ಅ.13 ರಂದು ಪೆಟ್ರೋಲ್, ಡೀಸೆಲ್ ಬಂಕ್ ಗಳ ಮುಷ್ಕರ

Update: 2017-10-09 16:30 GMT

ಬೆಂಗಳೂರು, ಅ.9: ಡೀಲರ್‌ಗಳ ಕಮೀಷನ್ ಹೆಚ್ಚಿಸಬೇಕು, ದಿನನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ಪದ್ಧತಿ ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.13 ರಂದು ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬಂಕ್‌ಗಳ ಮುಷ್ಕರಕ್ಕೆ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್(ಯುಪಿಎಫ್) ನಿರ್ಧರಿಸಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟದ (ಎಕೆಎಫ್‌ಪಿಟಿ) ಅಧ್ಯಕ್ಷ ಬಿ.ಆರ್.ರವೀಂದ್ರನಾಥ್, ಮುಷ್ಕರದ ಅಂಗವಾಗಿ ಅ.13 ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಖರೀದಿ ಮತ್ತು ಮಾರಾಟ ಸ್ಥಗಿತಗೊಳಿಸುವ ಮೂಲಕ ಎಲ್ಲ ಬಂಕ್‌ಗಳು ಮುಷ್ಕರದಲ್ಲಿ ಭಾಗಿಯಾಗಲಿವೆ ಎಂದು ಹೇಳಿದರು.

ಸರಕಾರಿ ಸ್ವಾಮ್ಯದ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿಎಲ್ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಬಂಕ್ ಮಾಲಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಲ್ಲದೆ, ಕೇಂದ್ರ ಪೆಟ್ರೋಲಿಯಂ ಸಚಿವರು ಅವೈಜ್ಞಾನಿಕ ನೀತಿಗಳನ್ನು ರೂಪಿಸಿದ್ದು, ಡೀಲರ್ಸ್‌ಗಳ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ. ಇವೆಲ್ಲದರ ವಿರುದ್ಧ ಒಂದು ದಿನದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೀಗಾಗಿ, ಒಂದು ದಿನದ ಮಟ್ಟಿಗೆ ಪೆಟ್ರೋಲ್, ಡಿಸೇಲ್ ಸರಬರಾಜು ವ್ಯತ್ಯಯವಾಗುತ್ತದೆ. ರಾಜ್ಯದ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಿತ್ಯ ತೈಲ ದರ ಪರಿಷ್ಕರಣೆಯಿಂದ ಬಂಕ್ ಮಾಲಕರಿಗೆ ಭಾರಿ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರಿಗೆ ಅಥವಾ ಡೀಲರ್‌ಗಳಿಗೆ ಯಾವುದೇ ಉಪಯೋಗವಿಲ್ಲ. ಆದುದರಿಂದ ಕೂಡಲೇ ಪದೇ ಪದೇ ತೈಲ ದರ ಪರಿಷ್ಕರಣೆ ಮಾಡುತ್ತಿರುವುದನ್ನುನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಹೋಂ ಡೆಲಿವರಿ ಯೋಜನೆ ಅತ್ಯಂತ ಅಪಾಯಕಾರಿಯಾಗಿದೆ. ಇದರಿಂದ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಪೆಟ್ರೋಲ್-ಡೀಸೆಲ್ ಸಾಗಾಣೆ ಮಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅಲ್ಲದೆ, ಗುಣಮಟ್ಟದ ಖಾತ್ರಿ ನೀಡಲು ಆಗಲ್ಲ. ಹಾಗೂ ಮನೆಯ ಬಳಿ ಖರೀದಿ ಮಾಡುವವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಂಭವವೂ ಇದೆ. ಈ ನಿಟ್ಟಿನಲ್ಲಿ ಸರಕಾರ ವೈಜ್ಞಾನಿಕವಾಗಿ ಯೋಚಿಸಿ, ಅನುಷ್ಠಾನಕ್ಕೆ ತರಬೇಕು ಎಂದರು.

ಜಿಎಸ್‌ಟಿಯಡಿ ತರುವಂತೆ ಆಗ್ರಹ: ಕೇಂದ್ರ ಸರಕಾರ ಒಂದು ರಾಷ್ಟ್ರ ಒಂದು ತೆರಿಗೆ ಕಲ್ಪನೆಯಡಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ಮಾಡಿದೆ. ಅದರ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೈಬಿಟ್ಟಿದ್ದು, ಕೂಡಲೇ ಇದನ್ನು ಜಿಎಸ್‌ಡಿ ಅಡಿಯಲ್ಲಿ ಸೇರಿಸಬೇಕು. ಪೆಟ್ರೋಲ್ ಬಂಕ್‌ಗಳ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗೆ ನೀಡುವ ಕುರಿತು ಸೂಕ್ತ ನಿಯಮಾವಳಿ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅ.13 ರಂದು ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ದೇಶದಾದ್ಯಂತ ಎಲ್ಲ ಕಡೆಗಳಲ್ಲಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಗ್ರಾಹಕರು ಅ.12 ರಂದು ಅಗತ್ಯವಿರುವಷ್ಟು ತೈಲವನ್ನು ಖರೀದಿಸುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದ ಅವರು, ಅ.27 ರೊಳಗೆ ನಮ್ಮ ಬೇಡಿಕೆಗಳು ಈಡೇರಿಸಲಿಲ್ಲ ಎಂದಾದರೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News