ಸಾಹಿತಿಗಳು ಮಾತ್ರ ಸಮ್ಮೇಳನಾಧ್ಯಕ್ಷರು ಆಗಬೇಕೆಂಬ ನಿಯಮವಿಲ್ಲ: ಪ್ರೊ.ಚಂಪಾ

Update: 2017-10-09 16:18 GMT

ಬೆಂಗಳೂರು, ಅ.9: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು ಮಾತ್ರ ಸಮ್ಮೇಳನಾಧ್ಯಕ್ಷರು ಆಗಬೇಕು ಎಂಬ ನಿಯಮವಿಲ್ಲ. ಕನ್ನಡಪರ ಹೋರಾಟಗಾರರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು 83ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಡು-ನುಡಿ ಕಟ್ಟಿ, ಬೆಳೆಸುವ ನಿಟ್ಟಿನಲ್ಲಿ ಏನು ಕೆಲಸ ಮಾಡಬೇಕು ಎಂಬುದನ್ನು ಸಮಗ್ರ ಚೌಕಟ್ಟಿನೊಳಗೆ ಸಲಹೆ ನೀಡುವುದು ನನ್ನ ಜವಾಬ್ದಾರಿ. ಆದರೆ, ಅದನ್ನು ಜಾರಿ ಮಾಡಬೇಕಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಚಳವಳಿ ಹಾಗೂ ಸಾಹಿತ್ಯಕ್ಕೆ ನೇರವಾದ ಸಂಬಂಧವಿದೆ. ಕೆಲವು ಸಾಹಿತಿಗಳು ಬರೆದರೆ ಅಷ್ಟೇ ನನ್ನ ಕೆಲಸ ಎನ್ನುತ್ತಾರೆ. ಆದರೆ, ನಾನು ಅವರನ್ನು ಕನ್ನಡದ ಬಗ್ಗೆ ನಿಮಗಿರುವ ಕಳಕಳಿ ಎಷ್ಟು ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದ ಅವರು, ಕ್ರಿಯಾಶೀಲರಾಗಿ ಕನ್ನಡಕ್ಕಾಗಿ ಹೋರಾಟ ಮಾಡುವುದು ಒಂದು ದಾರಿ. ನಾಡು-ನುಡಿ ವಿಚಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರು ವಾಟಾಳ್ ನಾಗರಾಜ್ ಎಂದು ಹೇಳಿದರು.

ಬರಹದ ಮೂಲಕ ನಾವು ಏನು ಮಾಡಬೇಕು ಎಂಬ ದಾರಿಗೆ ಕುವೆಂಪು ಹೆಸರಾಗಿದ್ದಾರೆ. ಕುವೆಂಪುರ ನಾಡಗೀತೆ ಕೇವಲ ಹಾಡಲ್ಲ. ಬದಲಿಗೆ ನಮ್ಮ ಕರ್ನಾಟಕ ಹೇಗಿರಬೇಕು ಎಂಬುದನ್ನು ವೈಜ್ಞಾನಿಕವಾಗಿ ತಿಳಿಸುವ ರಾಜಕೀಯ ಕವಿತೆಯಾಗಿದೆ ಎಂದ ಅವರು, ಬೇರೆ ರಾಜ್ಯಗಳು ನಮ್ಮ ನಾಡಗೀತೆಯನ್ನು ಮಾದರಿ ನಾಡಗೀತೆಯನ್ನಾಗಿ ಸ್ವೀಕರಿಸಬಹುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಕನ್ನಡ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಅನುದಾನ ನೀಡಲು ಹಿಂದೇಟು ಹಾಕಿಲ್ಲ. ಅದು ಸಮಾಧಾನಕರವಾದ ಸಂಗತಿಯಾಗಿದೆ. ಕನ್ನಡದ ಮೇಲೆ ಪ್ರೀತಿ ಇರುವವರು ಕನ್ನಡ ಸಮಸ್ಯೆಗಳನ್ನು ಬಗೆ ಹರಿಸುವಂತೆ ಸರಕಾರಗಳ ವೆುೀಲೆ ಒತ್ತಡ ಹೇರುವ ಕಡೆಗೆ ಚಿಂತಿಸಿದರೆ ಸರಕಾರ ಮುಕ್ತವಾಗಿ ಯೋಚಿಸಲು ಸಾಧ್ಯವಾಗುವಂತೆ ಮಾಡಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಮುಖಂಡರಾದ ಶಿವರಾಮೇಗೌಡ, ಸಾ.ರಾ.ಗೋವಿಂದು, ಪ್ರವೀಣ್‌ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News