ಆಸ್ಪತ್ರೆಯಲ್ಲಿದ್ದಾಗ ಜಯಲಲಿತಾರ ವೀಡಿಯೋ ತೆಗೆದಿದ್ದ ಶಶಿಕಲಾ : ದಿನಕರನ್

Update: 2017-09-25 11:16 GMT

ಚೆನ್ನೈ,ಸೆ.25 :  ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ  ಶಶಿಕಲಾ ಕಳೆದ ವರ್ಷ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ  ಅವರ ವೀಡಿಯೋ ಒಂದನ್ನು ತೆಗೆದಿದ್ದರೆಂದು ಎಐಡಿಎಂಕೆಯ ತಿರಸ್ಕೃತ ನಾಯಕ ಟಿಟಿವಿ ದಿನಕರನ್ ಹೇಳಿಕೊಂಡಿದ್ದಾರೆ. ಈ ವೀಡಿಯೋ ದೃಶ್ಯಾವಳಿಯನ್ನು ಸರಕಾರದಿಂದ ರಚಿತವಾಗಿರುವ  ವಿಚಾರಣಾ ತಂಡಕ್ಕೆ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿಯ ಆರೋಗ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಿದ್ದನ್ನು  ಸಚಿವ ಡಿಂಡಿಗುಲ್ ಸಿ ಶ್ರೀನಿವಾಸನ್ ಅವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎದ್ದಿರುವ ವಿವಾದದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಜಯಲಲಿತಾ ಅವರನ್ನು ಸೆಪ್ಟೆಂಬರ್ 23ರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ``ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿವೆ. ನಮ್ಮಲ್ಲಿ ಚಿನ್ನಮ್ಮ (ಶಶಿಕಲಾ) ಅವರು ಜಯಲಲಿತಾ ಅವರ ದೇಹತೂಕ ಕಡಿಮೆಯಾದ ಹಿನ್ನೆಯಲ್ಲಿ ಅವರ ಒತ್ತಾಯದ ಮೇರೆಗೆ ತೆಗೆದ ವೀಡಿಯೋ ಇದೆ. ಆ ಸಂದರ್ಭ ಜಯಲಲಿತಾ ಅವರು ರಾತ್ರಿ ಉಡುಗೆಯಲ್ಲಿದ್ದರಲ್ಲದೆ ಟಿವಿ ನೋಡುತ್ತಿದ್ದರು,'' ಎಂದರು.

``ಈ ವೀಡಿಯೋವನ್ನು ಆರ್ ಕೆ ನಗರ ಉಪಚುನಾವಣೆ ಸಂದರ್ಭ  ಉಪಯೋಗಿಸಬಹುದೇ ಎಂದು ಅವರು (ಆರ್ ಕೆ ನಗರ ಚುನಾವಣಾ ಉಸ್ತುವಾರಿ ಪಿ ವೆಟ್ರಿವೇಲ್) ಕೇಳಿದಾಗ ಶಶಿಕಲಾ ಬೇಡ ಎಂದು ಹೇಳಿದರು. ನಾವೇ ವಿಚಾರಣಾ ಆಯೋಗವೊಂದನ್ನು ನೇಮಿಸಿ ಅದನ್ನು ಸರಿಯಾದ ಸಮಯದಲ್ಲಿ ಹಸ್ತಾಂತರಿಸುವಂತೆ ಹೇಳಿದರು.  ನಾವೀಗ ಅದನ್ನು ತನಿಖಾ ತಂಡಕ್ಕೆ ನೀಡುತ್ತೇವೆ. ನಮಗೇನೂ ಭಯವಿಲ್ಲ,'' ಎಂದರು ದಿನಕರನ್.

``ಒ ಪನ್ನೀರ್ ಸೆಲ್ವಂ ತಮ್ಮ ಜತೆ ಸೇರಿಕೊಳ್ಳುವ ಉದ್ದೇಶದಿಂದ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದ ತನಿಖಾ ಆಯೋಗವೊಂದನ್ನು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಘೋಷಿಸಿದ್ದರು.  ನಿವೃತ್ತ ನ್ಯಾಯಾಧೀಶರೊಬ್ಬರ ಮೊದಲು ಹಾಲಿ ನ್ಯಾಯಾಧೀಶರೊಬ್ಬರು ತನಿಖೆಯ ನೇತೃತ್ವ ವಹಿಸಬೇಕಿತ್ತು,'' ಎಂದು ದಿನಕರನ್ ಅಭಿಪ್ರಾಯ ಪಟ್ಟರು.

ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆಗಾಗ ತಮ್ಮ ನಿಲುವು ಬದಲಾಯಿಸುವ ಸಚಿವ ಶ್ರೀನಿವಾಸನ್ ಅವರನ್ನು ಟೀಕಿಸಿದ ದಿನಕರನ್ ``ತಾವು ಇಪಿಎಸ್ ಹಾಗೂ ಒಪಿಎಸ್ ಅವರಿಂದ ಒತ್ತಡಕ್ಕೊಳಗಾಗಿದ್ದರೆಂದು ಅವರು ಮೂರು ತಿಂಗಳ ನಂತರ ಹೇಳುತ್ತಾರೇನು ?'' ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News