ಮುಂಬೈ ರೈಲು ದುರಂತ: ಸರಕಾರದ ನಿರ್ಲಕ್ಷ್ಯದ ಫಲ

Update: 2017-10-02 03:33 GMT

ಮುಂಬೈ ಕಾಯಕ ನಗರವೆಂದೇ ದೇಶದಲ್ಲಿ ಗುರುತಿಸಿಕೊಂಡಿದೆ. ಬದುಕು ಕಟ್ಟಿಕೊಳ್ಳಲೆಂದು ತನ್ನೆಡೆಗೆ ಧಾವಿಸಿ ಬರುವ ಕಾಯಕ ಜೀವಿಗಳನ್ನು ಜಾತಿ, ಧರ್ಮ, ಭಾಷೆ ಎಂದುಈ ನಗರ ಗುರುತಿಸಿಕೊಳ್ಳದೇ ತೆಕ್ಕೆಗೆ ತೆಗೆದುಕೊಳ್ಳುತ್ತಾ ಬಂದಿದೆ. ಎಲ್ಲೂ ಸಲ್ಲದವನ ಬದುಕಿಗೆ ಅಂತಿಮ ಭರವಸೆ ಮುಂಬೈ. ಅಲ್ಲಿ ಬದುಕು ಕಟ್ಟಿಕೊಳ್ಳಲಾಗದವನು ಎಲ್ಲೂ ಬದುಕು ಕಟ್ಟಿಕೊಳ್ಳಲಾರ ಎನ್ನುವ ಮಾತೊಂದಿದೆ. ಮಹಾತ್ಮಾ ಗಾಂಧೀಜಿ ಒಂದು ಕಾಲದಲ್ಲಿ ‘ಹಳ್ಳಿಗಳಲ್ಲಿ ಭಾರತವಿದೆ’ ಎಂದಿದ್ದರು.ಆದರೆ ಇಂದು, ಅದು ಮುಂಬೈಯಲ್ಲೇ ನಮ್ಮ ಭಾರತವಿದೆ ಎಂದು ಹೇಳುವಂತಹ ಸನ್ನಿವೇಶಕ್ಕೆ ಬಂದು ತಲುಪಿದೆ. ಇಂತಹ ಮುಂಬೈ ಶಹರದ ನರನಾಡಿಗಳಂತೆ ಇಲ್ಲಿನ ರೈಲು ಹಳಿಗಳು ಜನಜೀವನವನ್ನು ಬೆಸೆದಿವೆ. ಮುಂಬೈ ನಗರದಲ್ಲಿ 3,000ಕ್ಕೂ ಅಧಿಕ ಲೋಕಲ್ ರೈಲುಗಾಡಿಗಳು ಅತ್ತಿಂದಿತ್ತ ಚಲಿಸುತ್ತಾ ಪ್ರಯಾಣಿಕರ ಸಾಗಿಸುವಲ್ಲಿ ಶ್ರಮ ಪಡುತ್ತಿವೆ. ಒಂದು ಅಂದಾಜು ಪ್ರಕಾರ 90 ಲಕ್ಷಕ್ಕೂ ಅಧಿಕ ಮಂದಿ ಈ ರೈಲು ಗಾಡಿಗಳಲ್ಲಿ ಪ್ರತೀ ದಿನ ಪ್ರಯಾಣಿಸುತ್ತಾರೆ. ಮುಂಬೈ ನಗರವನ್ನು ರೈಲುಗಾಡಿಗಳು ಹೇಗೆ ಅನಿವಾರ್ಯವೆಂಬಂತೆ ಬೆಸೆದಿವೆ ಎನ್ನುವುದನ್ನು ಇದು ಹೇಳುತ್ತದೆ.