ರಾಘವೇಶ್ವರ ಭಾರತಿ ಶ್ರೀಯನ್ನು ವಶಕ್ಕೆ ಪಡೆಯುವಂತೆ ಆಗ್ರಹ

Update: 2017-09-22 10:51 GMT

ಬೆಂಗಳೂರು, ಸೆ. 22: ಕನ್ಯಾ ಸಂಸ್ಕಾರ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯನ್ನು ಈ ಕೂಡಲೇ ವಶಕ್ಕೆ ಪಡೆದು ತನಿಖೆ ನಡೆಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಶುಕ್ರವಾರ  ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಕಾರ್ಮಿಕ ಸೇನೆ ಸೇರಿದಂತೆ ನಾನಾ ಸಂಘಟನೆಗಳ ನೇತೃತ್ವದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯನ್ನು ಈ ಕೂಡಲೇ ವಶಕ್ಕೆ ಪಡೆದು ತನಿಖೆ ನಡೆಸುವಂತೆ ಆಗ್ರಹಿಸಿ ಪುರಭವನದಿಂದ ಫ್ರೀಡಂವರೆಗೂ ಬೃಹತ್ ಮೆರವಣಿಗೆ  ನಡೆಸಲಾಯಿತು.

ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ದಲಿತರ ಪರ ಹೋರಾಟಗಾರ್ತಿ ಭೀಮಪುತ್ರಿ ರೇವತಿ ರಾಜ್, ರಾಜ್ಯದಲ್ಲಿ ಜಾತ್ಯತೀತ ಸರಕಾರವಿದ್ದರೂ, ಸ್ವಯಂ ದೇವಮಾನವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಈ ಕೂಡಲೇ ರಾಜ್ಯ ಸರಕಾರ ಒಂದು ಸಮಿತಿ ರಚಿಸಿ ಕನ್ಯಾ ಸಂಸ್ಕಾರದ ಅಸಲಿಯತೆಯನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

ಇದುವರೆಗೂ ಕನ್ಯಾ ಸಂಸ್ಕಾರ ನಡೆದಿರುವ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಿ ಅದರ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಅವರಿಗೆ ರಕ್ಷಣೆ ನೀಡಬೇಕು ಎಂದ ಅವರು, ಸಂವಿಧಾನದ ಅನ್ವಯ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸರಿ ಸಮಾನರು. ಆದರೆ, ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀ ವಿರುದ್ಧ ಈಗಾಗಲೇ ಎರಡೆರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇಂತಹ ಆರೋಪಗಳನ್ನು ಹೊತ್ತಿರುವ ಇವರು ಕನ್ಯಾಸಂಸ್ಕಾರವನ್ನು ಮುಂದುವರೆಸಿದ್ದು, ಸರಿಯಲ್ಲ ಎಂದು ಕಿಡಿಕಾರಿದರು.

ರಕ್ಷಣೆ ನೀಡಿ: ರಾಘವೇಶ್ವರ ಭಾರತಿ ಸ್ವಾಮೀಜಿಯಿಂದ ಅನ್ಯಾಯಕ್ಕೊಳಗಾದ ಕೆಲವು ಯುವತಿಯರು ದೂರು ನೀಡಲು ತಯಾರಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಿ ಅವರನ್ನು ಗೌಪ್ಯವಾಗಿ ವಿಚಾರಣೆ ಮಾಡಲು ಸರ್ಕಾರ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ರೇವತಿ ರಾಜ್ ಒತ್ತಾಯ ಮಾಡಿದರು.

ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್ ಮಾತನಾಡಿ, ಕನ್ಯಾ ಸಂಸ್ಕಾರದ ವಿಷಯವಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಏನೇ ಆದರೂ ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸದರಿ ರಾಘವೇಶ್ವರ ಸ್ವಾಮೀಜಿಯೇ  ಹೊಣೆಗಾರರಾಗುತ್ತಾರೆ ಎಂಬುದನ್ನು ಪರಿಗಣಿಸಬೇಕು  ಎಂದು ಹೇಳಿದರು.

ಕರ್ನಾಟಕ ಪ್ರಗತಿಪರ ಚಳವಳಿಗಾರರ ಸಮಿತಿ ರಾಜ್ಯಾಧ್ಯಕ್ಷ ಪಿ.ರಾಜಣ್ಣ, ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಜೆ.ಚಂದ್ರಪ್ಪ, ಕರ್ನಾಟಕ ರಾಜ್ಯ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಜಿ.ವೇಲು, ನಾಗರಾಜ್, ವಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News