ನಕಲಿ ಗೋರಕ್ಷಕರಿಂದ ದೌರ್ಜನ್ಯ: ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ

Update: 2017-09-22 18:41 GMT

  ನಕಲಿ ಗೋರಕ್ಷಕರ ಕುರಿತಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡೆರಡು ಬಾರಿ ಎಚ್ಚರಿಕೆಯ ಮಾತನಾಡಿದ್ದಾರಾದರೂ ಅದರ ಪರಿಣಾಮ ಮಾತ್ರ ಶೂನ್ಯ. ಬಳಿಕ ಈ ನಕಲಿ ಗೋರಕ್ಷಕರ ಹೊಣೆಗಾರಿಕೆಯನ್ನು ಪ್ರಧಾನಿ ಆಯಾ ರಾಜ್ಯಗಳ ಹೆಗಲಿಗೆ ಜಾರಿಸಿ ಬಿಟ್ಟರು. ಇದೀಗ ಸುಪ್ರೀಂಕೋರ್ಟ್ ಕೂಡ ನಕಲಿ ಗೋರಕ್ಷಕರ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿದೆ. ವಿವಿಧ ಗಣ್ಯರು ನ್ಯಾಯಾಲಯಗಳಿಗೆ ನೀಡಿದ ದೂರಿನ ಪರಿಣಾಮವಾಗಿ ಸುಪ್ರೀಂಕೋರ್ಟ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಗೋರಕ್ಷಕರಿಂದ ದೌರ್ಜನ್ಯಕ್ಕೊಳಗಾಗುವ ಸಂತ್ರಸ್ತರಿಗೆ ಪರಿಹಾರವನ್ನು ನೀಡಲು ರಾಜ್ಯ ಸರಕಾರಕ್ಕೆ ಸೂಚನೆಯನ್ನು ನೀಡಿದೆ. ಆದರೆ ಪರಿಹಾರದ ಸ್ವರೂಪವನ್ನು ಸ್ಪಷ್ಟ ಪಡಿಸಿಲ್ಲ.

ಮುಖ್ಯವಾಗಿ ಗೋರಕ್ಷಕರು ಎಂದರೆ ಯಾರು? ಈ ತಂಡ ರಚನೆಯಾಗಿರುವುದು ಹೇಗೆ? ಯಾಕೆ? ಇದರ ಹಿಂದೆ ರಾಜಕೀಯ ಪಕ್ಷಗಳಿವೆಯೇ? ಇದ್ದರೆ ಅವರು ಯಾವ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟವರು? ಗೋರಕ್ಷಕರಿಗೂ ಹೈನೋದ್ಯಮಕ್ಕೆ ಅಥವಾ ಗೋಸಾಕಣೆಗೆ ಯಾವುದಾದರೂ ಸಂಬಂಧವಿದೆಯೇ? ಅಂದರೆ, ಈ ಗೋರಕ್ಷಕರ ಮನೆಯಲ್ಲಿ ಹಸುಗಳಿವೆಯೇ? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರೆ ಪರಿಹಾರವಾಗುವ ಸಮಸ್ಯೆ ಇದು. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಇರಾದೆ ನ್ಯಾಯಾಲಯಕ್ಕೂ ಇದ್ದಂತಿಲ್ಲ, ಸರಕಾರಕ್ಕಂತೂ ಇಲ್ಲವೇ ಇಲ್ಲ. ಗೋರಕ್ಷಕರು ಯಾರು? ಈ ಪ್ರಶ್ನೆಗೆ ಈ ದೇಶದ ಇತಿಹಾಸ ಮತ್ತು ವರ್ತಮಾನ ನೀಡುವ ಒಂದೇ ಉತ್ತರ ರೈತರು. ಯಾರು ಗೋಸಾಕಣೆಯನ್ನು ಮಾಡುತ್ತಾರೆಯೋ ಅವರೇ ಗೋರಕ್ಷಕರು.

