ಕಾಶ್ಮೀರದ ಮಾನವ ಗುರಾಣಿ ಪ್ರಕರಣ: ಸಂತ್ರಸ್ತ ಫಾರೂಖ್ ಆ ದಿನ ಬೆಳಗ್ಗೆ ಮತ ಚಲಾಯಿಸಿದ್ದ

Update: 2017-09-26 06:50 GMT

ಶ್ರೀನಗರ, ಸೆ.26: ಕಾಶ್ಮೀರದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಕುಖ್ಯಾತ ‘ಮಾನವ ಗುರಾಣಿ’ ಪ್ರಕರಣದ ಪೊಲೀಸ್ ತನಿಖೆಯ ಮಧ್ಯಾಂತರ ವರದಿಯಲ್ಲಿ ತಿಳಿಸಿದಂತೆ ಸೇನಾ ವಾಹನವೊಂದಕ್ಕೆ ಕಟ್ಟಿ ಹಾಕಿ ಐದು ಗಂಟೆಗಳ ಕಾಲ ಸುತ್ತಾಡಿಸಲ್ಪಟ್ಟಿದ್ದ ಫಾರೂಖ್ ಅಹ್ಮದ್ ದರ್ ಆ ದಿನ ಬೆಳಗ್ಗೆ ಮತ ಚಲಾಯಿಸಲು ಹೋಗಿದ್ದ.

ಈ ಹಿಂದೆ ಫಾರೂಕ್ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ನಾಯಕನಾಗಿದ್ದ ಹಾಗೂ ಗುಂಪೊಂದರ ನೇತೃತ್ವ ವಹಿಸಿದ್ದ ಎಂದು ಸೇನಾ ವಾಹನಕ್ಕೆ ಆತನನ್ನು ಕಟ್ಟಿ ಹಾಕಲು ಆದೇಶಿಸಿದ್ದ ಸೇನಾಧಿಕಾರಿ ಮೇಜರ್ ಲೀತುಲ್ ಗೊಗೊಯಿ ವಾದಿಸಿದ್ದರು. ‘‘ಫಾರೂಕ್ ಬೆರಳಿನಲ್ಲಿ ಮತ ಹಾಕಿದ ನಂತರ ಹಾಕಲಾಗುವ ಶಾಯಿಯ ಗುರುತು ಇತ್ತು ಎಂದು ಆ ದಿನ ನಾವು ತನಿಖೆ ನಡೆಸಲು ಹೋದಾಗ ತಿಳಿದು ಬಂದಿತ್ತು’’ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಬುಡ್ಗಾಮ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರ ಮಧ್ಯಾಂತರ ತನಿಖಾ ವರದಿ ಕೂಡ ಈ ಹೇಳಿಕೆಗೆ ಪೂರಕವಾಗಿದೆ. ‘‘ಸಂತ್ರಸ್ತ ಫಾರೂಕ್ ಆ ದಿನ ತನ್ನ ಹುಟ್ಟೂರಾದ ಚಿಲ್‌ಲ್ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ್ದ ಎಂದು ತನಿಖೆ ವೇಳೆ ಕಂಡುಬಂದಿತ್ತು. ಮತ ಚಲಾಯಿಸಿದ ನಂತರ ಆತ ಹಿಲಾಲ್ ಅಹ್ಮದ್ ಮಗ್ರೆ ಎಂಬಾತನ ಜತೆಗೆ ಗಂಪೋರಾದಲ್ಲಿ ನಡೆಯಲಿದ್ದ ಸಂತಾಪ ಸಭೆಗೆ ಹೊರಟಿದ್ದ’’ ಎಂದು ತನಿಖಾ ವರದಿ ಹೇಳಿತ್ತು.

‘‘ತನಿಖೆ ಮುಂದುವರಿದಿದ್ದು, ಜಿಲ್ಲಾ ಚುನಾವಣಾ ಕಚೇರಿ ಬುಡ್ಗಾಮ್/ಕಾಯ್ ಕಮಾಂಡರ್ 53 ಆರ್‌ಆರ್ ಕ್ಯಾಂಪ್ ಬೀರ್‌ವಾಹ್ ಇವರಿಂದ ವರದಿಗಳನ್ನು ಪಡೆದು, ವೀಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣದ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುವುದು’’ ಎಂದೂ ಮಧ್ಯಾಂತರ ವರದಿಯಲ್ಲಿ ತಿಳಿಸಲಾಗಿದೆ.

ಮಧ್ಯಾಂತರ ವರದಿಯನ್ನು ಡಿಜಿಪಿ ಎಸ್.ಪಿ.ವೈದ್ ಅವರಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆ ಗ್ರೇಟರ್ ಕಾಶ್ಮೀರ್ ತಿಳಿಸಿದರೂ ಈ ಬಗ್ಗೆ ವೈದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶ್ರೀನಗರ ಲೋಕಸಭಾ ಉಪಚುನಾವಣೆಗಾಗಿ ಮತ ಚಲಾಯಿಸಲು 26 ವರ್ಷದ ಫಾರೂಕ್ ಆ ದಿನ ಅರಿಝಲ್ ನ ಚಿಲ್‌ಲ್ ಬ್ರಾಸ್ ಪ್ರದೇಶದಲ್ಲಿ ಬೆಳಗ್ಗೆ ಸರತಿ ನಿಂತು ಈ ಮೂಲಕ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದ ಪ್ರತ್ಯೇಕತಾವಾದಿಗಳಿಗೆ ಸವಾಲೊಡ್ಡಿದ್ದ.

‘‘ನನ್ನ ಹೆಸರನ್ನು ಮತ ಚಲಾಯಿಸಿದವರ ಪಟ್ಟಿಯಲ್ಲಿ ಪರೀಕ್ಷಿಸಿ. ನಾನು ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿದವನಾಗಿರುವಾಗ ಇತರರು ಮತ ಚಲಾಯಿಸುವುದನ್ನು ತಡೆದು ನಾನೇಕೆ ಕಲ್ಲು ತೂರಲಿ?’’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ಆತ ಹೇಳಿದ್ದನಲ್ಲದೆ ತನ್ನ ಕೈಯಲ್ಲಿದ್ದ ಶಾಯಿಯ ಗುರುತನ್ನೂ ತಾನು ಭದ್ರತಾ ಸಿಬ್ಬಂದಿಗೆ ತೋರಿಸಿದ್ದಾಗಿ ಹೇಳಿದ್ದ.

ಈ ಬಗೆಗಿನ ವೀಡಿಯೋವೊಂದನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ ನಂತರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಈ ಬಗ್ಗೆ ವರದಿ ಕೇಳಿದ್ದರು. ತರುವಾಯ ಗೊಗೊಯಿ ಅವರ ಕ್ರಮವನ್ನು ಶ್ಲಾಘಿಸಿ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್  ಪ್ರಶಂಸಾ ಪತ್ರವನ್ನೂ ನೀಡಿದ್ದು ಸುದ್ದಿಯಾಗಿತ್ತು.

ಎಪ್ರಿಲ್ 9ರಂದು ಫಾರೂಕ್ ನನ್ನು ಸೇನಾ ಜೀಪ್ ಗೆ ಕಟ್ಟಿ ಹಾಕಿ 17 ಗ್ರಾಮಗಳ ಸುತ್ತ 28 ಕಿ.ಮೀ. ದೂರದ ತನಕ ಕರೆದೊಯ್ಯಲಾಗಿತ್ತೆಂದು ವರದಿಗಳು ಈ ಹಿಂದೆ ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News