ಖಿನ್ನತೆಗೊಳಾಗಿರುವ ದೇಶ

Update: 2017-09-20 18:57 GMT

ಕೆಲವೊಮ್ಮೆ ನಮಗೆ ವಾಸ್ತವಗಳಿಗಿಂತ ಭ್ರಮೆಗಳೇ ಇಷ್ಟವಾಗಿ ಬಿಡುತ್ತದೆ. ಈ ದೇಶದಲ್ಲಿ ಮಾನಸಿಕ ಖಿನ್ನತೆಯಿಂದ ನರಳುವವರಲ್ಲಿ ಹೀಗೆ ವಾಸ್ತವಕ್ಕೆ ಮುಖ ಮಾಡಿ ಬದುಕುವವರೇ ಹೆಚ್ಚು ಎಂದು ಒಂದು ವರದಿ ಹೇಳುತ್ತದೆ. ತನ್ನ ಮುಂದಿರುವ ಸಂಕಷ್ಟಗಳನ್ನು, ವಾಸ್ತವಗಳನ್ನು ಎದುರಿಸಲು ವಿಫಲವಾಗುವ ಮನುಷ್ಯ ತನ್ನೊಳಗೆ ರಮ್ಯವಾದ ಭ್ರಮೆಗಳನ್ನು ಸೃಷ್ಟಿಸಿಕೊಂಡು ಅದರೊಳಗೆ ಬದುಕುತ್ತಿರುತ್ತಾನೆ. ಅದು ನಿಜವಲ್ಲ ಎನ್ನುವುದು ಗೊತ್ತಿದ್ದರೂ. ನಿಧಾನಕ್ಕೆ ಆತ ಭ್ರಮೆಯನ್ನು ಅದೆಷ್ಟು ಅಪ್ಪಿಕೊಂಡು ಬಿಡುತ್ತಾನೆ ಎಂದರೆ, ಇದುವೇ ನಿಜ ಎಂದು ತನಗೆ ತಾನೇ ಭಾವಿಸುತ್ತಾನೆ.

ಇದು ಅನೇಕ ಸಂದರ್ಭಗಳಲ್ಲಿ ಮಲ್ಟಿಪಲ್ ಪರ್ಸನಾಲಿಟಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಕಾಯಿಲೆ ವಿಪರೀತ ಮಟ್ಟಕ್ಕೆ ತಲುಪಿದಾಗ, ಹೊರಗಿನ ಜನರಿಗೆ ಗೊತ್ತಾಗಿ ಬಿಡುತ್ತದೆ. ಸದ್ಯಕ್ಕೆ ಭಾರತದ ವ್ಯಕ್ತಿತ್ವವೂ ಇಂತಹದೊಂದು ಮಾನಸಿಕ ಖಿನ್ನತೆಯಿಂದ ನರಳುತ್ತಿದೆಯೋ ಎಂಬ ಆತಂಕ ಆರ್ಥಿಕ ತಜ್ಞರನ್ನು ಕಾಡುತ್ತಿದೆ.