ಬರೇ ಮುಂಬೈ ಎಂದಲ್ಲ, ಇಡೀ ದೇಶದ ಶಹರಗಳ ನಾಡಿಮಿಡಿತ ಈ ರೈಲುಗಾಡಿಗಳನ್ನು ಚುಕುಬುಕು ಸದ್ದು. ಆದುದರಿಂದಲೇ ದೇಶದ ಅಭಿವೃದ್ಧಿ ರೈಲುಗಾಡಿಗಳನ್ನು ಅವಲಂಬಿಸಿದೆ. ಆದರೆ ಇಂದು ರೈಲುಗಾಡಿಗಳ ಅವಲಂಬಿಸುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು, ಅಷ್ಟೇ ತೀವ್ರವಾಗಿ ಅದರ ಸುಧಾರಣೆಗೆ ಸರಕಾರ ಆಸಕ್ತಿಯನ್ನು ತೋರಿಸುತ್ತಿಲ್ಲ. ಜನಸಾಮಾನ್ಯರು ಅವಲಂಬಿಸುವ ಸಾಮಾನ್ಯ ಲೋಕಲ್ ರೈಲುಗಾಡಿಗಳ ಬಗ್ಗೆ ಸರಕಾರಕ್ಕೆ ಗಾಢ ನಿರ್ಲಕ್ಷವಿದೆ. ಪರಿಣಾಮವಾಗಿ, ರೈಲು ಗಾಡಿಗಳಲ್ಲಿ ಮಾತ್ರವಲ್ಲ, ರೈಲು ನಿಲ್ದಾಣಗಳಲ್ಲೂ ಭಯಾನಕ ಒತ್ತಡಗಳನ್ನು ನಾವು ಕಾಣುತ್ತಿದ್ದೇವೆ. ಮುಂಬೈಯಲ್ಲಿ ಪ್ರತಿದಿನದ ರೈಲು ಪ್ರಯಾಣ ಒಂದು ಭಯಾನಕ ಅನುಭವವೇ ಸರಿ. ರೈಲು ಏರುವುದಾಗಲಿ, ಇಳಿಯುವುದಾಗಲಿ ಪ್ರಯಾಣಿಕನ ಕೈಯಲ್ಲಿಲ್ಲ. 

ಹಿಂದಿರುವ ಜನಸಾಗರ ಚಲಿಸಿದಂತೆಯೇ ಎಲ್ಲರೂ ಮುಂದೆ ಅಥವಾ ಹಿಂದೆ ಚಲಿಸಬೇಕು. ಎರಡು ದಿನಗಳ ಹಿಂದೆ, ಮುಂಬೈಯ ರೈಲು ನಿಲ್ದಾಣದಲ್ಲಿ ನಡೆದಿರುವ ಭಯಾನಕ ಕಾಲ್ತುಳಿತ ಒಂದು ಅನಿರೀಕ್ಷಿತ ಅವಘಡವಂತೂ ಅಲ್ಲ. ಸಣ್ಣ ಪುಟ್ಟ ದುರಂತಗಳು ರೈಲುಗಾಡಿಗಳಲ್ಲಿ ಸಂಭವಿಸುತ್ತಲೇ ಇವೆ ಮತ್ತು ಒಂದು ಮಹಾದುರಂತದ ಸೂಚನೆಯನ್ನು ಮುಂಬೈ ನಿಲ್ದಾಣಗಳು ಆಗಾಗ ನೀಡುತ್ತಲೇ ಬರುತ್ತಿವೆ. ಪ್ರಯಾಣಿಕರ ಸಂಖ್ಯೆ ಸ್ಫೋಟಗೊಳ್ಳುವ ಮೊದಲು ರೈಲ್ವೆ ಇಲಾಖೆ ಮಹತ್ತರ ಸುಧಾರಣೆಗಳನ್ನು ಮಾಡಿ, ಮುಂಬೈಯನ್ನು ರಕ್ಷಿಸಬೇಕಾಗಿತ್ತು. ಮೋದಿ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ಬೆನ್ನಿಗೇ ರೈಲ್ವೆ ಬಜೆಟ್‌ನ್ನೇ ಇಲ್ಲವಾಗಿಸಿತು.

