ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಕಚೇರಿಗಳ ಮೇಲೆ ಐಟಿ ದಾಳಿ

Update: 2017-09-21 14:15 GMT

ಬೆಂಗಳೂರು, ಸೆ. 21: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥ ಒಡೆತನದ ಚೆನ್ನೈ, ಮುಂಬೈ, ಚಿಕ್ಕಮಗಳೂರು, ಬೆಂಗಳೂರು ಸೇರಿ 20ಕ್ಕೂ ಹೆಚ್ಚು ‘ಕಾಫಿ ಡೇ’ ಕಚೇರಿಗಳ ಮೇಲೆ 100ಕ್ಕೂ ಹೆಚ್ಚು ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.

ಚಿಕ್ಕಮಗಳೂರು ನಗರದ ಮೂಡಿಗೆರೆ ರಸ್ತೆಯಲ್ಲಿನ ‘ಕಾಫಿ ಡೇ ಗ್ಲೋಬಲ್ ಲಿಮಿಟೆಡ್’ ಘಟಕದ ಮೇಲೆಯೂ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ದಾಖಲೆ ಪತ್ರಗಳ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

500 ರೂ., 1ಸಾವಿರ ರೂ. ನೋಟು ರದ್ದತಿ ಬಳಿಕ ಸಂಶಯಾಸ್ಪದ ರೀತಿಯಲ್ಲಿ ಬೃಹತ್ ಮೊತ್ತದ ಹಣದ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು, ಸಿದ್ಧಾರ್ಥ ಒಡೆತನದ ವಿವಿಧ ಕಂಪೆನಿಗಳ ಕಚೇರಿ ಮತ್ತು ವಿವಿಧೆಡೆಗಳಲ್ಲಿರುವ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆಂದು ಗೊತ್ತಾಗಿದೆ.

‘ಕಾಫಿ ಡೇ’ ಸಮೂಹದ ಮುಖ್ಯಸ್ಥರೂ ಆಗಿರುವ ಸಿದ್ದಾರ್ಥ, 1993ರಲ್ಲಿ ಅಮಾಲ್ಗಮೇಟೆಡ್ ಬೀನ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ, ಆ ಬಳಿಕ ಅದನ್ನು ‘ಕಾಫಿ ಡೇ’ ಎಂಟರ್‌ಪ್ರೈಸಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಗಿತ್ತು. 1996ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಒಂದು ಕಾಫಿ ಡೇ, ಈಗ ನಗರದಲ್ಲೆ ಸುಮಾರು 1600 ಸ್ಥಳಗಳಲ್ಲಿ ಕಾರ್ಯಾರಂಭ ಮಾಡಿದೆ.

ಕಾಫಿ ಪ್ಲಾಂಟೇಷನ್ ಹೊಂದಿರುವ ಕುಟುಂಬದ ಹಿನ್ನೆಲೆ ಹೊಂದಿರುವ ಸಿದ್ದಾರ್ಥ, ಫರ್ನಿಚರ್, ರಿಯಲ್ ಎಸ್ಟೇಟ್, ಕೃಷಿ ಉತ್ಪನ್ನಗಳ ರಫ್ತು ಸೇರಿದಂತೆ ಇನ್ನಿತರ ವ್ಯವಹಾರಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರ ಒಡೆತನದಲ್ಲಿರುವ ವೇಟುವೆಲ್ತ್, ಸೆರಾಯ್ ಎಸ್ಟೇಟ್ ಹಾಗೂ ಗ್ಲೋಬಲ್ ವಿಲೇಜ್ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ವಿಠ್ಠಲ್‌ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕಚೇರಿಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ಕಾರ್ಯ ಕೈಗೊಂಡಿದ್ದು, ಅಲ್ಲಿನ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ, ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸದಾಶಿವನಗರದಲ್ಲಿರುವ ಸಿದ್ಧಾರ್ಥ ಮನೆ ಮತ್ತು ಕಚೇರಿಯಲ್ಲಿಯೂ ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಕೆಲ ದಾಖಲೆಗಳು, ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಸಿದ್ದಾರ್ಥ ತಮ್ಮ ಮನೆಯಲ್ಲೇ ಇದ್ದರು ಎಂದು ಮೂಲಗಳು ತಿಳಿಸಿವೆ.

ಸುಮಾರು 46 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಎಸ್.ಎಂ.ಕೃಷ್ಣ, 1999-2004ರವರೆಗೆ ರಾಜ್ಯದ ಮುಖ್ಯಮಂತ್ರಿ, 2004-08ರವರೆಗೆ ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News