ಸಾಲದ ಹಣವನ್ನು ವಿಜಯ ಮಲ್ಯ ಮಾಡಿದ್ದೇನು ಗೊತ್ತೇ?

Update: 2017-09-25 03:49 GMT

ಹೊಸದಿಲ್ಲಿ, ಸೆ.25: ಮದ್ಯ ದೊರೆ ವಿಜಯ ಮಲ್ಯ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಮತ್ತಷ್ಟು ಕಷ್ಟಸಾಧ್ಯವಾಗಿದೆ. ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯ ಇದೀಗ ಈ ವಿವಾದಾಸ್ಪದ ಉದ್ಯಮಿಯ ವಿರುದ್ಧ ಆರೋಪಪಟ್ಟಿ ಅಂತಿಮಪಡಿಸುವ ಹಂತಕ್ಕೆ ಬಂದಿವೆ. ಕಿಂಗ್‌ಫಿಶರ್ ಹೆಸರಿನಲ್ಲಿ ಬ್ಯಾಂಕುಗಳಿಂದ ಪಡೆದ 6,027 ಕೋಟಿ ರೂಪಾಯಿಗಳ ಪೈಕಿ ದೊಡ್ಡ ಮೊತ್ತವನ್ನು ಶೆಲ್ ಕಂಪೆನಿಗಳಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಐರ್ಲೆಂಡ್ ಸೇರಿದಂತೆ ಏಳು ದೇಶಗಳ ಶೆಲ್ ಕಂಪೆನಿಗಳಿಗೆ ಈ ಹಣವನ್ನು ವರ್ಗಾಯಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಆದರೆ 6,027 ಕೋಟಿ ರೂಪಾಯಿಗಳ ಪೈಕಿ ಎಷ್ಟು ಮೊತ್ತವನ್ನು ಹೀಗೆ ವರ್ಗಾಯಿಸಲಾಗಿದೆ ಎಂಬ ಬಗ್ಗೆ ನಿಖರವಾಗಿ ವಿವರಿಸಲು ಅಧಿಕಾರಿ ನಿರಾಕರಿಸಿದರು. ಆದರೆ ದೊಡ್ಡ ಮೊತ್ತದ ಹಣ ಶೆಲ್ ಕಂಪೆನಿಗಳಿಗೆ ವರ್ಗಾವಣೆಯಾಗಿದೆ ಎಂದು ಖಚಿತಪಡಿಸಿದರು.

ಈ ಆರೋಪವನ್ನು ಹಿಂದೆ ಅಲ್ಲಗಳೆದಿದ್ದ ಮಲ್ಯ, ಈಗ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯರಿಲ್ಲ. "ಈ ಏಳು ದೇಶಗಳ ಶೆಲ್ ಕಂಪೆನಿಗಳ ಜತೆ ಸಂಪರ್ಕ ಸಾಧಿಸಲಾಗಿದ್ದು, ಬ್ಯಾಂಕ್ ಖಾತೆಯ ವಿವರಗಳನ್ನೂ ಪಡೆಯಲಾಗಿದೆ. ಇಷ್ಟರಲ್ಲೇ ಸಂಪೂರ್ಣ ವಿವರಗಳು ಸಿಗಲಿವೆ" ಎಂದು ಸಿಬಿಐ ಹಾಗೂ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿ ವಿವರಿಸಿದರು. ವ್ಯವಸ್ಥಿತವಾಗಿ ಈ ಕಾರ್ಯವನ್ನು ಮಲ್ಯ ನಿರ್ವಹಿಸಿದ್ದಾಗಿ ಅಧಿಕಾರಿಗಳು ಹೇಳುತ್ತಾರೆ. ಸ್ವಲ್ಪಮೊತ್ತದ ಹಣವನ್ನು ಮರುಪಾವತಿ ಮಾಡಿ, ಮತ್ತಷ್ಟು ಸಾಲ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News