ಗೋವುಗಳನ್ನು ಬದುಕಿನ ಮೂಲಭೂತ ಅಗತ್ಯಗಳಿಗಾಗಿ ಸಾಕುವುದರಿಂದ, ಅದರ ಸಂಪೂರ್ಣ ವಾರಸುದಾರರು ಈ ದೇಶದ ರೈತರೇ ಹೊರತು, ಇನ್ನಾರೂ ಅಲ್ಲ. ಇದೇ ಸಂದರ್ಭದಲ್ಲಿ ಒಂದು ಗುಂಪು ಗೋವನ್ನು ದೇವರು ಎನ್ನುತ್ತದೆ. ಆದರೆ ಅವರು ದೇವರು ಎನ್ನುವ ಕಾರಣಕ್ಕೆ ಮನೆಯಲ್ಲಿ ಗೋವನ್ನು ಸಾಕಿದ ಉದಾಹರಣೆ ಇಲ್ಲ. ಇಂದು ಗೋವು ಉಳಿದಿರುವುದು ಹೈನೋದ್ಯಮಕ್ಕಾಗಿ, ಜೀವನೋಪಾಯಕ್ಕಾಗಿ ಗೋವನ್ನು ಸಾಕುತ್ತಿರುವ ರೈತರಿಂದಾಗಿಯೇ ಹೊರತು, ಗೋವನ್ನು ದೇವತೆ ಎಂದು ಪೂಜಿಸುವವರಿಂದಲ್ಲ. ಆದುದರಿಂದ ಸುಪ್ರೀಂಕೋರ್ಟ್ ಮತ್ತು ಸರಕಾರ ಮೊತ್ತ ಮೊದಲಾಗಿ ರೈತರನ್ನು ನಿಜವಾದ ಗೋರಕ್ಷಕರು ಎಂದು ಅಧಿಕೃತವಾಗಿ ಒಪ್ಪಿಕೊಳ್ಳಬೇಕಾಗಿದೆ. ಆಗ ಸಹಜವಾಗಿಯೇ ಬೀದಿಯಲ್ಲಿ ಕಾರ್ಯಾಚರಿಸುವ ಗೋರಕ್ಷಕರ ನಕಲಿ ಮುಖ ಹೊರ ಬೀಳುತ್ತದೆ.

ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸುವ ಯಾವುದೇ ಗುಂಪು ರೈತಾಪಿವರ್ಗಕ್ಕೆ ಸೇರಿದವರಲ್ಲ. ಗೋವು ತನ್ನ ತಾಯಿ ಎನ್ನುವ ಭಾವನಾತ್ಮಕ ನೆಲೆಯಲ್ಲಿ ಶ್ರೀಸಾಮಾನ್ಯರೇ ಸ್ವಯಂ ಕಾನೂನು ಕೈಗೆತ್ತಿಕೊಂಡು ನಡೆಸುತ್ತಿರುವ ದಾಳಿಯಂತೂ ಅಲ್ಲವೇ ಅಲ್ಲ. ಗೋರಕ್ಷಕರು ಎನ್ನುವುದು ಕ್ರಿಮಿನಲ್‌ಗಳು ಜೊತೆ ಸೇರಿ ಕಟ್ಟಿಕೊಂಡಿರುವ ಒಂದು ಸಂಘಟಿತ ವ್ಯವಸ್ಥೆ. ಇದು ಭಾವನಾತ್ಮಕ ನೆಲೆಯಲ್ಲಿ ರಚನೆಯಾಗಿರುವ ಸಂಘಟನೆಯಲ್ಲ. ಬದಲಿಗೆ ರಾಜಕೀಯ ನೆಲೆಯಲ್ಲಿ ರಚನೆಯಾಗಿರುವುದೂ ಅಲ್ಲ. ಅವರ ಅಂತಿಮ ಗುರಿ, ಗೋವನ್ನು ನೆಪವಾಗಿಟ್ಟುಕೊಂಡು ಸಮಾಜವನ್ನು ಒಡೆಯುವುದು. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿ ದಾಳಿ ನಡೆಸಿ ಕೋಮುಗಲಭೆಗಳಿಗೆ ಸಂಚು ರೂಪಿಸುವುದು. ಇದರ ಫಲಾನುಭವಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷವಾಗಿದೆ. ಆ ರಾಜಕೀಯ ಪಕ್ಷ ಈ ದೇಶವನ್ನು ಆಳುತ್ತಾ ಇದೆ. ಗೋರಕ್ಷಕ ಪಡೆ ಸೃಷ್ಟಿಯಾಗಿರುವುದು ರಾಜಕೀಯ ಕಾರಣಕ್ಕಾಗಿಯೇ ಹೊರತು ಗೋವುಗಳನ್ನು ರಕ್ಷಿಸುವ ಕಾರಣಕ್ಕಾಗಿ ಅಲ್ಲ. ಈ ರಕ್ಷಕ ಪಡೆಗಳ ಗುಂಪುಗಳಲ್ಲಿರುವ ಜನರ ಜಾತಕವನ್ನು ತೆರೆದರೆ, ಅವರಲ್ಲಿ ಬಹಳಷ್ಟು ಜನರು ಈಗಾಗಲೇ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಲ್ಪಟ್ಟವರು. ಪೊಲೀಸ್ ವ್ಯವಸ್ಥೆಗೆ ಪರ್ಯಾಯವಾಗಿ ಕ್ರಿಮಿನಲ್‌ಗಳೇ ನಡೆಸುತ್ತಿರುವ ಈ ವ್ಯವಸ್ಥೆಯನ್ನು ನಿಷೇಧಿಸುವುದಕ್ಕೆ ಸುಪ್ರೀಂಕೋರ್ಟಿಗಾಗಲಿ, ಸರಕಾರಕ್ಕಾಗಲಿ ಹೆಚ್ಚು ಸಮಯ ಬೇಡ. ಇದಕ್ಕಾಗಿ ವರ್ಷಗಟ್ಟಲೆ ವಾದಪ್ರತಿವಾದಗಳನ್ನು ನಡೆಸುತ್ತಿರುವುದೇ ನ್ಯಾಯದ ಅಣಕವಾಗಿದೆ.

