ಗೌರಿ ಹತ್ಯೆಗೆ ಸಂಭ್ರಮಿಸುವವರ ಬಗ್ಗೆ ಪ್ರಧಾನಿ ಮೌನವಾಗಿದ್ದು, ನನಗಿಂತ ದೊಡ್ಡ ನಟರಾಗಲು ಪ್ರಯತ್ನಿಸುತ್ತಿದ್ದಾರೆ

Update: 2017-10-01 13:01 GMT

ಬೆಂಗಳೂರು, ಅ.1: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರ ಸುಳಿವು ಇಲ್ಲದಿರಬಹುದು. ಆದರೆ, ಹತ್ಯೆ ಸಂಬಂಧ ಸಂಭ್ರಮ ಮಾಡುತ್ತಿರುವುದು ಯಾರೆಂದು ನಮಗೆ ತಿಳಿದಿದೆ. ಇನ್ನೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿ ನಟನೆ ಮಾಡುವ ಮೂಲಕ ನನಗಿಂತ ದೊಡ್ಡ ನಟನಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಡಿವೈಎಫ್ಐ ಹಮ್ಮಿಕೊಂಡಿರುವ  11ನೆ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮೂರ್ಖರು ಹಾಕಿರುವ ಮತಗಳಿಂದಲೇ ಇಂದು ರಾಜಕೀಯದಲ್ಲಿ ಕೆಟ್ಟವರು ಇದ್ದಾರೆ. ಅಲ್ಲದೆ, ಜನಸಾಮಾನ್ಯರ ಮುಗ್ಧತೆ ಹುಟ್ಟಿನಿಂದಲೇ ಬಂದಿದೆ. ಆದರೆ, ನಾವು ಗ್ರಹಿಕೆಯನ್ನು ಬೆಳೆಸಿಕೊಳ್ಳಬೇಕು. ಯುವಕರು ಚುನಾವಣೆಯಲ್ಲಿ ಪಾಲ್ಗೊಂಡರೆ ಹೊಸ ನಾಯಕರು ಬರಲಿದ್ದಾರೆ.ಈ ಸಮಾಜಕ್ಕೆ ಹೊಸ ನಾಯಕತ್ವ ಬೇಕೆಂದು ಪ್ರಕಾಶ್ ರೈ ಹೇಳಿದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ ಮೂರ್ತಿ ಮಾತನಾಡಿ, ಯುವ ಜನರು ದೇಶದ ಸಂಪತ್ತು. ದೇಶ, ಸಮಾಜದ ಅಭಿವೃದ್ಧಿ, ಪರಿವರ್ತನೆಗೆ ಯುವ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು. ಆದರೆ, ಇಂದು ಕೋಟಿ ಕೋಟಿ ಯುವ ಜನತೆ ಕೆಲಸ ಇಲ್ಲದೆ ಅಭದ್ರತೆಯಿಂದ ನರಳುವಂತಾಗಿದೆ. ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುವ ಜನತೆ ಆತಂಕದಿಂದ ಬದುಕು ನಡೆಸುವಂಥ ವಾತಾವರಣ ನಿರ್ಮಾಣವಾಗಿದೆ ಎಂದರು.

ಮೆರವಣಿಗೆ: ಉದ್ಯೋಗ, ಅಭಿವೃದ್ಧಿ ಹಾಗೂ ಸಾಮರಸ್ಯಕ್ಕಾಗಿ ಒತ್ತಾಯಿಸಿ ಡಿವೈಎಫ್ಐ ನೂರಾರು ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣ ವರೆಗೆ ಮೆರವಣಿಗೆ ನಡೆಸಿತು.

ಸಮ್ಮೇಳನದಲ್ಲಿ ಹಿರಿಯ ಕಾರ್ಮಿಕ ಮುಖಂಡ ಆರ್. ಶ್ರೀನಿವಾಸ್, ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷ ಮುಹಮ್ಮದ್ ರಿಯಾಝ್, ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಎಂ.ಎಸ್, ಎಸ್ಎಫ್ಐ ರಾಜ್ಯಾಧ್ಯಕ್ಷ ಅಂಬರೀಶ್, ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ,  ಬಸವರಾಜ್ ಪೂಜಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಹಸಿದವರಿಗೆ ಹಾಲು ನೀಡಿ

ನಟ-ನಟಿಯರಿಗೆ ಅವರದೇ ಆದ ಅಭಿಮಾನಿ ಸಂಘಟನೆಗಳಿರುತ್ತವೆ. ಆದರೆ, ಅವರ ಜಾಹೀರಾತು ಫಲಕಗಳಿಗೆ ಹಾಲು ಎರೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ಬದಲಾಗಿ ಹಸಿದವರಿಗೆ ಹಾಲು ನೀಡಿ ಎಂದು ಪ್ರಕಾಶ್ ರೈ ಹೇಳಿದರು.

ಪೂಜಾರಿ ಮುಖ್ಯಮಂತ್ರಿ!
ಉತ್ತರ ಪ್ರದೇಶದ ಒಂದು ವೀಡಿಯೊ ನೋಡಿದೆ, ಅದರಲ್ಲಿ ಆತ ಮುಖ್ಯಮಂತ್ರಿನೂ, ದೇವಸ್ಥಾನದ ಪೂಜಾರಿನೂ ಎನ್ನುವುದು ಅನುಮಾನ ಮೂಡುತ್ತದೆ.
-ಪ್ರಕಾಶ್ ರೈ, ಹಿರಿಯ ನಟ

‘ಹಸಿದವರಿಗೆ ಹಾಲು ನೀಡಿ’
ಚಿತ್ರರಂಗದ ನಟ-ನಟಿಯರ ಸಿನೆಮಾ ತೆರೆಕಂಡಾಗ ನೋಡಿ. ಆದರೆ, ಅವರದೇ ಆದ ಅಭಿಮಾನಿ ಸಂಘಟನೆಗಳು ಬೇಕು. ಅಷ್ಟೇ ಅಲ್ಲದೆ, ಅವರ ಜಾಹೀರಾತು ಫಲಕಗಳಿಗೆ ಹಾಲು ಎರೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ಬದಲಾಗಿ ಹಸಿದವರಿಗೆ ಹಾಲು ನೀಡಿ.
-ಪ್ರಕಾಶ್ ರೈ, ಹಿರಿಯ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News