98ನೆ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಜ್ ಕುಮಾರ್!

Update: 2017-09-26 06:07 GMT

ಪಾಟ್ನಾ, ಸೆ.26: ಶಿಕ್ಷಣಕ್ಕೆ ವಯಸ್ಸು ಅಡ್ಡಿಯಾಗದು. ಕಲಿಕೆಯ ಆಸಕ್ತಿಯಿದ್ದರೆ ಏನೂ ಕೂಡ ಸಾಧಿಸಬಹುದು ಎನ್ನುವುದಕ್ಕೆ ಬಿಹಾರದ 98ರ ಇಳಿ ವಯಸ್ಸಿನ ರಾಜ್‌ಕುಮಾರ್ ವೈಶ್ಯ ಉತ್ತಮ ನಿದರ್ಶನ.

79 ವರ್ಷಗಳ ಹಿಂದೆ ಪದವಿ ಪೂರೈಸಿದ್ದ ರಾಜ್‌ಕುಮಾರ್ ಸ್ನಾತಕೋತ್ತರ ಪದವಿ ಪಡೆಯಬೇಕೆನ್ನುವ ಕನಸು ಕಟ್ಟಿಕೊಂಡಿದ್ದರು. ತನ್ನ ಸೊಸೆಯ ಬೆಂಬಲದಿಂದಾಗಿ ನಳಂದ ಮುಕ್ತ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ರಾಜ್‌ಕುಮಾರ್ ಸ್ನಾತಕೋತ್ತರ ಪದವಿ ಪೂರೈಸುವ ಮೂಲಕ ತನ್ನ ದೀರ್ಘಕಾಲದ ಕನಸು ಈಡೇರಿಸಿಕೊಂಡಿದ್ದಾರೆ.

1920ರ ಎಪ್ರಿಲ್ 1 ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ್ದ ರಾಜ್‌ಕುಮಾರ್ 1934ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಪಾಸಾಗಿದ್ದರು. 1938ರಲ್ಲಿ ಅರ್ಥಶಾಸ್ತ್ರದಲ್ಲಿ ಆಗ್ರಾ ವಿವಿಯಿಂದ ಪದವಿ ಪೂರ್ಣಗೊಳಿಸಿದ್ದರು. 1940ರಲ್ಲಿ ಎಲ್‌ಎಲ್‌ಬಿಯನ್ನು ಪೂರೈಸಿದ್ದರು.

‘‘ನಮ್ಮ ದೇಶ ಸ್ವಾತಂತ್ರ ಪಡೆದ ಸಂದರ್ಭದಲ್ಲಿ ಗರಿಬಿ ಹಠಾವೋ(ಬಡತನ ನಿವಾರಿಸಿ) ಎಂಬ ಘೋಷಣೆಯನ್ನು ಕೇಳಿದ್ದೆ. ಈಗಲೂ ಆ ಘೋಷಣೆ ಕೇಳುತ್ತಿದ್ದೇನೆ. ನನ್ನ ಮಗನ ಬಳಿ ಕ್ಯಾಮರಾವನ್ನು ಪಡೆದು ಕೊಳಗೇರಿ ಹಾಗೂ ಬಡತನದ ಕೆಲವು ಚಿತ್ರಗಳನ್ನು ತೆಗೆದು, ಲೇಖನವನ್ನು ಬರೆದು ದಿನಪತ್ರಿಕೆಗಳಿಗೆ ಕಳುಹಿಸಿಕೊಡುವೆ. ಭಾರತದ ಬಡತನದ ಬಗ್ಗೆ ಕವನ ಬರೆಯಬೇಕೆಂಬ ಬಯಕೆಯೂ ಇದೆ’’ ಎಂದು ರಾಜ್‌ಕುಮಾರ್ ಹೇಳುತ್ತಾರೆ.

‘‘ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪಾಸಾಗಿರುವ ಎಲ್ಲ ಶ್ರೇಯಸ್ಸು ತನ್ನ ಸೊಸೆ, )ಪಾಟ್ನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಿಕೆ, ಭಾರತಿ ಎಸ್. ಕುಮಾರ್‌ಗೆ ಸಲ್ಲಬೇಕು’’ ಎಂದು ರಾಜ್‌ಕುಮಾರ್ ಹೇಳಿದ್ದಾರೆ.

ಯುನಿವರ್ಸಿಟಿ ಇತಿಹಾಸದಲ್ಲಿ ಇದೊಂದು ಸುವರ್ಣ ದಿನ ವಾಗಿದೆ ಎಂದು ನಳಂದಾ ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್.ಪಿ. ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News