ಐಟಿ ದಾಳಿ: ಎಸ್.ಎಂ.ಕೃಷ್ಣ ಅಳಿಯನ ಸಂಸ್ಥೆಯಲ್ಲಿ 650 ಕೋ. ರೂ. ಪತ್ತೆ

Update: 2017-09-25 06:48 GMT

ಬೆಂಗಳೂರು, ಸೆ.25: ಕಾಫಿ ಉದ್ಯಮಿ ಹಾಗೂ ಕೆಫೆ ಕಾಫಿ ಡೇ ಎಂಬ ಖ್ಯಾತ ರಿಟೇಲ್ ಮಳಿಗೆಯ ಸಹ ಮಾಲಕರಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ್ ಅವರ ಕಚೇರಿ ನಿವಾಸಗಳಿಗೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಆ ಸಂಸ್ಥೆಯು ರೂ.650 ಕೋಟಿ ರೂ.ನಷ್ಟು ಆದಾಯವನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದೆ.

ಸಿದ್ಧಾರ್ಥ ಅವರಿಗೆ ಸೇರಿದ ಹಲವು ಕಚೇರಿಗಳ ಮೇಲೆ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚೆನ್ನೈ ಹಾಗೂ ಮುಂಬೈಯಲ್ಲಿ ದಾಳಿಗಳು ನಡೆದಿವೆ. ‘‘ಕಾಫಿ, ಪ್ರವಾಸೋದ್ಯಮ, ಐಟಿ ಕ್ಷೇತ್ರಗಳಲ್ಲಿ ತನ್ನನು ತೊಡಗಿಸಿಕೊಂಡಿರುವ ಸಮೂಹದ ಕಚೇರಿಗಳ ಮೇಲೆ ನಡೆದ ದಾಳಿಗಳ ನಂತರ ರೂ.650 ಕೋಟಿಗೂ ಅದಿಕ ಆದಾಯವನ್ನು ಮುಚ್ಚಿ ಹಾಕಿರುವ ವಿಚಾರವನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಸಂಸ್ಥೆ ಬಹಿರಂಗ ಪಡಿಸದೇ ಇರುವ ಆದಾಯವು ಇನೂ ದೊಡ್ಡ ಮೊತ್ತದ್ದಾಗಿರಬಹುದು’’ ಎಂದು ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಲವಾರು ಇತರ ಉಲ್ಲಂಘನೆಗಳ ಬಗ್ಗೆ ತಿಳಿದು ಬಂದಿದೆಯಾದರೂ ಅವುಗಳ ಬಗ್ಗೆ ಸಾಕ್ಷ್ಯಗಳು ದೊರೆತಿರುವ ಹೊರತಾಗಿಯೂ ಸಂಸ್ಥೆ ಏನನ್ನೂ ಬಹಿರಂಗಗೊಳಿಸಿಲ್ಲ ಎಂದೂ ಇಲಾಖೆ ತಿಳಿಸಿದೆ.

ದಾಳಿಗಳ ಬಗ್ಗೆ ಇಲ್ಲಿಯ ತನಕ ಸಿದ್ಧಾರ್ಥ ಅಥವಾ ಕೃಷ್ಣ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದ ಕೃಷ್ಣ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿಯಾದಾಗ ಆಡಳಿತ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ದೂರಿತ್ತಲ್ಲದೆ, ಕೇಂದ್ರ ಸರಕಾರ ಸಿಬಿಐ ಅನ್ನು ದುರುಪಯೋಗ ಪಡಿಸುತ್ತಿದೆ ಎಂದೂ ಆರೋಪಿಸಿತ್ತು.
ಇದೀಗ ಕೃಷ್ಣ ಅಳಿಯನ ಕಚೇರಿ ನಿವಾಸಗಳ ಮೇಲಿನ ದಾಳಿಯಿಂದ ಕೇಂದ್ರ ಸಿಬಿಐ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿಲ್ಲ ಎಂದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News