ಹಾಗೆ ನೋಡಿದರೆ ನರೇಂದ್ರ ಮೋದಿಯ ಸೃಷ್ಟಿಯೇ ನಮಗೆ ನಾವೇ ಮಾಡಿಕೊಂಡಿರುವ ಒಂದು ರಮ್ಯ ಕಲ್ಪನೆ. ಭಾರತಕ್ಕೊಬ್ಬ ‘ಉಕ್ಕಿನ ಮನುಷ್ಯ’ ಬೇಕಾಗಿತ್ತು ಮತ್ತು ಅದಕ್ಕಾಗಿ ತೀರಾ ಹಪಹಪಿಸುತ್ತಿದ್ದಾಗ ಈ ದೇಶ ಅದನ್ನು ಗುರುತಿಸಲು ಪ್ರಯತ್ನಿಸಿದ್ದು ನರೇಂದ್ರ ಮೋದಿಯಲ್ಲಿ. ಮತ್ತು ಜನರ ಈ ದೌರ್ಬಲ್ಯವನ್ನು ತಮಗೆ ಪೂರಕವಾಗಿ ಬಳಸಿಕೊಂಡದ್ದು ಕಾರ್ಪೊರೇಟ್ ಶಕ್ತಿಗಳು. ಆರೆಸ್ಸೆಸ್, ಮಾಧ್ಯಮಗಳು ಮತ್ತು ಕಾರ್ಪೊರೇಟ್ ವಲಯ ಜೊತೆ ಸೇರಿ ಜನರು ನಿರೀಕ್ಷಿಸುತ್ತಿರುವ ಒಂದು ರಮ್ಯ ವ್ಯಕ್ತಿತ್ವವನ್ನು ಸೃಷ್ಟಿಸಿತು. ಗುಜರಾತ್ ಇಡೀ ದೇಶದಲ್ಲೇ ಅಭಿವೃದ್ಧಿಯ ಉತ್ತುಂಗದಲ್ಲಿದೆ ಎಂಬ ವರದಿಗಳೊಂದಿಗೆ ಮೋದಿಯ ವೈಭವೀಕರಣ ಆರಂಭವಾಯಿತು. ಅವರ ದೌರ್ಬಲ್ಯಗಳನ್ನೆಲ್ಲ, ಅವರ ಶಕ್ತಿಯಾಗಿ ಬಿಂಬಿಸಲಾಯಿತು.

ಗುಜರಾತ್ ಹತ್ಯಾಕಾಂಡದ ಕಳಂಕವಂತೂ ‘ಆತ್ಮಾಭಿಮಾನದ ಸಂಕೇತ’ವಾಗಿ ಮಾಧ್ಯಮಗಳಲ್ಲಿ ಬಣ್ಣಿಸಲ್ಪಟ್ಟಿತು. ನರೇಂದ್ರ ಮೋದಿಯಲ್ಲಿ, ಈ ದೇಶಕ್ಕೆ ಬೇಕಾಗುವ ‘ವೀರ್ಯವತ್ತಾದ ಪುರುಷ’ನನ್ನು ಗುರುತಿಸಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವಂತೂ ಅವರು ಇಟ್ಟ ಹೆಜ್ಜೆಗಳು, ಆಡಿದ ಮಾತುಗಳೆಲ್ಲವೂ ಮಾಧ್ಯಮಗಳ ಮೂಲಕ ವೈಭವೀಕರಿಸಲ್ಪಟ್ಟವು. ವಿದೇಶಗಳೆಲ್ಲ ನರೇಂದ್ರ ಮೋದಿಯ ಮಾತುಗಳಿಗಾಗಿ ಹಪಹಪಿಸುತ್ತಿದೆ ಎನ್ನುವ ಭ್ರಮೆಗಳನ್ನು ಮಾಧ್ಯಮಗಳು ಭಾರತದ ಜನರೊಳಗೆ ಬಿತ್ತಿದವು. ಇಡೀ ದೇಶ ನರೇಂದ್ರ ಮೋದಿ ಘೋಷಿಸಿದ ‘ಅಚ್ಛೇ ದಿನ್’ಗಾಗಿ ಕಾಯತೊಡಗಿತು.

