ಸಂಘಟನೆಯನ್ನು ನಿಗ್ರಹಿಸುವ ನಡೆಯ ವಿರುದ್ಧ ಪಿ.ಎಫ್.ಐ. ಅಭಿಯಾನ

Update: 2017-09-25 10:40 GMT

ಹೊಸದಿಲ್ಲಿ, ಸೆ.25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.) ಸಂಘಟನೆಯನ್ನು ನಿಗ್ರಹಿಸುವ ಕ್ರಮದ ವಿರುದ್ಧ ‘ನಮಗೂ ಹೇಳಲಿಕ್ಕಿದೆ’ ಎಂಬ ಘೋಷಣೆಯೊಂದಿಗೆ ಪಿಎಫ್‌ಐ ಉತ್ತರ ವಲಯವು ನವೆಂಬರ್ 5ರಂದು ಹೊಸದಿಲ್ಲಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಂಡಿದೆ.

ಪಿ.ಎಫ್.ಐ. ದಿಲ್ಲಿಯಲ್ಲಿರುವ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪಿಎಫ್‌ಐ ಉತ್ತರ ವಲಯದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಬಲಪಂಥೀಯರ ಮೂಲಕ ಸಂಘಟನೆಯ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಇತ್ತಿಚಿನ ಕೆಲವೊಂದು ಮಾಧ್ಯಮಗಳ ವರದಿಗಳನ್ವಯ ರಾಷ್ಟ್ರೀಯ ತನಿಖಾ ದಳದ ವರದಿಯೂ ಕೂಡಾ ಸಂಘಟನೆಯ ವಿರುದ್ಧ ಕೆಲವೊಂದು ಆರೋಪಗಳನ್ನು ಹೊರಿಸಿದೆ. ಅದರಲ್ಲಿ ಏಳು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಸ್ಥಳೀಯ ಘಟನೆ, ಪ್ರವಾದಿ ಮುಹಮ್ಮದ್ (ಸ.)ರವರ ಕುರಿತು ತೀರಾ ಅಸಂಬದ್ಧ ಭಾಷೆ ಬಳಸಿದ ಪ್ರೊಪೆಸರ್‌ರ ಮೇಲೆ ದಾಳಿ ನಡೆಸಿದ್ದಾಗಿತ್ತು. ಈ ಘಟನೆಯಲ್ಲಿ ಪಿ.ಎಫ್.ಐ. ಭಾಗಿಯಾಗಿಲ್ಲ ಎಂಬುದನ್ನು ಆ ಸಂದರ್ಭ ಸ್ವತಃ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟಪಡಿಸಲಾಗಿತ್ತು. ಇನ್ನೊಂದು ಪ್ರಕರಣ ಸಂಘಟನೆಯ ವಾರ್ಷಿಕ ರಾಷ್ಟ್ರೀಯ ಅಭಿಯಾನವಾದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಕಾರ್ಯಕ್ರಮದ ಅಂಗವಾಗಿ ಸದಸ್ಯರಿಗೆ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು. ಈ ಕಾರ್ಯಕ್ರಮದ ಬಗ್ಗೆ ಕಟ್ಟುಕಥೆ ಹೆಣೆದು ಇದೊಂದು ಶಸ್ತ್ರಾಸ್ತ್ರ ತರಬೇತಿ ಎಂಬಂತೆ ಬಿಂಬಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರಲಾಗಿದ್ದ ಯುಎಪಿಎಯನ್ನು ಕೇರಳ ಹೈಕೋರ್ಟ್ ರದ್ದು ಪಡಿಸಿತ್ತು ಮತ್ತು ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಎನ್.ಐ.ಎ.ಯ ಮನವಿಯನ್ನು ತಿರಸ್ಕರಿಸಿತ್ತು. ಇನ್ನೊಂದು ಆರೋಪವೆನಂದರೆ ಸಂಘಟನೆಯು ಸಿರಿಯಾ ಮತ್ತು ಇರಾಕ್‌ನಲ್ಲಿ ಸಕ್ರಿಯವಾಗಿರುವ ಐಎಸ್‌ಐಎಸ್‌ಗಾಗಿ ಸದಸ್ಯರ ನೇಮಕಾತಿ ಮಾಡುತ್ತಿದೆ ಎಂದಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ 18 ಕೋಟಿ ಬಲಿಷ್ಠ ಭಾರತೀಯ ಮುಸ್ಲಿಮರ ಪೈಕಿ ಕೇವಲ 60 ಜನರ ಕುರಿತಾಗಿ ಮಾತ್ರವೇ ಅವರು ಸಿರಿಯಾ ಅಥವಾ ಅಫ್ಘಾನಿಸ್ತಾನದ ಪರವಾಗಿ ಇದ್ದಾರೆಂದು ನಂಬಲಾಗುತ್ತಿದೆ. ಭಾರತೀಯ ಮುಸ್ಲಿಮರನ್ನು ಖಳನಾಯಕರಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ವಾಸ್ತವವೆಂದರೆ, ಪಿ.ಎಫ್.ಐ. ಬಹಳ ಮೊದಲೇ ಐಎಸ್‌ನಂತಹ ರಹಸ್ಯ ಗುಂಪುಗಳು ಮತ್ತು ಯುವಜನರಿಗೆ ಆಮಿಷ ನೀಡಿ ಸೆಳೆಯುವ ಸೋಷಿಯಲ್ ಮೀಡಿಯಾದಲ್ಲಿನ ಅದರ ಜಾಲದ ಕುರಿತು ತನ್ನ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಪಾಪ್ಯುಲರ್ ಫ್ರಂಟ್ ಯಾವಾಗಲೂ ಎಲ್ಲಾ ವಿವಿಧ ಯೋತ್ಪಾದನೆಯನ್ನು ವಿರೋಧಿಸುತ್ತದೆ. ಪಾಪ್ಯುಲರ್ ಫ್ರಂಟ್, ದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಸದಸ್ಯರಿರುವ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಂಘಟನೆಯಾಗಿದೆ. ಸಂಘಟನೆಯ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಪ್ರಯತ್ನಗಳನ್ನು ಪ್ರಜಾಪ್ರುತ್ವ ಮತ್ತು ಕಾನೂನಾತ್ಮಕ ರೀತಿಯಲ್ಲಿ ಎದುರಿಸಲು ಸಭೆ ನಿರ್ಧರಿಸಿತು.

 ‘ನಮಗೂ ಹೇಳಲಿಕ್ಕಿದೆ’ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಉತ್ತರ ವಲಯ ಸಮಿತಿಯ ವತಿಯಿಂದ ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ವಿಭಿನ್ನ ಕಾರ್ಯಕ್ರಮಗಳಾದ ಕಾರ್ನರ್ ಮೀಟಿಂಗ್, ಬೀದಿ ನಾಟಕ, ಪೋಸ್ಟರ್ ಮತ್ತು ಕರಪತ್ರ ವಿತರಣೆಗಳ ಮೂಲಕ ಸಂಘಟನೆಯ ಸಂದೇಶವನ್ನು ಅಭಿಯಾನಗಳ ಮೂಲಕ ನಡೆಸಲು ತಿರ್ಮಾನಿಸಲಾಯಿತು. ಅಭಿಯಾನವು ನವೆಂಬರ್ 5ರಂದು ದಿಲ್ಲಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದೊಂದಿಗೆ ಸಮಾರೋಪಗೊಳ್ಳಲಿದೆ.

ಉತ್ತರ ವಲಯಾಧ್ಯಕ್ಷ ಎ.ಎಸ್.ಇಸ್ಮಾಯೀಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿ.ಎಫ್.ಐ. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News