ಡಿಸೆಂಬರ್‌ನಲ್ಲಿ ‘ಅನಿಲ ಭಾಗ್ಯ’ ಯೋಜನೆಗೆ ಚಾಲನೆ: ಯು.ಟಿ.ಖಾದರ್

Update: 2017-10-09 16:44 GMT

ಬೆಂಗಳೂರು, ಅ.9: ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಯಡಿ ಕಡು ಬಡವರಿಗೆ 4040 ರೂ.ವೆಚ್ಚದಲ್ಲಿ ಅಡುಗೆ ಅನಿಲ ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್‌ನ್ನು ಸುಮಾರು 15 ಲಕ್ಷ ಬಡವರಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಆನ್‌ಲೈನ್ ಮೂಲಕ ಈ ತಿಂಗಳಲ್ಲಿ ಅರ್ಜಿ ಆಹ್ವಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1.10 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಆ ಪೈಕಿ ಶೇ.80ರಷ್ಟು ಕುಟುಂಬಗಳು ಅನಿಲ ಸಂಪರ್ಕ ಹೊಂದಿರುವುದಾಗಿ ತೈಲ ಕಂಪೆನಿಗಳು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ಕೆಲವು ಜನರಿಗೆ ಸ್ಟೌವ್‌ ಹಾಗೂ ರೆಗ್ಯೂಲೇಟರ್‌ಗಳನ್ನು ವಿತರಿಸುತ್ತಿದೆ. ಉಜ್ವಲ ಯೋಜನೆಯಡಿಯಲ್ಲಿ ಬಿಟ್ಟು ಹೋಗಿರುವ ಕಡುಬಡವರಿಗೆ ರಾಜ್ಯ ಸರಕಾರ ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಯಡಿ ಅಡುಗೆ ಅನಿಲದ ಸಿಲಿಂಡರ್, ಸ್ಟೌವ್, ರೆಗ್ಯೂಲೇಟರ್ ಹಾಗೂ ಪ್ರಾರಂಭಿಕವಾಗಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಲಿದೆ ಎಂದು ಹೇಳಿದರು.

ಈ ಯೋಜನೆಯ ಫಲಾನುಭವಿಗಳು ಆನ್‌ಲೈನ್ ಅರ್ಜಿ ಜೊತೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಉಜ್ವಲ ಯೋಜನೆಯಡಿ ಫಲಾನುಭವಿಗಳು ಅನಿಲ ಸಂಪರ್ಕ ಹೊಂದಿರುವವರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಫಲಾನುಭವಿಗಳು ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತ್ ಗಳ ಮಟ್ಟದಲ್ಲಿಯೆ ಎಲ್ಲ ಮಾಹಿತಿಗಳನ್ನು ನಮೂದಿಸಿ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಡಿಸೆಂಬರ್‌ನಲ್ಲಿ ಅನಿಲ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News