ವಿದೇಶಿಯರಿಗೆ ರಕ್ಷಣಾ ಇಲಾಖೆಯನ್ನು ತೆರೆದುಕೊಟ್ಟದ್ದು, ಚಿಲ್ಲರೆ ಮಾರುಕಟ್ಟೆಯನ್ನು ಮುಕ್ತಗೊಳಿಸಿದ್ದು ಸೇರಿದಂತೆ ಹತ್ತು ಹಲವು ಆತಂಕಕಾರಿ ನಿರ್ಧಾರಗಳನ್ನು ಮೋದಿ ತೆಗೆದುಕೊಂಡಾಗ, ಅವೆಲ್ಲವೂ ದೇಶಕ್ಕೆ ಒಳಿತನ್ನು ಮಾಡುತ್ತದೆ ಎಂದು ಕಣ್ಣು ಮುಚ್ಚಿ ನಂಬತೊಡಗಿದರು. ಮೋದಿಯವರು ಮನಮೋಹನ್ ಸಿಂಗರಂತೆ ಆರ್ಥಿಕ ತಜ್ಞರಲ್ಲ. ನೆಹರೂವಿನಂತೆ ರಾಜಕೀಯ ಮುತ್ಸದ್ದಿಯಲ್ಲ. ಇಂದಿರಾಗಾಂಧಿಯಂತೆ ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿದವರೂ ಅಲ್ಲ. ಮೋದಿಯರನ್ನು ಕಾರ್ಪೊರೇಟ್ ಶಕ್ತಿಗಳೇ ನಿಯಂತ್ರಿಸುತ್ತಿವೆ. ಇವೆಲ್ಲದರ ಬಗ್ಗೆ ಅಸಮಾಧಾನವಿದ್ದರೂ, ಜನರು ಮೋದಿಯನ್ನು ಅನುಮಾನಿಸಲಿಲ್ಲ.

ನಿರೀಕ್ಷಿಸದ ಅಚ್ಛೇದಿನ್ ಬರದೇ ಇದ್ದಾಗ, ಹಿಂದಿನ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳನ್ನು ಮಾಡಿ ಮೋದಿಯನ್ನು ಸಮರ್ಥಿಸತೊಡಗಿದರು. ಅವರಿಗೆ ಎಪ್ಪತ್ತು ವರ್ಷ ಕೊಟ್ಟಿರಿ, ನಮಗೆ 25 ವರ್ಷ ಕೊಡಿ ಎಂದು ಬಿಜೆಪಿ ಹೇಳತೊಡಗಿತು. ಹೀಗೆ ಹೇಳತೊಡಗಿದ ಬೆನ್ನಿಗೇ ನೋಟು ನಿಷೇಧವನ್ನು ಮಾಡಿತು. ಆರಂಭದಲ್ಲಿ ಜನರೇನೋ ರೋಮಾಂಚನಗೊಂಡರು. ದೇಶದ ಶ್ರೀಮಂತರೆಲ್ಲ ಬೀದಿಗೆ ಬೀಳುತ್ತಾರೆ ಎಂದು ಮಾಧ್ಯಮಗಳು ಬಿಂಬಿಸತೊಡಗಿದವು. ಆದರೆ ಕೊನೆಗೂ ಬೀದಿಗೆ ಬಿದ್ದದ್ದು ಈ ದೇಶದ ಬಡವರು ಮತ್ತು ಮಧ್ಯಮವರ್ಗದ ಜನರು. ‘‘ನಮಗೆ 50 ದಿನ ಕೊಡಿ. ಬಳಿಕ ಬೇಕಾದರೆ ಬೆಂಕಿ ಹಚ್ಚಿ ಕೊಂದುಬಿಡಿ’’ ಎಂಬರ್ಥದ ಮಾತುಗಳನ್ನು ಪ್ರಧಾನಿ ಮೋದಿ ಆಡಿದರು. ಜನರು ನಂಬಿದರು. ಸಮಯವನ್ನೂ ಕೊಟ್ಟರು.