ಮುಖ್ಯವಾಗಿ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರೆಸ್ಸೆಸ್ ನಕಲಿ ಗೋರಕ್ಷಕ ಪಡೆಯ ನೇರ ಫಲಾನುಭವಿಗಳಾಗಿರುವುದರಿಂದ ಈ ಪಡೆಗಳನ್ನು ನಿಷೇಧಿಸುವುದು ನ್ಯಾಯಾಲಯಕ್ಕೆ ಕಷ್ಟವಾಗುತ್ತಿದೆ. ಸರಕಾರ ಬಾಯಿ ಮಾತಿನಲ್ಲಷ್ಟೇ ಗೋರಕ್ಷಕರ ವಿರುದ್ಧ ಕಟುವಾಗಿದೆಯೇ ಹೊರತು, ಅದನ್ನು ಜಾರಿಗೊಳಿಸುವ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಪೊಲೀಸ್ ಇಲಾಖೆಗೂ ಇದು ಸ್ಪಷ್ಟವಾಗಿ ಗೊತ್ತಿರುವುದರಿಂದಲೇ, ಹಲ್ಲೆ ನಡೆಸಿದ ದುಷ್ಕರ್ಮಿಗಳ ಮೇಲೆ ಕೇಸು ದಾಖಲಿಸುವ ಮೊದಲೇ, ಹಲ್ಲೆಗೊಳಗಾಗುವ ಸಂತ್ರಸ್ತರ ಮೇಲೆ ಕೇಸು ದಾಖಲಿಸುತ್ತದೆ. ಅಂದರೆ ದೇಶಾದ್ಯಂತ ಪೊಲೀಸರು ಮತ್ತು ಈ ನಕಲಿ ಗೋರಕ್ಷಕರ ನಡುವೆ ಒಂದು ಅನೈತಿಕ ಸಂಬಂಧ ಸ್ಥಾಪನೆಯಾಗಿದೆ. ಪೊಲೀಸ್ ಇಲಾಖೆಗಳಲ್ಲೂ ಸಂಘಪರಿವಾರ ಸಿದ್ಧಾಂತವನ್ನು ಹೊಂದಿದ ಸಿಬ್ಬಂದಿ ವ್ಯಾಪಕವಾಗಿರುವುದರಿಂದ, ಜೊತೆಗೆ ಗೋರಕ್ಷಕರು ನಿರ್ದಿಷ್ಟ ರಾಜಕೀಯ ಪಕ್ಷವೊಂದಕ್ಕೆ ಕಾರ್ಯಕರ್ತರಾಗಿರುವುದರಿಂದ ಸಂತ್ರಸ್ತರಿಗೆ ನ್ಯಾಯ ದೊರಕುವುದು ಕಷ್ಟ. ಇನ್ನು ರಾಜ್ಯ ಸರಕಾರದಿಂದ ಪರಿಹಾರವನ್ನು ನಿರೀಕ್ಷಿಸುವುದಂತೂ ದೂರದ ಮಾತು. ಎಲ್ಲೆಲ್ಲ ಗೋರಕ್ಷಕರಿಂದ ಹಲ್ಲೆ ನಡೆದಿದೆಯೋ ಅಲ್ಲೆಲ್ಲ, ಸಂತ್ರಸ್ತರ ಮೇಲೆಯೇ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅಪರೂಪದ ಪ್ರಕರಣದಲ್ಲಿ ನಕಲಿ ಗೋರಕ್ಷಕರ ಮೇಲೆಯೂ ಪೊಲೀಸರು ಕೇಸು ದಾಖಲಿಸಿದ್ದಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ಇಂತಹದೇ ದುಷ್ಕರ್ಮಿಗಳ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಕ್ರಮ ಕೈಗೊಂಡಿರುವುದಕ್ಕಾಗಿ ಸಂಘಪರಿವಾರದ ನಾಯಕನೊಬ್ಬ ಸಾರ್ವಜನಿಕ ಸಭೆಯಲ್ಲಿ ‘ಪೊಲೀಸ್ ಅಧಿಕಾರಿಯನ್ನು ಬೆತ್ತಲೆಗೊಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡುವೆ’ ಎಂದು ಬೆದರಿಕೆ ಹಾಕಿದ. ಕತ್ತೆಯ ಮೇಲೆ ಪೊಲೀಸ್ ಇಲಾಖೆಗೆ ಅದೇನು ಮೋಹವೋ, ಬೇರೆ ಬೇರೆ ಒತ್ತಡಗಳ ಬಳಿಕ ಈ ಸಂಘಪರಿವಾರದ ನಾಯಕನ ಮೇಲೆ ಒಲ್ಲದ ಮನಸ್ಸಿನಿಂದ ಪ್ರಕರಣ ದಾಖಲಿಸಿತು. ಗೋರಕ್ಷಕ ಪಡೆ ದೇಶಕ್ಕೆ ಯಾಕೆ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನುವುದಕ್ಕೆ ಈ ಒಂದು ಉದಾಹರಣೆಯೇ ಸಾಕು.

