ಮಹಾತ್ಮಾ ಗಾಂಧೀಜಿ ಹತ್ಯೆಯ ಮರು ತನಿಖೆಗೆ ಸಹಾಯಕವಾಗಲು ಅಮಿಕಸ್‌ ಕ್ಯೂರಿ ಯನ್ನು ನೇಮಕ ಮಾಡಿದ ಸುಪ್ರಿಂ

Update: 2017-10-06 08:52 GMT

ಹೊಸದಿಲ್ಲಿ , ಅ.6:  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ  ಹತ್ಯೆಯ ಮರು ತನಿಖೆಗೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಲು ಸಹಾಯಕವಾಗುವಂತೆ ಶುಕ್ರವಾರ ಸುಪ್ರಿಂ ಕೋರ್ಟ್ ಅಮಿಕಸ್‌ ಕ್ಯೂರಿ ಯನ್ನು ನೇಮಕ ಮಾಡಿದೆ.

ಸುಪ್ರಿಂ ಕೋರ್ಟ್ ನ ಜಸ್ಟಿಸ್‌ ಎಸ್‌ ಎ ಬೋಬಡೆ ಮತ್ತು ಜಸ್ಟಿಸ್‌ ಎಲ್‌ ನಾಗೇಶ್ವರ ರಾವ್‌ ಅವರನ್ನು ಒಳಗೊಂಡ ಪೀಠ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದ್ರ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಿಸಿತು.

ಮಹಾತ್ಮ ಗಾಂಧಿ ಅವರ ಹತ್ಯೆಯ ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಗೆ ಮುಂಬೈ ಮೂಲದ  ಸಂಶೋಧಕ ಹಾಗೂ ಅಭಿನವ್ ಭಾರತ್ ಟ್ರಸ್ಟ್ ನ ಡಾ ಪಂಕಜ್ ಫಡ್ನಾವಿಸ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನ್ಯಾಯಪೀಠ 10 ನಿಮಿಷಗಳ ಕಾಲ ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು  ಅಕ್ಟೋಬರ್‌ 30ಕ್ಕೆ ನಿಗದಿಸಿತು. 

ಮಹಾತ್ಮಾ ಗಾಂಧಿ ಅವರನ್ನು 1948ರ ಜನವರಿ 30ರಂದು ಹೊಸದಿಲ್ಲಿಯಲ್ಲಿ ಹಿಂದೂ ಬಲಪಂಥೀಯ ರಾಷ್ಟ್ರೀಯ ವಾದಿ ನಾಥೂರಾಮ್‌ ವಿನಾಯಕ್‌ ಗೋಡ್ಸೆ, ಅತ್ಯಂತ ಹತ್ತಿರದಿಂದ ಗುಂಡಿಟ್ಟು  ಹತ್ಯೆ ಮಾಡಿದ್ದನು. ಪ್ರಕರಣದಲ್ಲಿ ಗೋಡ್ಸೆ ಸೇರಿದಂತೆ ಮೂವರು ಭಾಗಿಯಾಗಿದ್ದರು. ಈ ಪೈಕಿ ಇಬ್ಬರಿಗೆ    ಮರಣ ದಂಡನೆ ವಿಧಿಸಲಾಗಿತ್ತು.

ಮಹಾತ್ಮಾ ಗಾಂಧಿ ಹತ್ಯಾ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿರಲಿಲ್ಲ. ನ.15, 1949ರಂದು ಹಂತಕರಿಗೆ ಗಲ್ಲು ವಿಧಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಜ.26, 1950ರಲ್ಲಿ ಉದಯಿಸಿತ್ತು. ಈ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಗಾಂಧಿ ಹತ್ಯೆಯ ಮರು ತನಿಖೆ ನಡೆಸಬೇಕು ಎಂದು ಡಾ ಪಂಕಜ್ ಫಡ್ನಾವಿಸ್ ಅವರು ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News