"ಲೈಂಗಿಕ ವ್ಯಸನಿ ಗುರ್ಮೀತ್ ನ ಅನುಯಾಯಿಗಳು ಸಲಿಂಗಕಾಮಿಗಳಾಗಿದ್ದಾರೆ"

Update: 2017-09-22 06:04 GMT

ಚಂಡೀಗಢ,ಸೆ.21 : ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಸ್ವಘೋಷಿತ ದೇವ ಮಾನವ ಹಾಗೂ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಒಬ್ಬ ಲೈಂಗಿಕ ವ್ಯಸನಿ ಎಂದು ಈಗಾಗಲೇ ತಿಳಿದು ಬಂದಿದ್ದರೆ, ಆತನ ಹೆಚ್ಚಿನ ಸಹಚರರು  ಸಲಿಂಗಕಾಮಿಗಳಾಗಿದ್ದಾರೆಂದು ಹೇಳಲಾಗುತ್ತಿದೆ.

ಸಿರ್ಸಾದಲ್ಲಿರುವ ಡೇರಾದ ಮುಖ್ಯ ಕಾರ್ಯಾಲಯದಲ್ಲಿ ಆರು ವರ್ಷಗಳ ಕಾಲ ಇದ್ದು ನಂತರ ಅದರಿಂದ ಹೊರ ಬಂದಿರುವ ಗುರ್ಮೀತ್ ನ ಮಾಜಿ ಅನುಯಾಯಿಯಾಗಿದ್ದ ಗುರುದಾಸ್ ಸಿಂಗ್ ತೂರ್ ಎಂಬವರ ಪ್ರಕಾರ ಡೇರಾದಲ್ಲಿ ಗುರ್ಮೀತ್ ನ ಪುರುಷ ಅನುಯಾಯಿಗಳಿಗಿದ್ದ ಹಲವು ನಿರ್ಬಂಧಗಳಿಂದಾಗಿ ಅವರು ಸಲಿಂಗಕಾಮಿಗಳಾಗುತ್ತಿದ್ದರು.

``ಗುರ್ಮೀತ್ ನಿಗೆ ಇತರ ಪುರುಷರನ್ನು ನೋಡಿದಾಗ ಮತ್ಸರವಾಗುತ್ತಿತ್ತು. ಇದೇ ಕಾರಣದಿಂದ ಆತ ಅವರನ್ನು ತನ್ನ ಮಹಿಳಾ ಅನುಯಾಯಿಗಳೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ,'' ಎಂದು ಸಿಂಗ್ ವಿವರಿಸಿದ್ದಾರೆ. ``ಕೆಲವು ಪುರುಷ ಅನುಯಾಯಿಗಳ ಮುಖಕ್ಕೆ ಮಸಿ ಬಳಿದು ಕತ್ತೆ ಸವಾರಿ ಮಾಡುವಂತೆ ಮಾಡಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಲಾಗುತ್ತಿದ್ದರೆ, ಇನ್ನು ಕೆಲವರಿಗೆ ಬಹಿರಂಗವಾಗಿ ಕೆನ್ನೆಗೆ ಬಾರಿಸಲಾಗುತ್ತಿತ್ತು. ಹೀಗೆ ಸಾರ್ವಜನಿಕವಾಗಿ ಆಗುತ್ತಿದ್ದ ಅವಮಾನದಿಂದ ಆತನ ಹಲವು ಪುರುಷ ಅನುಯಾಯಿಗಳು ಸಲಿಂಗಕಾಮಿಗಳಾಗುತ್ತಿದ್ದರು,'' ಎಂದು ಸಿಂಗ್ ಹೇಳಿದ್ದಾರೆ.

ಗುರ್ಮೀತ್ ನ ಕೆಲವು ಪುರುಷ ಅನುಯಾಯಿಗಳು ಅಸಭ್ಯ ಭಂಗಿಯಲ್ಲಿ ಜತೆಗಿರುವುದನ್ನು ತಾನು ನೋಡಿದ್ದಾಗಿ ಹಾಗೂ ಒಮ್ಮೆ  ಇಬ್ಬರು ಯುವಕರು ಪ್ರಾರ್ಥನಾ ಸ್ಥಳದಲ್ಲಿ ಹೀಗೆ ಅಸಭ್ಯ ಭಂಗಿಯಲ್ಲಿರುವುದನ್ನು ಗುರ್ಮೀತ್ ಗಮನಕ್ಕೆ ತಂದಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

``ಡೇರಾದಲ್ಲಿ ಸಲಿಂಗಕಾಮ ವಾಸ್ತವ. ಕೆಲವರು ತಮ್ಮ ಲೈಂಗಿಕ ಬಯಕೆಗಳನ್ನು ಈಡೇರಿಸಲು ಸಲಿಂಗಕಾಮಕ್ಕೆ ಮೊರೆ ಹೋದರೆ ಇನ್ನು ಕೆಲವರು ಕಿರಿಯರನ್ನು ಅಥವಾ ಡೇರಾಗೆ ಆಗಮಿಸಿದ ಹೊಸಬರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಇದರ ವಿರುದ್ಧ ದನಿಯೆತ್ತಿದವರನ್ನು ಹೊರ ಕಳುಹಿಸಲಾಗುತ್ತಿತ್ತು.

 ಕೊಲೆ, ಕೊಲೆ ಯತ್ನ  ಮತ್ತಿತರ ಘೋರ ಅಪರಾಧಗಳ ಸಂಚು ಹೂಡಿದ ಅಪರಾಧವನ್ನು ಗುರ್ಮೀತ್ ನ  ಸುಮಾರು ಅರ್ಧ ಡಜನ್ ಸಹಚರರು ಎದುರಿಸುತ್ತಿದ್ದಾರೆ. ಇವರ ಅಕ್ರಮಗಳನ್ನು ಇತರರು ತಮ್ಮ ಜೀವಕ್ಕೆ ಹೆದರಿ ಸಹಿಸುತ್ತಿದ್ದರು ಎಂದೂ ಸಿಂಗ್ ಬಹಿರಂಗ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News