ರೈಲುಗಳಲ್ಲಿ ಬೃಹತ್ ಸುಧಾರಣೆಗಳನ್ನು ತರುತ್ತೇವೆ ಎಂದು ಪದೇ ಪದೇ ಹೇಳಿಕೆ ನೀಡುತ್ತಾ ಬಂದಿದೆಯೇ ಹೊರತು, ರೈಲು ನಿಲ್ದಾಣಗಳಲ್ಲಿ, ರೈಲ್ವೆ ಹಳಿಗಳಲ್ಲಿ ಬದಲಾವಣೆಗಳಾಗಲಿಲ್ಲ. ಕೆಲವು ಭಾಗಗಳನ್ನು ಖಾಸಗೀಕರಣಗೊಳಿಸುವುದನ್ನೇ ರೈಲ್ವೆ ಇಲಾಖೆಯ ಸುಧಾರಣೆ ಎಂದು ನಂಬಿಸಿತು. ರೈಲ್ವೈ ಇಲಾಖೆಗಳ ಮೂಲಕ ಸೌಕರ್ಯಗಳನ್ನು, ಮೂಲಭೂತ ಆವಶ್ಯಕತೆಗಳನ್ನು ಸರಿಪಡಿಸುವುದರ ಬದಲು, ಅದನ್ನೆಲ್ಲ ಮುಚ್ಚಿಟ್ಟು, ಈ ದೇಶ ಅಭಿವೃದ್ಧಿಯ ಪಥದಲ್ಲಿದೆ ಎಂದು ವಿಶ್ವವನ್ನು ನಂಬಿಸಲು ಬುಲೆಟ್ ಟ್ರೈನ್‌ನ್ನು ಘೋಷಿಸಿತು. ಆದರೆ ಈ ದೇಶದ ನಿಜವಾದ ಅಗತ್ಯ ಬುಲೆಟ್ ಟ್ರೈನ್ ಅಲ್ಲ, ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಪಾತ್ರವಹಿಸಿದ ರೈಲುಗಾಡಿಗಳ ಸುಧಾರಣೆ ಎನ್ನುವುದನ್ನು ಮುಂಬೈ ದುರಂತ ಕೂಗಿ ಹೇಳಿದೆ.

 ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗಬೇಕಾದರೆ ಅದು ಹೇಗೆ ಈ ದೇಶದ ಅಭಿವೃದ್ಧಿಯೊಂದಿಗೆ ಕರುಳಬಳ್ಳಿಯಂತೆ ಬೆಸೆದುಕೊಂಡಿದೆ ಎನ್ನುವುದನ್ನು ನಮ್ಮನ್ನಾಳುವವರು ಅರಿತುಕೊಂಡಿರಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಪ್ರಯಾಣಿಸುವ, ಸರಕುಗಳನ್ನು ಸಾಗಿಸುವ ರೈಲುಗಳು ಈ ದೇಶಕ್ಕೆ ಅಪಮಾನ ಎಂದು ಭಾವಿಸಿರುವಂತಿದೆ. ಆದುದರಿಂದ ಇವುಗಳನ್ನು ನಿರ್ಲಕ್ಷಿಸಿ ಬುಲೆಟ್ ಟ್ರೈನ್ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈ ಬುಲೆಟ್ ಟ್ರೈನ್ ಆದರೂ ಅವರ ದೂರದೃಷ್ಟಿಯ ಫಲವಾಗಿ ರೂಪುಗೊಂಡಿದೆಯೇ ಎಂದರೆ ಅದೂ ಇಲ್ಲ. ಅಹ್ಮದಾಬಾದ್‌ನಿಂದ ಮುಂಬೈಯನ್ನು ಬೆಸೆಯುವ ಈ ಯೋಜನೆಯಿಂದ ದೇಶಕ್ಕಾಗುವ ಆರ್ಥಿಕ ಲಾಭವೇನು ಎನ್ನುವುದರ ಸ್ಪಷ್ಟ ಕಲ್ಪನೆ ಮೋದಿಯವರಿಗೆ ಇಲ್ಲವೇ ಇಲ್ಲ.

