ಐಟಿ ಅಧಿಕಾರಿ ಪುತ್ರನ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Update: 2017-09-25 12:57 GMT

ಬೆಂಗಳೂರು, ಸೆ.25: ಐಟಿ ಅಧಿಕಾರಿ ನಿರಂಜನ್ ಕುಮಾರ್ ಅವರ ಪುತ್ರ ಶರತ್ ಹತ್ಯೆಯ ಪ್ರಮುಖ ಆರೋಪಿ ಶಾಂತಕುಮಾರ್‌ನನ್ನು ಜ್ಞಾನ ಭಾರತಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜ್ಞಾನ ಭಾರತಿಯ ಹಗ್ಗನ ಪಾಳ್ಯದ ಶಾಂತ ಕುಮಾರನನ್ನು ಮೆಜೆಸ್ಟಿಕ್ ಬಳಿ ರವಿವಾರ ತಡರಾತ್ರಿ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಬಂಧಿಸಿರುವ ಆರೋಪಿಗಳಾದ ವಿನೋದ್ ಹಾಗೂ ವಿಶಾಲ್, ಶರತ್‌ನ ಕೈಕಾಲು ಹಿಡಿದುಕೊಂಡಿದ್ದಾಗ ಹಗ್ಗದಿಂದ ಕುತ್ತಿಗೆ ಬಿಗಿದು ಶಾಂತಕುಮಾರ್ ಕೊಲೆಗೈದಿದ್ದನು. ವಿನೋದ್, ವಿಶಾಲ್ ಬಂಧನದ ಬಳಿಕ ತಲೆಮರೆಸಿಕೊಂಡಿದ್ದ ಶಾಂತ ಕುಮಾರ್‌ನ ಊಬರ್ ಕ್ಯಾಬ್ ಕಾರು ಕೊಲೆಯಾದ ಸ್ಥಳದ ಬಳಿ ಪತ್ತೆಯಾಗಿತ್ತು. ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿಸಿರುವ ವಿಶಾಲ್, ವಿನೋದ್ ಜತೆ ಶರತ್ ಕೊಲೆ ಮಾಡಿ ಆತನ ದೇಹ ಹೂತು ಹಾಕುವವರೆಗೆ ಕೈಜೋಡಿಸಿದ್ದ ಶಾಂತಕುಮಾರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಶರತ್ ಕೊಲೆಯಾದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News