ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತರಿಬ್ಬರ ವಿಚಾರಣೆ

Update: 2017-09-25 13:05 GMT

ಬೆಂಗಳೂರು, ಸೆ.25: ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಹಂತಕರಿಗಾಗಿ ತೀವ್ರ ಶೋಧ ನಡೆಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರದ ನಿವಾಸದ ಬಳಿ ಗೌರಿ ಲಂಕೇಶ್ ಅವರ ಹತ್ಯೆ ನಡೆದ ದಿನದಂದು ಅದೇ ಸ್ಥಳದಲ್ಲಿ ನಾಲ್ಕೈದು ಬಾರಿ ಅನುಮಾನಾಸ್ಪದವಾಗಿ ಓಡಾಡಿದ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ.

ವಶಕ್ಕೆ ಪಡೆದುಕೊಂಡಿರುವ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಗೌರಿ ಲಂಕೇಶ್ ಅವರ ನಿವಾಸ ಹಾಗೂ ಅಕ್ಕಪಕ್ಕದ ಮನೆ ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂಬಂಧ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಹಂತಕರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಅನುಮಾನಾಸ್ಪವಾಗಿ ಕಂಡುಬರುವ ಎಲ್ಲ ಸಂಗತಿಗಳನ್ನು ಆಧರಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರತಿ ದಿನ ಬೆಳಗ್ಗೆ ಸಭೆ ನಡೆಸುವ ಅಧಿಕಾರಿಗಳು ಇಡೀ ದಿನದ ಕಾರ್ಯಾಚರಣೆಯ ವಿವರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ತನಿಖೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆಯಾದರೂ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News