ಮುಸ್ಲಿಮ್ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ: ಡಾ.ಅಸ್ಮಾ ಝೆಹ್ರಾ

Update: 2017-09-25 14:42 GMT

ಬೆಂಗಳೂರು, ಸೆ.25: ದೇಶಾದೆಲ್ಲೆಡೆ ಮುಸ್ಲಿಮ್ ಸಮುದಾಯದ ಮಹಿಳೆಯರಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ವಿವಾಹ, ವಿಚ್ಛೇದನ(ತಲಾಖ್)ಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ವಿಭಾಗದ ಮುಖ್ಯ ಸಂಯೋಜಕಿ ಡಾ.ಅಸ್ಮಾ ಝೆಹ್ರಾ ತಿಳಿಸಿದ್ದಾರೆ.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮ್ ಮಹಿಳೆಯರಲ್ಲಿ ಶರೀಅತ್ ರಕ್ಷಣೆ, ವಿವಾಹ ಹಾಗೂ ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು, ಸಾಮಾಜಿಕ ಸುಧಾರಣೆ ಹಾಗೂ ಸಹಾಯವಾಣಿಯ ಮಹತ್ವದ ಕುರಿತು ಸೆ.23ರಂದು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು ಎಂದರು.

ಹೈದರಾಬಾದ್, ಮುಂಬೈ, ಜೈಪುರ, ದಿಲ್ಲಿ, ರಾಯಚೂರು, ಬಳ್ಳಾರಿ, ಸಿಂಧನೂರು ಹಾಗೂ ಬೆಂಗಳೂರಿನಲ್ಲಿ ಈ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಆಯಾ ಪ್ರದೇಶದಲ್ಲಿರುವ ಮುಸ್ಲಿಮ್ ಮಹಿಳಾ ಸಂಘಟನೆಗಳ ಪದಾಧಿಕಾರಿಗಳನ್ನು ಒಂದೆಡೆ ಸೇರಿಸಿ ಈ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಇಸ್ಲಾಮ್ ಹಾಗೂ ಶರೀಅತ್‌ನಲ್ಲಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳು, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿ, ಪತಿ ಹಾಗೂ ಪತ್ನಿ ನಡುವಿನ ಸಂಬಂಧ ವೃದ್ಧಿ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಬಗ್ಗೆಯೂ ಈ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇತರೆ ಧರ್ಮಗಳಿಗೆ ಹೋಲಿಸಿದರೆ ಇಸ್ಲಾಮ್ ಧರ್ಮದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ, ಹಕ್ಕುಗಳನ್ನು ನೀಡಲಾಗಿದೆ. ಆದರೆ, ಈ ಬಗ್ಗೆ ಮುಸ್ಲಿಮ್ ಮಹಿಳೆಯರಲ್ಲಿ ಜಾಗೃತಿಯ ಕೊರತೆಯಿದೆ. ಕುರ್‌ಆನ್ ಹಾಗೂ ಹದೀಸ್‌ನ ಶಿಕ್ಷಣದಿಂದ ವಂಚಿತರಾಗಿರುವುದರಿಂದ ವಿಚ್ಛೇದನ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಾವು ಎದುರಿಸುವಂತಾಗಿದೆ ಎಂದರು.

ಮಾಧ್ಯಮಗಳಲ್ಲಿ ವೈಭವೀಕರಿಸುತ್ತಿರುವಂತೆ ನಮ್ಮ ಸಮುದಾಯದಲ್ಲಿ ಅಷ್ಟು ದೊಡ್ಡ ಸಮಸ್ಯೆಗಳೇನಿಲ್ಲ. ಇಸ್ಲಾಮ್ ಹಾಗೂ ಮುಸ್ಲಿಮರನ್ನು ಅಪಮಾನಗೊಳಿಸುವ ಕುತಂತ್ರ ಇದರಲ್ಲಿದೆ. ಇಸ್ಲಾಮ್ ಧರ್ಮದ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲದಂತಹ ಮಹಿಳೆಯರನ್ನು ಕರೆಸಿ ಸುದ್ದಿ ವಾಹಿನಿಗಳು ಚರ್ಚೆ ನಡೆಸುತ್ತವೆ. ಇದರಿಂದ, ಸಮುದಾಯದಲ್ಲಿ ಮತ್ತಷ್ಟು ಗೊಂದಲಗಳು ಉಂಟಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

ಸುದ್ದಿ ವಾಹಿನಿಗಳ ಚರ್ಚೆಯಲ್ಲಿ ಪಾಲ್ಗೊಂಡು ಅನಗತ್ಯವಾದ ಹೇಳಿಕೆಗಳನ್ನು ನೀಡುವಂತಹರ ಬಗ್ಗೆ ಸಮುದಾಯದ ಮಹಿಳೆಯರು ಗಮನ ಹರಿಸಬಾರದು. ವರದಕ್ಷಿಣೆ, ವಿವಾಹ ವಿಚ್ಛೇದನದ ಸಮಸ್ಯೆಗಳು ನಮಗಿಂತ ಹೆಚ್ಚಾಗಿ ಬೇರೆ ಸಮುದಾಯಗಳಲ್ಲಿವೆ. ಆದರೆ, ಅದನ್ನು ಯಾರೂ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.

ಮಹಿಳೆಯರಿಗಾಗಿ ಉಚಿತ ಸಹಾಯವಾಣಿ ‘1800 102 8426’ಯನ್ನು ಆರಂಭಿಸಿದ್ದೇವೆ. ಪ್ರತಿದಿನ 80-100 ಕರೆಗಳು ಈ ಸಹಾಯವಾಣಿಗೆ ಬರುತ್ತಿವೆ. ಕಳೆದ 10 ತಿಂಗಳಲ್ಲಿ 40 ಸಾವಿರ ಕರೆಗಳನ್ನು ಸಹಾಯವಾಣಿ ಸ್ವೀಕರಿಸಿದ್ದು, ಬಹುತೇಕರಿಗೆ ಸಲಹೆ, ಮಾರ್ಗದರ್ಶನಗಳನ್ನು ನೀಡಲಾಗಿದೆ ಎಂದ ಅವರು, ಪ್ರಸ್ತುತ ನಗರ ಪ್ರದೇಶಗಳನ್ನು ಕೇಂದ್ರೀಕರಿಸಿ ಈ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಹಿಂದುಳಿದ ಪ್ರದೇಶ, ಮೊಹಲ್ಲಾಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವಿಭಾಗದ ಸಂಚಾಲಕಿ ಡಾ.ಆಸೀಫಾ ನಿಸಾರ್, ಜಮಾಅತೆ ಇಸ್ಲಾಮಿ ಹಿಂದ್‌ನ ಫೌಝಿಯಾ ಸುಲ್ತಾನಾ, ತಸ್ನೀನ್ ಫರ್ಝಾನಾ, ಸಲಾಮ್ ಸೆಂಟರ್‌ನ ಶಬಾನಾ ಫಿರ್ದೋಸ್, ಹೈದರಾಬಾದ್‌ನ ಶರೀಅತ್ ಕಮಿಟಿಯ ಸದಸ್ಯ ದುರ್ರಿಯಾ ಹಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News