2013ರಲ್ಲಿ ನರೇಂದ್ರ ಮೋದಿಯವರು ಮಾಡಿದ ಭಾಷಣವೊಂದರಲ್ಲಿ ‘ಬುಲೆಟ್ ಟ್ರೈನ್’ ಕುರಿತಂತೆ ಮಾತನಾಡುತ್ತಾರೆ. ‘ನಾವು ಬೃಹತ್ತಾದುದನ್ನು ಯೋಚಿಸಬೇಕು. ಆಗ ವಿಶ್ವದ ಗಮನ ನಮ್ಮೆಡೆಗೆ ಸೆಳೆಯುತ್ತದೆ. ಈ ಕಾರಣಕ್ಕಾಗಿ ಮನಮೋಹನ್ ಸಿಂಗ್ ಅವರ ಬಳಿ ಬುಲೆಟ್ ಟ್ರೈನ್ ಪ್ರಸ್ತಾಪ ಇಟ್ಟಿದ್ದೇನೆ’’ ಎನ್ನುತ್ತಾರೆ. ‘‘ಬರೇ ಶಾಂೈಯನ್ನು ತೋರಿಸಿ ಚೀನಾ ವಿಶ್ವವನ್ನು ಸೆಳೆಯುತ್ತಿದೆ. ಹಾಗೆಯೇ ನಾವೂ ಇಂತಹ ಬುಲೆಟ್‌ಟ್ರೈನ್‌ನ್ನು ನಿರ್ಮಿಸಿ ನಮಗೂ ಸಾಧಿಸಲು ಬರುತ್ತದೆ ಎಂದು ತೋರಿಸಿಕೊಡಬೇಕು. ಬುಲೆಟ್‌ಟ್ರೈನ್‌ನಲ್ಲಿ ಜನರು ಓಡಾಡಬೇಕಾಗಿಲ್ಲ’’ ಎಂದೂ ಅವರು ತಮ್ಮ ಮೂರ್ಖ ತಿಳುವಳಿಕೆಯನ್ನು ಪ್ರದರ್ಶಿಸುತ್ತಾರೆ. ಅಂದರೆ, ಜಪಾನ್‌ನಿಂದ 88,000 ಕೋಟಿ ರೂಪಾಯಿ ಸಾಲವನ್ನು ಪಡೆದು ಬುಲೆಟ್ ಟ್ರೈನ್‌ನ್ನು ನಿರ್ಮಿಸುತ್ತಿರುವುದು ಪ್ರಯಾಣಿಕರಿಗಾಗಿಯಲ್ಲ.ನಮಗೂ ಬುಲೆಟ್ ಟ್ರೈನ್ ನಿರ್ಮಾಣ ಮಾಡಲು ಬರುತ್ತದೆ ಎನ್ನುವುದನ್ನು ಪ್ರದರ್ಶಿಸುವುದಕ್ಕಾಗಿ. ಹೀಗೆ ಮೂರ್ಖತನದಿಂದ ಯೋಚಿಸುವ ಪ್ರಧಾನಿಯಿಂದ ಈ ದೇಶದ ಅರ್ಥವ್ಯವಸ್ಥೆ ತಲೆಕೆಳಗಾಗಿ ನಿಂತರೆ ಅದರಲ್ಲಿ ಅಚ್ಚರಿಯೇನಿದೆ? ಜಪಾನ್ ಆಗಲಿ, ಚೀನಾ ಆಗಲಿ ಇಂತಹ ಯೋಜನೆಗಳನ್ನು ರೂಪಿಸಿರುವುದು ಸಾಲಸೋಲಗಳನ್ನು ಮಾಡಿ ಅಲ್ಲ. ಅವುಗಳು ಸ್ವಾವಲಂಬಿಗಳಾಗಿ ಇಂತಹ ಯೋಜನೆಗಳನ್ನು ಹಮ್ಮಿಕೊಂಡಿವೆ. ಇಂದು ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸುವವರು ಮೇಲ್ದರ್ಜೆಯ ಜನ. ಇಂತಹ ಯೋಜನೆ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಪಾತ್ರವನ್ನು ವಹಿಸಲಾರದು. ಇಷ್ಟಕ್ಕೂ, ಬುಲೆಟ್ ಟ್ರೈನ್‌ನ ಸದ್ಬಳಕೆಯ ಬಗ್ಗೆಯೇ ಸಂಶಯವಿದೆ. ಮುಂಬೈನಿಂದ ಅಹ್ಮದಾಬಾದ್‌ಗೆ ಜನರು ಬುಲೆಟ್ ಟ್ರೈನ್ ಮೂಲಕ ಯಾಕೆ ಹೋಗಬೇಕು ಎನ್ನುವ ಪ್ರಶ್ನೆಯನ್ನು ಕೆಲವರು ಈಗಾಗಲೇ ಕೇಳಿದ್ದಾರೆ.