​ಸ್ಪೈಸ್ ಜೆಟ್ ನ ಅಜಯ್ ಸಿಂಗ್ ತೆಕ್ಕೆಗೆ ಎನ್‍ಡಿಟಿವಿ ?

Update: 2017-09-22 09:04 GMT

ಹೊಸದಿಲ್ಲಿ,ಸೆ.21 : ಅಗ್ಗದ ದರದಲ್ಲಿ ವಿಮಾನಯಾನ ಸೌಕರ್ಯ ಒದಗಿಸುವ ಸ್ಪೈಸ್ ಜೆಟ್ ಸಹ ಸಂಸ್ಥಾಪಕ ಮತ್ತು ಮಾಲಕ ಅಜಯ್ ಸಿಂಗ್ ಅವರು  ಸುದ್ದಿ ವಾಹಿನಿ ಎನ್‍ಡಿಟಿವಿಯಲ್ಲಿ ಶೇ. 40ರಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ಬಿಜೆಪಿಯ 2014ರ ಚುನಾವಣಾ ಪ್ರಚಾರದ ಘೋಷವಾಕ್ಯ `ಅಬ್ ಕಿ ಬಾರ್ ಮೋದಿ ಸರ್ಕಾರ್' ಅನ್ನು ಅಜಯ್ ಸಿಂಗ್ ರಚಿಸಿದ್ದರೆಂಬುದು ಇಲ್ಲಿ ಗಮನಾರ್ಹ.
ಎನ್‍ಡಿಟಿವಿಯ ಸದ್ಯದ ಪ್ರವರ್ತಕರಾಗಿರುವ ಪ್ರಣಯ್ ರಾಯ್ ಮತ್ತವರ ಪತ್ನಿ ರಾಧಿಕಾ ಕಂಪೆನಿಯಲ್ಲಿ ಶೇ. 20ರಷ್ಟು ಪಾಲುದಾರಿಕೆ ಹೊಂದಲಿದ್ದಾರೆಂಬ ಮಾಹಿತಿಯಿದೆ.

ಸ್ಪೈಸ್ ಜೆಟ್ ಸಂಸ್ಥೆಯನ್ನು ಜನವರಿ  2015ರಲ್ಲಿ ಖರೀದಿಸಿ ಅದರ ಚಿತ್ರಣವನ್ನೇ ಬದಲಾಯಿಸಿದ್ದ ಸಿಂಗ್, ಎನ್‍ಡಿಟಿವಿ ಸಂಸ್ಥೆ ಹೊಂದಿರುವ ರೂ. 400 ಕೋಟಿಗೂ ಅಧಿಕ ಸಾಲದ ಜವಾಬ್ದಾರಿಯನ್ನೂ ವಹಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಒಟ್ಟು ಒಪ್ಪಂದದ ಮೊತ್ತ ಸುಮಾರು ರೂ. 600 ಕೋಟಿಯಷ್ಟೆಂದು ಅಂದಾಜಿಸಲಾಗಿದ್ದು ಇದರಲ್ಲಿ ಒಂದು ಭಾಗ (ರೂ. 100 ಕೋಟಿಯಷ್ಟು) ರಾಯ್ ದಂಪತಿಗಳಿಗೆ ಹೋಗಬಹುದೆನ್ನಲಾಗಿದೆ.

``ಒಪ್ಪಂದ ಅಂತಿಮಗೊಂಡಿದೆ ಎನ್‍ಡಿಟಿವಿ ಹಾಗೂ ಅದರ ಸಂಪಾದಕೀಯ ಹಕ್ಕುಗಳನ್ನೂ ಅಜಯ್ ಸಿಂಗ್ ವಹಿಸಲಿದ್ದಾರೆ''ಎಂದು ಮೂಲಗಳು ತಿಳಿಸಿವೆ.
ಅದರೆ ಸ್ಪೈಸ್ ಜೆಟ್ ಅಧಿಕಾರಿಯೊಬ್ಬರು ಈ ವರದಿಯನ್ನು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತ' ಎಂದು ಬಣ್ಣಿಸಿದ್ದಾರೆ.  ಎನ್‍ಡಿಟಿವಿ ಈ ಸುದ್ದಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.

ಬಾಂಬೆ ಸ್ಟಾಕ್ ಎಕ್ಸ್ ಚೇಂಚ್  ಮಾಹಿತಿಯ ಪ್ರಕಾರ ಜೂನ್ 2017ರಂತೆ ಎನ್‍ಡಿಟಿವಿಯ ಪ್ರವರ್ತಕರ ಪಾಲುದಾರಿಕೆ ಶೇ 61.45 ಇದ್ದರೆ, ಸಾರ್ವಜನಿಕ ಪಾಲುದಾರಿಕೆ ಶೇ 38.55 ರಷ್ಟಿತ್ತು.

ಷೇರು ವ್ಯವಹಾರವೊಂದನ್ನು ಗೌಪ್ಯವಾಗಿರಿಸಿದ್ದಕ್ಕೆ ರಾಯ್ ದಂಪತಿಗಳು ಹಾಗೂ ಸಂಸ್ಥೆಯ ಪ್ರವರ್ತಕ ಸಂಸ್ಥೆ ಆರ್‍ಆರ್‍ಪಿಆರ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಿಬಿಐ ತನಿಖೆಯೊಂದನ್ನು ಈಗಾಗಲೇ ಎದುರಿಸುತ್ತಿದೆ.

ಜೂನ್ ತಿಂಗಳಲ್ಲಿ ಪ್ರಣಯ್ ರಾಯ್  ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದಿದ್ದರೂ ಸಂಸ್ಥೆ ಮಾತ್ರ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹರಣ ಎಂದು ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News