ಕೇಸಿಗೆ ಹೆದರುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಅನಂತಕುಮಾರ್

Update: 2017-10-09 15:50 GMT

ಬೆಂಗಳೂರು, ಅ.9: ಸುದೀರ್ಘ ಅವಧಿಯ ನಂತರ ಸಿಡಿಯನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದಲ್ಲದೆ, ಸಿಡಿಯಲ್ಲಿರುವುದನ್ನೇ ಸತ್ಯ ಎನ್ನುವಂತೆ ಎಸಿಬಿ ಮೂಲಕ ಹೇರಲಾಗುತ್ತಿದೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಆರೋಪಿಸಿದ್ದಾರೆ.

ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್‌ಗೆ ಕಪ್ಪನೀಡಿದ ವಿಚಾರವಾಗಿ ಇರುವ ಸಿಡಿ ಬಿಡುಗಡೆಯೇ ಒಂದು ದೊಡ್ಡ ಜಾಲ. ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುದೀರ್ಘ ಅವಧಿಯ ಸಿಡಿಯನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ. ಮುಖ್ಯಮಂತ್ರಿಗಳ ಅಕ್ರಮದ ಬಗ್ಗೆ ಮಾತನಾಡಿದರೆ, ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ವಿಧಾನ ಮಂಡಳ, ನ್ಯಾಯಾಲಯದ ಮೂಲಕ ನಾವು ತಕ್ಕ ಉತ್ತರ ನೀಡುತ್ತೇವೆ ಎಂದರು.

ಎಫ್‌ಎಸ್‌ಎಲ್ ವರದಿ ಆಧಾರದ ಮೇಲೆ ಎಸಿಬಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ರೀತಿ ಎಫ್‌ಐಆರ್ ದಾಖಲಿಸಿರುವುದೇ ಪ್ರಶ್ನಾರ್ಹ. ಇಂದು ಪ್ರತಿಪಕ್ಷವಾದ ಬಿಜೆಪಿಯ ಪ್ರಮುಖರಾದ ಯಡಿಯೂರಪ್ಪ, ನನ್ನ ಮೇಲೆ ಕೇಸು ಹಾಕುತ್ತಿದ್ದಾರೆ. ಇದಕ್ಕೆ ಹೆದರುವ ಪ್ರಶ್ನೆ ಇಲ್ಲ. ಸಂವಿಧಾನ, ನ್ಯಾಯಾಲಯದ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದರು.

ತರಾತುರಿಯಲ್ಲಿ ವರದಿ: ನಮ್ಮ ಪ್ರಕರಣದಲ್ಲಿ ಎಫ್‌ಎಸ್‌ಎಲ್ ಕೇವಲ 15 ದಿನದಲ್ಲಿ ವರದಿ ಸಲ್ಲಿಸಿದೆ. ಡಿವೈಎಸ್ಪಿ ಬಿ. ಗಣಪತಿ, ಅನುಪಮಾ ಶೆಣೈ ಅವರ ಪ್ರಕರಣದಲ್ಲಿ ವರ್ಷವಾದರೂ ಇನ್ನೂ ಏಕೆ ವರದಿ ನೀಡಿಲ್ಲ. ನಮ್ಮ ಸಂಭಾಷಣೆಯ ಸಂಪೂರ್ಣ ವೀಡಿಯೊ ಚಿತ್ರೀಕರಣವನ್ನು ಏಕೆ ಬಿಡುಗಡೆ ಮಾಡಿಲ್ಲ? ಕೆಲವೇ ಸೆಕೆಂಡ್‌ಗಳ ಆಡಿಯೊ ಕ್ಲಿಪಿಂಗ್ ಬಳಸಲಾಗಿದೆ. ಕೇವಲ ರಾಜಕೀಯ ಪಿತೂರಿಗಾಗಿ ಸಿಎಂ ಆತುರದ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಮೇಲೆ 80 ಕೋಟಿ ರೂ. ಲಾಭ ಸಂಬಂಧ ವೆಬ್‌ಸೈಟ್ ವರದಿಯೊಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಈಗಾಗಲೇ ಅಲಹಾಬಾದ್ ಕೋರ್ಟ್‌ನಲ್ಲಿ ವೆಬ್‌ಸೈಟ್ ಮತ್ತು ವರದಿಗಾರರ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
-ಅನಂತಕುಮಾರ್, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News