ, ಇಂತಹ ಹೇಳಿಕೆಗಳು ಬೇಜವಾಬ್ದಾರಿಯುತ ಎಂದಿದೆ.

 ತೀವ್ರಗತಿಯಲ್ಲಿ ಏರುತ್ತಿರುವ ತೈಲ ಬೆಲೆಯನ್ನು ಸಂಪುಟದಲ್ಲಿರುವ ಈ ರತ್ನ (ಕೆ.ಜೆ. ಅಲ್ಫೋನ್ಸ್) ಸಮರ್ಥಿಸಿಕೊಳ್ಳುತ್ತಿದೆ. ಯಾಕೆಂದರೆ ಇದು ಎಂದಿಗೂ ತನ್ನ ಕಿಸೆಯಿಂದ ಹಣ ನೀಡಿಲ್ಲ. ಇದು ಬಡವರ ಮುಖಕ್ಕೆ ಉಗುಳಿದಂತೆ. ಈ ಹಿಂದಿನ ಕಾಂಗ್ರೆಸ್ ಆಡಳಿತ ಈ ರೀತಿಯಾಗಿ ಬಡವರನ್ನು ಅವಮಾನಿಸಿರಲಿಲ್ಲ ಎಂದು ಸೇನೆ ಹೇಳಿದೆ.

ತನ್ನ ಮುಖವಾಣಿಯಾದ ಸಾಮ್ನಾ ಹಾಗೂ ದೋಪಹಾರ್ ಕಾ ಸಾಮ್ನಾದ ಕಟು ಸಂಪಾದಕೀಯದಲ್ಲಿ ಶಿವಸೇನೆ, ಅಲ್ಫೋನ್ಸ್ ಅವರು ಏರುತ್ತಿರುವ ತೈಲ ಬೆಲೆಯಿಂದ ಯಾರೂ ಸಾಯುತ್ತಿಲ್ಲ ಎಂದು ಸಮರ್ಥಿಸಿಕೊಂಡಿರುವುದು ನಮಗೆ ಆಘಾತ ಉಂಟು ಮಾಡಿದೆ ಎಂದಿದೆ.

 ನೀವು ಮರೆತಿರೇ, ಯುಪಿಎ ಸರಕಾರ ತೈಲ ಬೆಲೆಯನ್ನು ಹೆಚ್ಚಿಸಿದಾಗ ಬಿಜೆಪಿಯ ನಾಯಕರಾದ ರಾಜನಾಥ್ ಸಿಂಗ್, ಸುಶ್ಮಾ ಸ್ವರಾಜ್, ಸ್ಮತಿ ಇರಾನಿ, ಧರ್ಮೇಂದ್ರ ಪ್ರಧಾನ ಖಾಲಿ ಗ್ಯಾಸ್ ಸಿಲಿಂಡರ್‌ಗಳೊಂದಿಗೆ ಪ್ರತಿಭಟನೆ ಮಾಡಿಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News