 ಸಂತ್ರಸ್ತರಿಗೆ ಪರಿಹಾರ ನೀಡುವುದು ರಾಜ್ಯಸರಕಾರಗಳ ಬಾಧ್ಯತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಆ ಪರಿಹಾರದ ಸ್ವರೂಪ ಹೇಗಿರಬೇಕು ಎನ್ನುವುದನ್ನು ವಿವರಿಸಿಲ್ಲ. ಹಲ್ಲೆಗೊಳಗಾಗುವ ರೈತರಿಗೆ ಸರಕಾರ ನೀಡುವ ನಿಜವಾದ ಪರಿಹಾರ, ನಕಲಿ ಗೋರಕ್ಷಕರಿಗೆ ಶಿಕ್ಷೆಯಾಗುವಂತೆ ಮಾಡುವುದಾಗಿದೆ. ನಕಲಿ ಗೋರಕ್ಷಕರ ವಿರುದ್ಧ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುವುದೇ ಸಂತ್ರಸ್ತರಿಗೆ ಸರಕಾರ ನೀಡುವ ನಿಜವಾದ ಪರಿಹಾರ. ಇದಕ್ಕೆ ಇರುವ ಒಂದೇ ದಾರಿಯೆಂದರೆ, ಈಗ ಅಸ್ತಿತ್ವದಲ್ಲಿರುವ ನಕಲಿ ಗೋರಕ್ಷಕ ಪಡೆಗಳನ್ನು ನಿಷೇಧಿಸುವುದು ಮತ್ತು ಗೋರಕ್ಷಣೆಯ ಹೆಸರಲ್ಲಿ ರೈತರ ಮೇಲೆ ದಾಳಿ ನಡೆಸುವ ದುಷ್ಕರ್ಮಿಯನ್ನು ಬಂಧಿಸಿ, ಆತನಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವುದು. ಇಷ್ಟಾದರೆ, ಅದುವೇ ಸಂತ್ರಸ್ತರಿಗೆ ಸರಕಾರ ಮತ್ತು ನ್ಯಾಯಾಲಯ ನೀಡುವ ಅತ್ಯುತ್ತಮ ಪರಿಹಾರವಾಗಿದೆ. ನಕಲಿ ಗೋರಕ್ಷಕರು ಜೈಲು ಸೇರಿದರೆ, ನಿಜವಾದ ಗೋರಕ್ಷಕರು ನೆಮ್ಮದಿಯಿಂದ ಗೋವುಗಳನ್ನು ಸಾಕುತ್ತಾ ದೇಶಕ್ಕೆ ಹಾಲು, ತುಪ್ಪ, ಮಾಂಸಾಹಾರಗಳನ್ನು ಒದಗಿಸಬಹುದು. ಇಲ್ಲವಾದರೆ ಮನುಷ್ಯ ಮುಂದೊಂದು ಹಾಲಿನ ಬದಲಿಗೆ ಇನ್ನೊಬ್ಬ ಮನುಷ್ಯನ ರಕ್ತವನ್ನೇ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News