ಆದರೆ ಇದೀಗ ನೋಡಿದರೆ ಕಪ್ಪುಹಣ ಬ್ಯಾಂಕಿಗೆ ಬಂದು ಬೀಳಲೇ ಇಲ್ಲ ಎನ್ನುವುದು ಬಯಲಾಗಿದೆ. ಜನರು ಅನುಭವಿಸಿದ ಕಷ್ಟಗಳೆಲ್ಲ ವ್ಯರ್ಥವಾಗಿದೆ. ಇಡೀ ದೇಶದ ಅರ್ಥವ್ಯವಸ್ಥೆ ಕುಸಿದು ಬಿದಿದ್ದೆ. ಇದರ ಬೆನ್ನಿಗೇ ಜಿಎಸ್‌ಟಿಯಿಂದ ಬೆಲೆಗಳೆಲ್ಲ ಇಳಿಕೆಯಾಗುತ್ತದೆ ಎಂದು ಸರಕಾರ ನಂಬಿಸಿತು. ಇದೀಗ ನೋಡಿದರೆ ‘ತಾಂತ್ರಿಕ ದೋಷ’ ಎಂದು ಹೇಳಿ ಸರಕಾರ ಹೊಣೆಯಿಂದ ಜಾರಿಕೊಳ್ಳುತ್ತಿದೆ. ದೇಶದ ಆರ್ಥಿಕ ಕುಸಿತ ಇಂದಿನ ಸಮಸ್ಯೆಯಲ್ಲ. ಬಹುದೊಡ್ಡ ಸಮಸ್ಯೆ ಈ ಕುಸಿತವನ್ನು ಮುಚ್ಚಿಡುವ ಪ್ರಯತ್ನ. ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಇನ್ನೂ ನಂಬಿಸುವ ಪ್ರಯತ್ನದ ಬಗ್ಗೆ ನಾವು ಆತಂಕ ಪಡಬೇಕಾಗಿದೆ. ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲದ ದೇಶ ನಿಧಾನಕ್ಕೆ ತನ್ನ ಭ್ರಮೆಯೊಳಗೇ ಸುಖವಾಗಿರಲು ಹೊರಟಿದೆ.

ಇದು ಖಿನ್ನತೆಯ ಹಾದಿ. ಇದು ದೇಶವನ್ನು ಆತ್ಮಹತ್ಯೆಯೆಡೆಗೆ ದೂಡೀತೇ ಹೊರತು, ಮೇಲೆತ್ತಲಾರದು ಎಂಬ ಎಚ್ಚರಿಕೆ ನಮಗಿರಬೇಕು. ಆದುದರಿಂದ ವಾಸ್ತವವನ್ನು ಒಪ್ಪಿಕೊಳ್ಳುವುದೇ ಭವಿಷ್ಯವನ್ನು ಎದುರಿಸಲು ನಮಗಿರುವ ದಾರಿ. ಈ ನಿಟ್ಟಿನಲ್ಲಿ ಸರಕಾರ ಜನರನ್ನು ಇನ್ನೂ ಮೂರ್ಖರನ್ನಾಗಿಸುವ ತಂತ್ರದಲ್ಲಿ ಮುಂದುವರಿಯುತ್ತಿದೆಯಾದರೂ, ನಿಧಾನಕ್ಕೆ ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಸರಕಾರದ ಮಿತ್ರರನ್ನು ಆತಂಕದಲ್ಲಿ ಕೆಡವಿದೆ. ಇಂದು ಕೇಂದ್ರ ಸರಕಾರದ ನೀತಿಯ ವಿರುದ್ಧ ವಿರೋಧ ಪಕ್ಷಗಳ ಮಾತುಗಳು ಸೋತಿವೆ. ಆದರೆ ಬಿಜೆಪಿಯೊಳಗಿರುವವರೇ ದೇಶದ ಅಧೋಗತಿಯ ಕುರಿತಂತೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಗೆ ಆತ್ಮೀಯರಾಗಿರುವ ಚಿಂತಕ ಸುಬ್ರಮಣಿಯನ್ ಸ್ವಾಮಿ ‘‘ದೇಶದ ಆರ್ಥಿಕತೆ ಸಂಪೂರ್ಣ ಕುಸಿತದತ್ತ ಸಾಗುತ್ತಿದೆ’’ ಎಂದಿದ್ದಾರೆ.

