ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಮಾರಾಟಕ್ಕೆ ಕಡಿವಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-25 13:26 GMT

ಬೆಂಗಳೂರು, ಸೆ. 25: ರೈತರನ್ನು ನಷ್ಟಕ್ಕೆ ದೂಡುವ ಕಳಪೆ ಗುಣಮಟ್ಟದ ಬೀಜಗಳ ಮಾರಾಟವನ್ನು ಮುಂದಿನ ವರ್ಷದಿಂದ ಸಂಪೂರ್ಣವಾಗಿ ನಿಯಂತ್ರಿಸಬೇಕು. ಪ್ರಮಾಣಿಕೃತ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗದಂತೆ ರೈತರಿಗೆ ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸೋಮವಾರ ನಗರದ ಹೆಬ್ಬಾಳದಲ್ಲಿ ನೂತನವಾಗಿ ನಿರ್ಮಿಸಿರುವ ಬೀಜ ಭವನ ಹಾಗೂ ಪುಷ್ಪ ಸ್ಟುಡಿಯೋ ಮತ್ತು ತರಬೇತಿ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಬಿತ್ತನೆ ಸಮಯದಲ್ಲಿ ಬೇಕಿರುವ ಬೀಜಗಳು, ರಸಗೊಬ್ಬರ ಕೊರತೆಯಾಗದಂತೆ ಎಚ್ಚರವಹಿಸಬೇಕು. ಮುಂದಿನ ವರ್ಷದಿಂದ ಕಳಪೆ ಗುಣಮಟ್ಟದ ಬೀಜಗಳ ವಿತರಣೆಗೆ ಕಡಿವಾಣ ಹಾಕಿ, ಪ್ರಮಾಣಿಕೃತ ಬಿತ್ತನೆ ಬೀಜಗಳನ್ನೇ ರೈತರಿಗೆ ಪೂರೈಸಬೇಕು ಎಂದು ಬೀಜ ನಿಗಮ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಬಿತ್ತನೆ ಬೀಜ ಬೇಡಿಕೆಯ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಾಗಿದೆ. ಬಿತ್ತನೆ ಬೀಜಗಳಿಗೆ ರೈತರಿಂದ ಬರುವ ಬೇಡಿಕೆಯಷ್ಟು ಪೂರೈಸಲು ಕೃಷಿ ಇಲಾಖೆ ಎಲ್ಲ ಕ್ರಮಗಳು ಕೈಗೊಳ್ಳಬೇಕು. ರೈತರಿಗೆ ದುಬಾರಿ ಬೆಲೆ ತೆತ್ತುವ ಖಾಸಗಿ ಸಂಸ್ಥೆಗಳ ಕಳಪೆ ಬಿತ್ತನೆ ಬೀಜ ಮಾರಾಟಕ್ಕೂ ಕಡಿವಾಣ ಹಾಕಬೇಕು ಎಂದು ಹೇಳಿದರು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಕಾಲದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ದೊರಕದೆ ರೈತರು ಕಂಗಾಲಾಗಿದ್ದರು. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ರೈತರು ಹೋರಾಟ ನಡೆಸಿದ್ದರು. ಈ ವೇಳೆ ರೈತರ ಮೇಲೆ ಸರಕಾರ ಗೋಲಿಬಾರ್ ನಡೆಸಿ ಇಬ್ಬರು ರೈತರ ಸಾವಿಗೂ ಕಾರಣವಾಗಿತ್ತು. ಸದ್ಯ ನಮ್ಮ ಸರಕಾರದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಇಂತಹ ಸಮಸ್ಯೆ ಬಂದಿಲ್ಲ ಎಂದು ಸಮರ್ಥಿಸಿಕೊಂಡರು.

