ತಮಿಳುನಾಡಿನಲ್ಲಿ ವಿಧಾನಸಭೆ ವಿಸರ್ಜನೆ ಸಾಧ್ಯತೆ ?

Update: 2017-09-19 07:50 GMT

ಚೆನ್ನೈ, ಸೆ.19: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದ 18 ಮಂದಿ ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ವಿಪಕ್ಷ ಡಿಎಂಕೆಯ ಎಲ್ಲ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಡಿಎಂಕೆ ಶಾಸಕರು ರಾಜೀನಾಮೆ ನೀಡಿದರೆ ವಿಧಾನಸಭೆಯ ವಿಸರ್ಜನೆ ಅನಿವಾರ್ಯವಾಗುತ್ತದೆ.  ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಗುಂಪಿನ 18 ಶಾಸಕರನ್ನು ಸ್ಪೀಕರ್ ಪಿ.ಧನಪಾಲ್ ಸೋಮವಾರ ಅನರ್ಹಗೊಳಿಸಿ ಆದೇಶ ನೀಡಿದ್ದರು. ಈ ಬೆಳವಣಿಗೆಯ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಸರಕಾರವನ್ನು ಉರುಳಿಸಲು ದಿನಕರನ್ ಗುಂಪಿನ ಶಾಸಕರು ಪ್ರಯತ್ನ ನಡೆಸುತ್ತಿರುವಾಗಲೇ ಸ್ಪೀಕರ್ ಆದೇಶ ದಿನಕರನ್ ಗುಂಪಿಗೆ ಆಘಾತ ನೀಡಿತ್ತು. ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ಸರಕಾರ ಬಹುಮತ ಕಳೆದುಕೊಳ್ಳುವ ಭೀತಿಯಿಂದ ಪಾರಾಗುವ ಲಕ್ಷಣ ಕಾಣಿಸಿಕೊಂಡ ಬೆನ್ನಲ್ಲೇ ಡಿಎಂಕೆ ಪ್ರತಿತಂತ್ರ ರಚಿಸಿದ್ದು,  ಡಿಎಂಕೆಯ ಶಾಸಕರು ತಮ್ಮ ರಾಜೀನಾಮೆಯನ್ನು ಪಕ್ಷದ ನಾಯಕ ಎ.ಕೆ.ಸ್ಟಾಲಿನ್ ಗೆ ನೀಡಲು  ತಯಾರಿ ನಡೆಸಿದ್ದಾರೆಂದು ತಿಳಿದು ಬಂದಿದೆ. 

ಡಿಎಂಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದರೆ ತಮಿಳುನಾಡು ವಿಧಾನಸಭೆಯ ವಿಸರ್ಜನೆ ಅನಿವಾರ್ಯವಾಗಲಿದೆ.

ಈ ನಡುವೆ ಅಮಾನತುಗೊಂಡಿರುವ ಎಐಎಡಿಎಂಕೆ ಶಾಸಕರು ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ನ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ಎಂ.ದುರೈಸ್ವಾಮಿ ಬುಧವಾರ  ಇವರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಡಿಎಂಕೆ ಶಾಸಕರ ರಾಜೀನಾಮೆ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ತುರ್ತಾಗಿ ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ತಮ್ಮ ನಿವಾಸದಲ್ಲಿ ಎಡಿಎಎಂಕೆ ಶಾಸಕರ ಸಭೆ ಕರೆದು ಚರ್ಚಿಸುತ್ತಿದ್ದಾರೆ.   ಇಂದು  ಸಂಜೆ ಮುಖ್ಯ ಮಂತ್ರಿ ಎ.ಪಳನಿಸ್ವಾಮಿ  ಅವರು ಉಸ್ತುವಾರಿ  ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿಯಾಗಿ  ಶಾಸಕರ ಅನರ್ಹತೆಯ  ಬಗ್ಗೆ ಚರ್ಚಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News