‘‘ಇನ್ನೂ ಏನೂ ಮಾತನಾಡದೆ ಇದ್ದರೆ ನಾವು ಆರ್ಥಿಕ ಬಿಕ್ಕಟ್ಟಿನತ್ತ ಸಾಗಬೇಕಾಗಬಹುದು. ಬ್ಯಾಂಕ್‌ಗಳು ಕುಸಿಯಬಹುದು. ಫ್ಯಾಕ್ಟರಿಗಳು ಮುಚ್ಚಬಹುದು’’ ಎಂದಿದ್ದಾರೆ. ಬಹುಶಃ ಒಂದು ವಿರೋಧ ಪಕ್ಷ ಮಾತನಾಡುವ ಭಾಷೆಯಲ್ಲಿ ಶಕ್ತವಾಗಿ, ನೇರವಾಗಿ ಈ ಮಾತುಗಳನ್ನು ಸುಬ್ರಮಣಿಯನ್ ಸ್ವಾಮಿ ಹೇಳಿರಬೇಕಾದರೆ ದೇಶದ ಪರಿಸ್ಥಿತಿ ಎಷ್ಟು ತಳಮಟ್ಟದಲ್ಲಿದೆ ಎನ್ನುವುದನ್ನು ನಾವೇ ಕಲ್ಪಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಜಿಡಿಪಿ ಕುಸಿತ ವಾಸ್ತವ ಎನ್ನುವ ಅಂಶವನ್ನು ಎಸ್‌ಬಿಐ ಸಂಶೋಧನಾ ವರದಿ ಸ್ಪಷ್ಟಪಡಿಸಿದೆ. ‘‘ಇದೊಂದು ತಾಂತ್ರಿಕ ವಿದ್ಯಮಾನವಾಗಿರದೆ ಕಟು ವಾಸ್ತವ ಸಂಗತಿಯಾಗಿದೆ’’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ಅಭಿಪ್ರಾಯ ಪಟ್ಟಿದೆ.

ಶಿವಸೇನೆಯಂತೂ ಬಿಜೆಪಿಯ ಮೇಲೆ ಕಳೆದೆರಡು ತಿಂಗಳುಗಳಿಂದ ವಿರೋಧಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೆಸ್ಸೆಸ್ ಕೂಡ ಬಿಜೆಪಿಯನ್ನು ಎಚ್ಚರಿಸಿದೆ. ಜನರನ್ನು ಭಾವನಾತ್ಮಕವಾಗಿ ವಿಸ್ಮತಿಯಲ್ಲಿಟ್ಟು ಒಂದು ಸರಕಾರ ಹೆಚ್ಚು ಸಮಯ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಮೋದಿ ನೇತೃತ್ವದ ಸರಕಾರ ಒಪ್ಪಿಕೊಳ್ಳಬೇಕಾಗಿದೆ. ಅಭಿವೃದ್ಧಿಯನ್ನು ಕಟ್ಟಿ ನಿಲ್ಲಿಸಬೇಕಾದುದು ವಾಸ್ತವದ ತಳಹದಿಯ ಮೇಲೆ. ದುರದೃಷ್ಟವಶಾತ್ ವಾಸ್ತವಕ್ಕೆ ಬೆನ್ನುಹಾಕಿ, ಪುರಾಣ ಕಾಲದ ಭಾರತವನ್ನು ಮತ್ತೆ ಅಗೆದು ತೆಗೆಯುವ ಪ್ರಯತ್ನವನ್ನು ಸರಕಾರ ಮಾಡಿತು. ಜನರೂ ಅದನ್ನು ನಂಬಿದರು.