ರೈತರಿಗೆ ಲಾಭ ತರುವ ತಳಿಗಳನ್ನು ಪರಿಚಯಿಸಲು ಕೃಷಿ ವಿಶ್ವವಿದ್ಯಾನಿಲಯಗಳು ಹೆಚ್ಚು ಸಂಶೋಧನೆ ನಡೆಸಬೇಕು. ‘ಪ್ರಯೋಗಾಲಯದಿಂದ ಭೂಮಿ’ಯ ಬದಲಾಗಿ ಭೂಮಿಯಿಂದ ಪ್ರಯೋಗಾಲಯದತ್ತ ಎಂದು ಬದಲಾಗುವಂತೆ ಕೃಷಿ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸಬೇಕು ಎಂದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಗರದಲ್ಲಿರುವ ಪುಷ್ಪ ಹರಾಜು ಕೇಂದ್ರ ದೇಶದಲ್ಲಿ ಏಕೈಕ ಕೇಂದ್ರ. ಏಷ್ಯಾದಲ್ಲಿ ಜಪಾನ್ ಮತ್ತು ಬೆಂಗಳೂರಲ್ಲಿ ಮಾತ್ರ ಈ ರೀತಿಯ ಕೇಂದ್ರಗಳಿವೆ. 1995ರಲ್ಲಿ ಆರಂಭವಾದ ಈ ಕೇಂದ್ರದಲ್ಲಿ 20 ವರ್ಷಗಳಲ್ಲಿ 135 ಕೋಟಿ ರೂ. ವಹಿವಾಟು ನಡೆದಿದೆ. ಈ ಪುಷ್ಪ ಸ್ಟುಡಿಯೊ ಮತ್ತು ತರಬೇತಿ ಕೇಂದ್ರ ಉದ್ಘಾಟಿಸುವ ಮೂಲಕ ಇದರ ವಹಿವಾಟಿನ ಗಾತ್ರ ಇನ್ನೂ ಹೆಚ್ಚಾಗಲಿದೆ. ಗ್ರಾಹಕರ ಅನುಕೂಲಕ್ಕಾಗಿ ಜನವರಿಯಿಂದ ಆನ್‌ಲೈನ್ ಹರಾಜು ವ್ಯವಸ್ಥೆಯನ್ನು ಅಳವಡಿಸಕೊಳ್ಳಲಾಗುವುದು ಎಂದು ತಿಳಿಸಿದರು.

ಅಗತ್ಯ ಕ್ರಮ:  ರೈತರಿಗೆ ನಷ್ಟವುಂಟು ಮಾಡುವ ನಿಜಗುಣ ಬೀಜಗಳ ವಿತರಣೆಯನ್ನು ಮುಂದಿನ ವರ್ಷದಿಂದ ಸಂಪೂರ್ಣವಾಗಿ ನಿಲ್ಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರಿಂದ ಬೇಡಿಕೆ ಬರುವ ಬಿತ್ತನೆ ಬೀಜಗಳನ್ನು ಪೂರೈಸಲು, ಹಾಗೇ ರೈತರು ಉತ್ಪಾದಿಸುವಷ್ಟು ಬೀಜಗಳನ್ನು ಖರೀದಿಸಲು ಇಲಾಖೆ ಸಿದ್ಧವಿದೆ ಎಂದರು.

ಈ ವೇಳೆ ಬೀಜ ನಿಗಮದ ನೂತನ ಡಿಜಿಟಲ್ ತಂತ್ರಾಂಶಕ್ಕೆ ರಿಮೋಟ್ ಗುಂಡಿ ಒತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸಾಂಕೇತಿಕವಾಗಿ ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಗ್ರಾಮದ ರೈತ ಗೋವಿಂದ್ ಅವರಿಗೆ 5 ಕೆಜಿ ರಾಗಿ ಚೀಲ ಮತ್ತು ಇಲೆಕ್ಟ್ರಾನಿಕ್ ಬಿಲ್ ಅನ್ನು ವಿತರಿಸಿದರು. 

ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಸದಸ್ಯ ಬೈರತಿ ಸುರೇಶ್, ಶಾಸಕ ರಾಜಶೇಖರ ಪಾಟೀಲ್ ಹುಮ್ನಾಬಾದ್, ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೇರಿದಂತೆ ಇತರರು ಇದ್ದರು.

ರೈತರಿಗಾಗಿ ಏನೂ ಮಾಡದವರು ತಮಗೇ ತಾವೇ ‘ಮಣ್ಣಿನ ಮಗ’, ‘ರೈತನ ಮಗ’ ಎಂದು ಬಿರುದು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ನಿಜವಾಗಿ ರೈತರ ಪರ ಕೆಲಸ ಮಾಡುವವರು ಮಣ್ಣಿನ ಮಕ್ಕಳು. ರಾಜ್ಯದಲ್ಲಿ ರೈತರಿಗೆ ಹಲವು ಕಾರ್ಯಕ್ರಮಗಳನ್ನು ಕೊಟ್ಟರು ನಾನಾಗಲಿ, ಸಚಿವ ಕೃಷ್ಣಬೈರೇಗೌಡ ಆಗಲಿ ಈ ರೀತಿ ಬಿರುದು ಇಟ್ಟುಕೊಂಡಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News