​ಹಿಂದೂ ಯುವಕನ ಚಿಕಿತ್ಸೆಗೆ ನೆರವಾಗಲು ಮುಹರ್ರಂ ಆಚರಣೆಯನ್ನು ಕೈಬಿಟ್ಟ ಮುಸ್ಲಿಮರು

Update: 2017-10-06 06:54 GMT

ಮಿಡ್ನಾಪುರ್, ಅ.6: ಪಶ್ಚಿಮ ಬಂಗಾಳದ ಖರಗಪುರದ ಪುರಾತನ್ ಬಜಾರ್ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರು ಈ ವರ್ಷದ ಮುಹರ್ರಂ ಮೆರವಣಿಗೆಯನ್ನು ರದ್ದುಗೊಳಿಸಿ ಅದರಿಂದ ಉಳಿತಾಯವಾದ ಹಣವನ್ನು ಕ್ಯಾನ್ಸರ್ ಪೀಡಿತನಾಗಿರುವ ತಮ್ಮ ಪ್ರದೇಶದ ಹಿಂದೂ ಯುವಕನ  ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದಾರೆ.

ಮೆರವಣಿಗೆಯನ್ನು ಆಯೋಜಿಸುವ ಸಮಾಜ ಸಂಘ ಕ್ಲಬ್ ಮೆರವಣಿಗೆಗೆಂದು 50,000 ರೂ. ದೇಣಿಗೆ ಸಂಗ್ರಹಿಸಿ ಅದನ್ನು  ಹಾಡ್‍ಗಿಕಿನ್ಸ್ ಲಿಂಫೋಮಾ ಕಾಯಿಲೆಯಿಂದ ಬಳಲುತ್ತಿರುವ ಅಬಿರ್ ಭುನಿಯಾ(35) ಎಂಬವರ ಚಿಕಿತ್ಸೆಗೆ ನೀಡಲಿದ್ದಾರೆ. ಈಗಾಗಲೇ ಸಂಘ ಅವರಿಗೆ 6,000 ರೂ. ನೀಡಿದೆ.
ದಕ್ಷಿಣ ಕೊಲ್ಕತ್ತಾದಲ್ಲಿರುವ ಸರೋಜ್ ಗುಪ್ತಾ ಕ್ಯಾನ್ಸರ್ ಸೆಂಟರ್ ನಲ್ಲಿ ಕೆಮೋಥೆರಪಿ ಚಿಕಿತ್ಸೆಯನ್ನು ಅಬಿರ್ ಪಡೆಯುತ್ತಿದ್ದು ಮೂಳೆ ಮಜ್ಜೆಯ ಕಸಿ ಸಹಿತ ಚಿಕಿತ್ಸೆಗೆ 12 ಲಕ್ಷ ರೂ. ಬೇಕಾಗಿದೆ.

“ಮುಹರ್ರಂ ಮೆರವಣಿಗೆಯನ್ನು ಪ್ರತಿ ವರ್ಷ ಆಯೋಜಿಸಬಹುದು. ಆದರೆ ನಾವು ಮೊದಲು ಜೀವವೊಂದನ್ನು ಉಳಿಸಬೇಕು,'' ಎಂದು ಸಂಘದ ಕಾರ್ಯದರ್ಶಿ ಅಮ್ಜದ್ ಖಾನ್ ಹೇಳುತ್ತಾರೆ. ತನ್ನ ಚಿಕಿತ್ಸೆಗೆ ಹಣ ಹೊಂದಿಸುತ್ತಿರುವ ಮುಸ್ಲಿಮರ ಬಗ್ಗೆ ಅಬಿರ್ ಗೆ ಅಪಾರ ಅಭಿಮಾನವಿದೆ. ``ನಾನು ಸಂಪೂರ್ಣ ಗುಣಮುಖನಾಗುತ್ತೇನೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ, ಆದರೆ ನನ್ನ ನೆರೆಹೊರೆಯವರ ಮಾನವೀಯತೆ ನನ್ನ ಹೃದಯ ತಟ್ಟಿದೆ,'' ಎಂದು ಅವರು ಹೇಳುತ್ತಾರೆ.

ತನ್ನ ಅಜ್ಜಿ ಹಾಗೂ ಹೆತ್ತವರನ್ನು ಕಳೆದ ವರ್ಷ ಕಳೆದುಕೊಂಡ ಅಬಿರ್ ತನ್ನ ಪತ್ನಿಯ ಜತೆ ವಾಸಿಸುತ್ತಿದ್ದು ದಂಪತಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮುಸ್ಲಿಮರು ಹಿಂದೂ ಯುವಕನೊಬ್ಬನ ಚಿಕಿತ್ಸೆಗೆ ಹಣ ಹೊಂದಿಸುತ್ತಿರುವ ಬಗ್ಗೆ ತಿಳಿದು ಖರಗಪುರ್ ಮುನಿಸಿಪಾಲಿಟಿ ಅಧ್ಕಕ್ಷ ಪ್ರದೀಪ್ ಸರ್ಕಾರ್ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ.

ಸ್ಥಳೀಯ ಕೌನ್ಸಿಲರ್ ತುಷಾರ್ ಚೌಧುರಿ ಕೂಡ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹತ್ತಿರದಲ್ಲಿರುವ ಸಿತಾಲ ದೇವಿಯ ಮಂದಿರಕ್ಕೆ ಗೇಟ್ ಒಂದನ್ನು ನಿರ್ಮಿಸಲು ಮುಸ್ಲಿಮರು ಧನಸಹಾಯ ಮಾಡಿದ್ದರು. ದೇವಿಗೆ ಅರ್ಪಿಸಿದ ನೈವೇದ್ಯವನ್ನು ಮುಸ್ಲಿಮರಿಗೂ ಹಂಚಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News