ಅಲೋಪತಿ ವೈದ್ಯಕೀಯಕ್ಕೆ ಮಹತ್ವ ನೀಡುವ ಬದಲು ಆಯುಷ್‌ರಂತಹ ಸಂಸ್ಥೆಗಳಿಗೆ ಬೇಕಾಬಿಟ್ಟಿಯಾಗಿ ನಿಧಿಯನ್ನು ಹಂಚಿತು. ರಾಮ್‌ದೇವ್‌ನಂತಹ ನಕಲಿ ವೈದ್ಯರನ್ನು ಕೊಬ್ಬಿಸಿತು. ಆರೋಗ್ಯ ಕ್ಷೇತ್ರದ ಮೇಲೆ ಇದು ಸಾಕಷ್ಟು ದುಷ್ಪರಿಣಾಮ ಬೀರಿತು. ಗೋಮಾತೆಯನ್ನು ರಕ್ಷಿಸುವ ಭ್ರಮೆಯಲ್ಲಿ ರೈತರು ಗೋಮಾರಾಟ ಮಾಡುವುದನ್ನು ನಿಯಂತ್ರಿಸಲು ಹೊರಟಿತು. ಇದರಿಂದ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು. ಜೊತೆಗೆ ಜನರ ಅಭಿವೃದ್ಧಿಗೆ ವ್ಯಯವಾಗಬೇಕಾದ ಹಣ ಗೋಶಾಲೆಗಳಿಗೆ ಹರಿಯಿತು. ನೋಟು ನಿಷೇಧ ಗ್ರಾಮೀಣ ಉದ್ದಿಮೆಗಳನ್ನು ಸರ್ವನಾಶ ಮಾಡಿತು. ವಿಜ್ಞಾನ ಮತ್ತು ಇತಿಹಾಸದ ಜಾಗಗಳಲ್ಲಿ ಪುರಾಣಗಳನ್ನು ತಂದು ನಿಲ್ಲಿಸಿತು. ಶತಮಾನಗಳ ಹಿಂದಕ್ಕೆ ಭಾರತ ಹೋಗುವುದೇ ಅಭಿವೃದ್ಧಿಯ ನಿಜವಾದ ದಾರಿ ಎಂದು ಜನರನ್ನು ಮೋಸಗೊಳಿಸಿತು.

ನೋಟು ನಿಷೇಧವೂ ಸೇರಿದಂತೆ ಆಡಳಿತದಲ್ಲಿ ತನ್ನೆಲ್ಲ ವೈಫಲ್ಯಗಳನ್ನ್ನು ಒಪ್ಪಿಕೊಳ್ಳುವುದೆಂದರೆ, ಮೋದಿ ತನ್ನ ಪೊಳ್ಳು ವ್ಯಕ್ತಿತ್ವವನ್ನು ಕಳಚಿಕೊಂಡು ನೆಲಕ್ಕಿಳಿಯುವುದೆಂದು ಅರ್ಥ. ನಮಗೆ ಮಾತಿನಲ್ಲಿ ಅರಮನೆ ಕಟ್ಟುವ ರಮ್ಯ ನಾಯಕನ ಅಗತ್ಯವಿಲ. ವಾಸ್ತವವನ್ನು ಅರ್ಥಮಾಡಿಕೊಂಡು, ಜನಸಾಮಾನ್ಯರ ಬೇಡಿಕೆಗಳಿಗೆ ಕಿವಿಯಾಗುವ, ಸ್ಪಂದಿಸುವ ನಾಯಕ ಬೇಕಾಗಿದ್ದಾನೆ. ಜನ ಸಾಮಾನ್ಯರು ತಮ್ಮ ರೋಗಕ್ಕೆ ಯೋಗ್ಯ ವೈದ್ಯನನ್ನು ಹುಡುಕಿಕೊಳ್ಳುವ ಕಾಲ ಇದಾಗಿದೆ. ಮೋದಿ ಎನ್ನುವ ಭ್ರಮೆಯನ್ನು ತಲೆಯಿಂದ ಕಿತ್ತೊಗೆದು, ಸರಕಾರವನ್ನು ಜನಸಾಮಾನ್ಯರು ಬೀದಿಗಿಳಿದು ಪ್ರಶ್ನಿಸಲಾರಂಭಿಸಿದ ದಿನ, ಈ ದೇಶದ ಜಿಡಿಪಿ ಚೇತರಿಸಿಕೊಳ್ಳತೊಡಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News