ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ‘ಸೌಭಾಗ್ಯ’ ಯೋಜನೆಯ ಸಂಪೂರ್ಣ ವಿವರ

Update: 2017-09-25 15:38 GMT

ಹೊಸದಿಲ್ಲಿ,ಸೆ.25: ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುವ ಸಹಜ್ ಬಿಜ್ಲಿ ಹರ್ ಘರ್ ಯೋಜನಾ ಅಥವಾ ‘ಸೌಭಾಗ್ಯ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು. ಈ ವರ್ಷದ ಡಿಸೆಂಬರ್‌ನೊಳಗೆ ಎಲ್ಲ ಗ್ರಾಮಗಳ ವಿದ್ಯುದ್ದೀಕರಣದ ಬಳಿಕ ಎಲ್ಲ ಗ್ರಾಮೀಣ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.

ರಾಜ್ಯಗಳು ಮನೆಮನೆ ವಿದ್ಯುದ್ದೀಕರಣ ಕಾರ್ಯವನ್ನು 2019,ಮಾ.31ರೊಳಗೆ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಸರಕಾರವು ತಿಳಿಸಿದೆ.

ಸೌಭಾಗ್ಯ ಯೋಜನೆಯು 16,320 ಕೋ.ರೂ.ವೆಚ್ಚದ್ದಾಗಿದ್ದು, ಗ್ರಾಮೀಣ ಮನೆಗಳ ವಿದ್ಯುದ್ದೀಕರಣಕ್ಕಾಗಿ 14,025 ಕೋ.ರೂ. ಮತ್ತು ನಗರ ಪ್ರದೇಶಗಳ ಮನೆಗಳಿಗೆ 2,295 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದೆ.

ಕೇಂದ್ರವು ಯೋಜನಾ ವೆಚ್ಚದ ಶೇ.60ರಷ್ಟು ಅನುದಾನವನ್ನು ಮಂಜೂರು ಮಾಡಲಿದ್ದು, ರಾಜ್ಯಗಳ ವಂತಿಗೆ ಶೇ.10ರಷ್ಟಿರಲಿದೆ. ಉಳಿದ ಹಣವನ್ನು ಸಾಲಗಳ ಮೂಲಕ ಸಂಗ್ರಹಿಸಲಾಗುವುದು.

 ವಿಶೇಷ ವರ್ಗದಡಿಯ ರಾಜ್ಯಗಳಿಗೆ ಒಟ್ಟು ಯೋಜನಾ ವೆಚ್ಚದ ಶೇ.85ರಷ್ಟು ಮೊತ್ತವನ್ನು ಕೇಂದ್ರವು ಮಂಜೂರು ಮಾಡಲಿದೆ. ಈ ರಾಜ್ಯಗಳು ಕೇವಲ ಶೇ.5ರಷ್ಟು ವಂತಿಗೆ ಪಾವತಿಸಿದರೆ ಸಾಕು. ಯೋಜನೆಯು 12,320 ಕೋ.ರೂ.ಗಳ ಮುಂಗಡ ಪತ್ರ ಬೆಂಬಲವನ್ನು ಹೊಂದಿರಲಿದೆ.

2011ರ ಜನಗಣತಿಯ ದತ್ತಾಂಶಗಳನ್ನು ಆಧರಿಸಿ ಈ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ಎಪಿಎಲ್ ಕುಟುಂಬಗಳಿಗೆ ಕೇವಲ 500 ರೂ.ಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುವುದು ಮತ್ತು ಈ ಕುಟುಂಬಗಳು ಶುಲ್ಕವನ್ನು 10 ಸಮಾನ ಮಾಸಿಕ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್‌ಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಅರ್ಜಿಗಳ ಸಂಗ್ರಹ, ಬಿಲ್‌ಗಳ ವಿತರಣೆ ಮತ್ತು ಆದಾಯ ಸಂಗ್ರಹ ಕಾರ್ಯದಲ್ಲಿ ನೆರವಾಗಲಿವೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡವರ ಏಳಿಗೆಯು ಸರಕಾರದ ಮುಖ್ಯ ಆದ್ಯತೆ ಯಾಗಿದೆ ಎಂದು ಹೇಳಿದರು.

