ಸಿದ್ಧಾಂತಗಳಲ್ಲಿ ಚಲನಶೀಲತೆಯಿಲ್ಲದಿದ್ದರೆ ಅಸ್ತಿತ್ವಕ್ಕೆ ಧಕ್ಕೆ: ಡಾ. ಕೆ.ಮರುಳಸಿದ್ದಪ್ಪ

Update: 2017-10-09 16:33 GMT

ಬೆಂಗಳೂರು, ಅ.9: ಮಾರ್ಕ್ಸ್‌ವಾದ, ಅಂಬೇಡ್ಕರ್ ವಾದ, ಗಾಂಧಿವಾದ, ಲೋಹಿಯಾವಾದ ಸೇರಿದಂತೆ ಯಾವುದೇ ಸಿದ್ಧಾಂತವೂ ಚಲನಶೀಲವಾಗಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳಸಿದ್ದಪ್ಪ ಅಭಿಪ್ರಾಯಿಸಿದ್ದಾರೆ.

ಸಮಾಜವಾದಿ ಕ್ರಾಂತಿ ಶತಮಾನೋತ್ಸವದ ಅಂಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಸಮಾಜವಾದ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಪಕ್ಷ ಅಥವಾ ಸಿದ್ಧಾಂತದಿಂದ ಬದಲಾವಣೆ ಕಾಣಲು ಸಾಧ್ಯವಿಲ್ಲ. ಸಮಾನತೆಯ ಆಶಯವುಳ್ಳ ಪ್ರತಿಯೊಬ್ಬರೂ ಒಂದಾದರೆ ಮಾತ್ರ ಬದಲಾವಣೆಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಸಮಾಜವಾದ ಬೇರುಬಿಟ್ಟ ಆರಂಭದಲ್ಲಿ ಜಗತ್ತಿನ 3ನೆ ಒಂದು ಭಾಗದಷ್ಟು ದೇಶಗಳು ಸಮಾಜವಾದವನ್ನು ಒಪ್ಪಿಕೊಂಡಿದ್ದವು. ಆದರೆ 21ನೆ ಶತಮಾನದ ವೇಳೆಗೆ ಈ ವಾದವನ್ನು ಒಪ್ಪಿಕೊಂಡ ರಾಷ್ಟ್ರಗಳು ಜಗತ್ತಿನ 5ನೆ ಒಂದು ಭಾಗಕ್ಕೆ ಇಳಿಯಿತು ಎಂದ ಅವರು, 20ನೆ ಶತಮಾನದಲ್ಲಿ ಸಮಾಜವಾದವು ತನ್ನ ಬೇರು ಬಿಟ್ಟಿತ್ತು. ಅಷ್ಟೇ ಕ್ಷಿಪ್ರವಾಗಿ ತನ್ನ ಅಸ್ತಿತ್ವನ್ನೂ ಕಳೆದುಕೊಂಡಿತ್ತು ಎಂದರು.

ಕೋಮುವಾದಿಗಳನ್ನು ಪ್ರಜಾಪ್ರಭುತ್ವದಡಿ ಸೋಲಿಸುವುದೇ ನಮ್ಮ ಗುರಿ. ಹೀಗಾಗಿ ಭಿನ್ನ ವಿಚಾರ, ಗುಂಪುಗಳ ನಡುವೆ ಒಗ್ಗೂಡುವ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಗಂಡಾಂತರದಿಂದ ಪಾರಾಗಲು ಸಾಧ್ಯ. ಪ್ರಗತಿಪರ ಶಕ್ತಿಗಳು ಒಟ್ಟಾಗಿ ಅಹಂಕಾರ, ದ್ವೇಷ, ಅಸೂಯೆಯನ್ನು ನಾಶಗೊಳಿಸಬೇಕು. ಒಳ್ಳೆಯ ರಾಜಕಾರಣ ಕಟ್ಟಬೇಕಾದರೆ ಉತ್ತಮ ಆಶಯ ಇರುವವರೆಲ್ಲರೂ ಒಗ್ಗಟ್ಟಾಗಬೇಕು. ಇದಕ್ಕಾಗಿ ಯುವಜನಾಂಗ ಮುಂದೆ ಬರಬೇಕು ಎಂದು ಕರೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ನ್ಯಾಯಯುತವಾಗಿ ನಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ಪ್ರೇರೇಪಿಸಿದ್ದೇ ಸಮಾಜವಾದ. ಸಾಹಿತಿ ಕುವೆಂಪು, ತೇಜಸ್ವಿ, ದೇವನೂರ ಮಹಾದೇವ ಸೇರಿದಂತೆ ಅನೇಕ ಸಾಹಿತಿಗಳು ಸಾಹಿತ್ಯದ ಮೂಲಕ ಜನರನ್ನು ಪ್ರೇರೇಪಿಸಿದ್ದಾರೆ. ಇದೀಗ ಸಮಾಜವಾದದ ಆಶಯವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯ ರಚನೆ ಸಮಾಜವಾದದ ಪರಿಕಲ್ಪನೆಯಡಿ ಮೂಡಿಬರಬೇಕಿದೆ ಎಂದು ನುಡಿದರು.

ಗೌರಿ ಹತ್ಯೆಗೆ 1 ತಿಂಗಳು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಡಾ. ಎಂ.ಎಂ. ಕಲಬುರ್ಗಿಯವರು ಹತ್ಯೆ ನಡೆದು ಎರಡು ವರ್ಷವಾಯಿತು. ಆದರೆ ಇದುವರೆಗೂ ಹಂತಕರು ಯಾರೆಂದು ಪತ್ತೆಯಾಗಿಲ್ಲ ಎಂದು ವಸುಂಧರಾ ಭೂಪತಿ ವಿಷಾದ ವ್ಯಕ್ತಪಡಿಸಿದರು.

ಕಮ್ಯೂನಿಸ್ಟ್ ಪಕ್ಷದ ಮುಖಂಡ ಕೆ. ಪ್ರಕಾಶ್ ಮಾತನಾಡಿ, ವಚನ ಚಳವಳಿ, ದಾಸ ಸಾಹಿತ್ಯ, ನವ್ಯ, ಬಂಡಾಯ, ದಲಿತ ಸಾಹಿತ್ಯದಲ್ಲಿ ಸಮಾನತೆಯ ಆಶಯ ವ್ಯಕ್ತವಾಗಿದ್ದರೂ ಅವನ್ನು ಸಮಾಜವಾದದ ಆಶಯಗಳು ಎಂದು ಪರಿಗಣಿಸಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಮುಖಂಡ ವಾಸುದೇವ ಉಚ್ಚಿಲ್, ಸಿಪಿಐ (ಎಂ)ನ ಕಾರ್ಯದರ್ಶಿ ಕೆ.ಎನ್. ಉಮೇಶ್, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಉಪಸ್ಥಿತರಿದ್ದರು.

ಸಮಾಜವಾದವು ಬಡವರ ಮತ್ತು ಶ್ರಮಿಕರ ಪರವಾಗಿದ್ದುದು, ಸಾಮ್ರಾಜ್ಯವಾದದ ಕುತಂತ್ರದಿಂದ ಸಮಾಜವಾದ ಸಂಘರ್ಷ ರಾಜಕಾರಣಕ್ಕೆ ಒಳಗಾಗಿ ಅಸ್ಥಿರವಾಗುತ್ತಾ ಹೋಯಿತು.
- ಕೆ.ಮರುಳಸಿದ್ದಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News