ಮೊತ್ತ ಮೊದಲು ರೈಲ್ವೈ ಇಲಾಖೆ ಮೂಲಸೌಕರ್ಯಗಳ ಬಗ್ಗೆ ಗಮನ ಕೊಡಲಿ.

ರೈಲ್ವೆ ಹಳಿಗಳಿಂದ ಹಿಡಿದು ನಿಲ್ದಾಣಗಳ ವರೆಗೆ ಆಧುನೀಕರಣಗೊಳ್ಳಬೇಕು. ಹೆಚ್ಚುತ್ತಿರುವ ಪ್ರಯಾಣಿಕರಿಗೆ ಪೂರಕವಾಗಿ ರೈಲು ನಿಲ್ದಾಣಗಳು ವಿಸ್ತಾರಗೊಳ್ಳಬೇಕು. ಸರಕಾರ ತಕ್ಷಣ ಹಣ ಹೂಡ ಬೇಕಾಗಿರುವುದು ಇಂತಹ ಯೋಜನೆಗಳಿಗೆ. ಮುಂಬೈ ರೈಲುದುರಂತದ ಬಳಿಕ , ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ.ಯಾವ ಕಾರಣಕ್ಕೂ ಬುಲೆಟ್ ಟ್ರೈನ್ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ರಾಜ್ ಠಾಕ್ರೆ ಘೋಷಿಸಿದ್ದಾರೆ. ಹಾಗೆಯೇ, ಬುಲೆಟ್ ಟ್ರೈನ್‌ಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲಾರೆವು ಎಂದು ರೈತರೂ ಘೋಷಿಸಿದ್ದಾರೆ. ತಕ್ಷಣ ಮುಂಬೈಯ ರೈಲು ಸುಧಾರಣೆಗಳ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಮುಂಬೈಯ ರೈಲು ನಿಲ್ದಾಣಗಳಲ್ಲಿ ಇನ್ನಷ್ಟು ದುರಂತಗಳು ಸಂಭವಿಸಲಿವೆ. ದುರಂತಗಳು ಪದೇ ಪದೇ ಮರುಕಳಿಸಿದರೆ, ಅದು ಮುಂಬೈಯ ಅರ್ಥವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು. ಆದುದರಿಂದ, ತಕ್ಷಣ ಕೇಂದ್ರ ಸರಕಾರ ಶಿವಾಜಿ ಪಾರ್ಕ್, ವಲ್ಲಭಭಾಯಿ ಪಟೇಲ್ ಪ್ರತಿಮೆ ಮೊದಲಾದ ನಿಷ್ಪ್ರಯೋಜಕ ಯೋಜನೆಗಳನ್ನು ಕೈ ಬಿಟ್ಟು, ಆ ಹಣದಲ್ಲಿ ಮುಂಬೈ ಸೇರಿದಂತೆ ದೇಶದ ರೈಲುಗಳ ಮೂಲಭೂತ ಸುಧಾರಣೆಗೆ ಆದ್ಯತೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News