ಮುದ್ರಾ ಯೋಜನೆಯನ್ನು ಪ್ರಸ್ತಾಪಿಸಿದ ಅವರು, ಸರಕಾರವೊಂದು ಯಾವುದೇ ಬ್ಯಾಂಕ್ ಗ್ಯಾರಂಟಿ ಇಲ್ಲದೆ ಬಡವರಿಗೆ ಸಾಲವನ್ನು ನೀಡುತ್ತದೆ ಎಂದು ಯಾರೂ ಊಹಿಸಿಯೂ ಇರಲಿಲ್ಲ ಎಂದರು.

ವಿದ್ಯುತ್ ಸಂಪರ್ಕ ಪಡೆಯಲು ಬಡವರಿಗೆ ಯಾವುದೇ ಶುಲ್ಕವನ್ನು ವಿಧಿಸಲಾ ಗುವುದಿಲ್ಲ ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸಲು ಸರಕಾರವೇ ಮನೆ ಮನೆಗಳಿಗೆ ತಲುಪಲಿದೆ ಎಂದರು.

ಸರಕಾರವು ಹಮ್ಮಿಕೊಂಡಿರುವ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ 18,000 ಗ್ರಾಮಗಳ ಪೈಕಿ ಕೇವಲ 3,000ಕ್ಕೂ ಕಡಿಮೆ ಗ್ರಾಮಗಳ ವಿದ್ಯುದ್ದೀಕರಣ ಬಾಕಿಯುಳಿದಿದೆ ಎಂದ ಮೋದಿ, ಒಂದು ಕಾಲದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದ ಭಾರತವೀಗ ಮಿಗತೆ ವಿದ್ಯುತ್ ಹೊಂದಿರುವ ದೇಶ ಎಂಬ ಹೆಗ್ಗಳಿಕೆಯತ್ತ ಸಾಗುತ್ತಿದೆ ಎಂದು ಹೇಳಿದರು.

ಕಲ್ಲಿದ್ದಲಿನ ಪಾರದರ್ಶಕ ಇ-ಹರಾಜು ನಮ್ಮ ಸರಕಾರದ ನೀತಿಗೆ ನಿದರ್ಶನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಸರಕಾರವು 2017,ಡಿಸೆಂಬರ್‌ನೊಳಗೆ ಎಲ್ಲ ಗ್ರಾಮಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಿದೆ ಮತ್ತು ಎಲ್ಲ ಮನೆಗಳಿಗೆ 2018,ಡಿಸೆಂಬರ್‌ನೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವದು ಎಂದು ಹೇಳಿದ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರು, ವಾರದ ಏಳೂ ದಿನಗಳ ಕಾಲ 24 ಗಂಟೆ ವಿಶ್ವಾಸಾರ್ಹ ಗುಣಮಟ್ಟದ ವಿದ್ಯುತ್ ಪೂರೈಕೆ ಸರಕಾರದ ಮುಂದಿನ ಗುರಿಯಾಗಿರಲಿದೆ ಎಂದು ತಿಳಿಸಿದರು.

ಎಲ್ಲ ಮನೆಗಳಿಗೆ ವಿದ್ಯುತ್ ಒದಗಿಸುವಾಗ ಪೂರ್ವ ಪಾವತಿ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

 *ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ

*ಎಪಿಎಲ್ ಕುಟುಂಬಗಳಿಗೆ ಕೇವಲ 500 ರೂ.ಶುಲ್ಕ

*ಎಪಿಎಲ್ ಕುಟುಂಬಗಳಿಗೆ ಶುಲ್ಕ ಪಾವತಿಗೆ ಕಂತುಗಳ ಸೌಲಭ್ಯ

*ಯೋಜನೆಯ ಒಟ್ಟೂ ವೆಚ್ಚ 16,320 ಕೋ.ರೂ.

*2017,ಡಿಸೆಂಬರ್‌ನೊಳಗೆ ಎಲ್ಲ ಗ್ರಾಮಗಳ ವಿದ್ಯುದ್ದೀಕರಣ

*2018,ಡಿಸೆಂಬರ್‌ನೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News