ಮೋಡಬಿತ್ತನೆ ತಂತ್ರಜ್ಞಾನದ ಜನಕ ನೀಲ್ ಬ್ರಾಕಿನ್ ಜತೆ ಎಚ್.ಕೆ.ಪಾಟೀಲ್ ಚರ್ಚೆ

Update: 2017-10-09 16:27 GMT

ಬೆಂಗಳೂರು, ಅ.9: ಮೋಡ ಬಿತ್ತನೆ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ ಅಮೆರಿಕಾದ weather modification international (ವೆದರ್ ಮಾಡಿಫಿಕೇಷನ್ ಇಂಟರ್‌ನ್ಯಾಷನಲ್) ಸಂಸ್ಥೆಯ ಅಧ್ಯಕ್ಷ ನೀಲ್ ಬ್ರಾಕಿನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಜೊತೆ ಚರ್ಚೆ ನಡೆಸಿದರು.

ಸೋಮವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ನೀಲ್ ಬ್ರಾಕಿನ್‌ಗೆ ಮೋಡ ಬಿತ್ತನೆಯಿಂದಾಗಿ ವಾತಾವರಣ ಮತ್ತು ಹವಾಮಾನ ಬದಲಾವಣೆಯ ಫಲಶೃತಿಯಿಂದಾಗಿ ಈಗ ರಾಜ್ಯದ ಮಳೆಯ ಪ್ರಮಾಣದಲ್ಲಿ ಶೇ.10 ರಿಂದ 20ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ವೈಜ್ಞಾನಿಕ ಅಧ್ಯಯನದ ಮಾಹಿತಿಯನ್ನು ಎಚ್.ಕೆ.ಪಾಟೀಲ್ ನೀಡಿದರು.

ಮೋಡ ಬಿತ್ತನೆ ಪ್ರಾರಂಭವಾದಾಗ ಶೇ.57ರಷ್ಟು ಮಳೆಯ ಪ್ರಮಾಣದ ಕೊರತೆ ಎದುರಿಸುತ್ತಿದ್ದ ರಾಜ್ಯ ಈಗ ಈ ಕೊರತೆಯನ್ನು ನೀಗಿರುವ ಸಮಾಧಾನ ಮತ್ತು ಸಂತಸ ನಾಗರಿಕರಲ್ಲಿ ಮನೆ ಮಾಡಿದೆ ಹಾಗೂ ಸರಕಾರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.

ಮಳೆಯ ಪ್ರಮಾಣ ಹೆಚ್ಚಳವನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ರಾಜ್ಯ ತಾಂತ್ರಿಕವಾಗಿ ಬಹಳಷ್ಟು ಸಿದ್ಧವಾಗಿದೆ. 6 ಸಾವಿರ ಮಳೆ ಮಾಪಕಗಳನ್ನು ಗ್ರಾಮಾಂತರ ಭಾಗದಲ್ಲಿ ಹೊಂದಿದ್ದು ಮೋಡ ಬಿತ್ತನೆಗೂ ಮೊದಲು 2 ತಾಸು ಮತ್ತು ಮೋಡ ಬಿತ್ತನೆಯ ನಂತರ 2 ತಾಸು ನಿಖರವಾದ ಮಳೆಯ ಪ್ರಮಾಣವನ್ನು ಅಳತೆ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ರಾಜ್ಯದ ಮಹತ್ವದ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ 3 ಪ್ರಮುಖ ಕೇಂದ್ರಗಳಲ್ಲಿ ಇರುವ ರಡಾರ್‌ಗಳ ಮೂಲಕ ಅಂಕಿ ಅಂಶಗಳನ್ನು ಮತ್ತು ಮೋಡಗಳ ಸಾಂದ್ರತೆ ಯನ್ನು ನಿಖರವಾಗಿ ಪತ್ತೆ ಹಚ್ಚಿ ಅಂತಹ ಮೋಡಗಳ ಮೇಲೆ ಬಿತ್ತನೆ ಮಾಡಿರುವುದರಿಂದ ಮಳೆಯ ಪ್ರಮಾಣ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ಮಳೆಯ ಪ್ರಮಾಣವು ಕೇವಲ ಮೋಡ ಬಿತ್ತನೆಯ ನಂತರ ಒಂದೆರಡು ತಾಸುಗಳ ನಂತರ ಹೆಚ್ಚಳವಾಗುತ್ತದೆ ಎಂಬ ಅಂಶಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಬಹು ದೂರ ಸಾಗಿ ಮೋಡ ಬಿತ್ತನೆಯ 24 ತಾಸುಗಳ ನಂತರವೂ ನೈಸರ್ಗಿಕವಾದ ಯಾವುದೇ ಕಾರಣ ಇಲ್ಲದೆ ಮಳೆ ಸುರಿದಿರುವ ಪ್ರಯೋಗ ನಮ್ಮ ಕಣ್ಣ ಮುಂದೆ ಈಗ ಇದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

ಹವಾಮಾನ ಬದಲಾವಣೆಗೆ ಮತ್ತು ವಾತಾವರಣದಲ್ಲಿ ಮಳೆಯ ಪ್ರಮಾಣವನ್ನು ನಿಖರವಾಗಿ ಅಳತೆ ಮಾಡಲು ಅತ್ಯಾವಶ್ಯಕ ಉಪಕರಣಗಳಲ್ಲಿ ಒಂದಾಗಿರುವ ಮೋಡ ಬಿತ್ತನೆ ಕರ್ನಾಟಕದಲ್ಲಿ ಯಶಸ್ವಿಯಾದ ರೀತಿಯಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸಿ ನೆಮ್ಮದಿ ತಂದಿದೆ ಎಂದರು.

ರಾತ್ರಿ ಹೊತ್ತು ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಬಿತ್ತನೆಗೆ ಯೋಗ್ಯವಾಗಿರುವ ಮೋಡಗಳ ಲಭ್ಯತೆ ರಾತ್ರಿಯೂ ಇರುವುದರಿಂದ ರಾತ್ರಿ ಹೊತ್ತು ಮೋಡ ಬಿತ್ತನೆಯನ್ನು ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಕೈಗೊಳ್ಳಲು ತಾಂತ್ರಿಕವಾಗಿ ಪ್ರಯತ್ನಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಿಗೆ ಎಚ್.ಕೆ.ಪಾಟೀಲ್ ಸೂಚಿಸಿದರು.

ಈ ಸಂದರ್ಭದಲ್ಲಿ ರಾಜ್ಯ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಎಚ್.ಪಿ.ಪ್ರಕಾಶ್ ಮತ್ತು ಮುಖ್ಯ ಇಂಜಿನಿಯರ್ ಪ್ರಕಾಶ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News