ಪ್ರತಿ 3 ದಿನಗಳಿಗೆ ಸಶಸ್ತ್ರ ಪಡೆಗಳ ಓರ್ವ ಸಿಬ್ಬಂದಿ ಆತ್ಮಹತ್ಯೆ

Update: 2017-10-10 14:20 GMT

ಬೆಂಗಳೂರು,ಅ.10: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಯೋಧ ನರೇಂದ್ರ ಆರ್. ಅವರ ಪಾರ್ಥಿವ ಶರೀರವನ್ನು ಸೋಮವಾರ ಸಂಜೆ ನಗರಕ್ಕೆ ತರಲಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕುಟುಂಬ ಸದಸ್ಯರು ಶಂಕೆಗಳನ್ನು ವ್ಯಕ್ತಪಡಿಸಿದ್ದರೂ ಅವರ ಹೆಸರು ರಕ್ಷಣಾ ಸಚಿವಾಲಯದಲ್ಲಿಯ ಆತ್ಮಹತ್ಯೆ ಮಾಡಿಕೊಂಡ ಯೋಧರ ದಾಖಲೆ ಗಳಲ್ಲಿ ಸೇರಲಿದೆ.

ಸಚಿವಾಲಯದಲ್ಲಿ ಲಭ್ಯ ದತ್ತಾಂಶಗಳಂತೆ 2014,ಜ.1ರಿಂದ 2017,ಮಾ.31ರ ನಡುವೆ ಪ್ರತಿ ಮೂರು ದಿನಗಳಿಗೆ ಮೂರೂ ಸಶಸ್ತ್ರ ಪಡೆಗಳು ಸೇರಿ ಕನಿಷ್ಠ ಓರ್ವ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪೈಕಿ ಭೂಸೇನೆಯ ಸಿಬ್ಬಂದಿಗಳು ಅತಿಹೆಚ್ಚು ಸಂಖ್ಯೆ(276)ಯಲ್ಲಿದ್ದರೆ, ನೌಕಾಪಡೆಯ ಸಿಬ್ಬಂದಿಗಳ ಸಂಖ್ಯೆ(12) ಕನಿಷ್ಠವಾಗಿದೆ.

1185 ದಿನಗಳಲ್ಲಿ 348 ರಕ್ಷಣಾ ಸಿಬ್ಬಂದಿಗಳು, ನಿರ್ದಿಷ್ಟವಾಗಿ ಭಯೋತ್ಪಾದನೆ ಪಿಡುಗಿಗೆ ಗುರಿಯಾಗಿರುವ ಜಮ್ಮು-ಕಾಶ್ಮೀರ ಮತ್ತು ಬಂಡುಕೋರರ ಹಾವಳಿ ಹೆಚ್ಚಿರುವ ಈಶಾನ್ಯ ರಾಜ್ಯಗಳಲ್ಲಿ ಸುದೀರ್ಘ ಅವಧಿಗೆ ನಿಯೋಜಿತರಾಗಿದ್ದ ಸಿಬ್ಬಂದಿಗಳು ಕರ್ತವ್ಯ ದಲ್ಲಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆದರೆ ರಕ್ಷಣಾ ಸಚಿವಾಲಯವು ಹೇಳುವಂತೆ ಹೆಚ್ಚಿನ ಆತ್ಮಹತ್ಯೆಗಳು ಊರಿನಲ್ಲಿ ಭೂ ವಿವಾದಗಳು ಸೇರಿದಂತೆ ವೈಯಕ್ತಿಕ ಕಾರಣಗಳಿಂದ ಘಟಿಸಿವೆ. ನಾಗರಿಕ ಅಧಿಕಾರಿ ಗಳು ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಅಥವಾ ಅವರ ಕುಟುಂಬಗಳ ಕುಂದುಕೊರತೆಗಳಿಗೆ ಸ್ಪಂದಿಸುವುದಿಲ್ಲ ಎಂಬ ದೂರು ತಜ್ಞರೊಂದಿಗೆ ಪ್ರತಿ ಬಾರಿ ಸಮಾಲೋಚನೆಯ ಸಂದರ್ಭ ದಲ್ಲಿ ಪುನರಾವರ್ತನೆಯಾಗುತ್ತಲೇ ಇದೆ.

ಈ ಪೈಕಿ ಕೆಲವು ಕಾರಣಗಳು ನಿಜವಾಗಿದ್ದರೂ ಪಶ್ಚಿಮ ಯುದ್ಧಕ್ಷೇತ್ರದ ಮುಂಚೂಣಿ ನೆಲೆಗಳಲ್ಲಿ ಹಲವಾರು ಬಾರಿ ಕರ್ತವ್ಯವನ್ನು ನಿರ್ವಹಿಸಿರುವ ಕರ್ನಲ್ ಓರ್ವರು, ಈ ಸ್ಥಳಗಳಲ್ಲಿ ಸುದೀರ್ಘ ಅವಧಿಗೆ ನಿಯೋಜನೆಯು ಸಿಬ್ಬಂದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಕಠಿಣ ತರಬೇತಿ ಮತ್ತು ದೇಶದ ಸೇವೆ ಸಲ್ಲಿಸುತ್ತಿದ್ದೇವೆಂಬ ಹೆಮ್ಮೆ ನಾವು ಮುಂದುವರಿಯುವಂತೆ ಮಾಡುತ್ತವೆ, ಆದರೆ ಕೆಲವೊಮ್ಮೆ ಅದು ತುಂಬ ಕಠಿಣವಾಗುತ್ತದೆ ಎಂದು ಹೇಳಿದರು.

ಸಿಬ್ಬಂದಿಗಳಿಗೆ ಮೊದಲೇ ಕೌಟುಂಬಿಕ ಸಮಸ್ಯೆಗಳಿದ್ದರೆ ಇಂತಹ ತಾಣಗಳಲ್ಲಿಯ ಕಠಿಣ ಸ್ಥಿತಿಗಳಿಗೆ ಹೊಂದಿಕೊಳ್ಳುವುದು ಅವರಿಗೆ ತುಂಬ ಕಠಿಣವಾಗುತ್ತದೆ ಎಂದು ಇನ್ನೋರ್ವ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

 ರಕ್ಷಣಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಒಳ್ಳೆಯ ವಾತಾವರಣವನ್ನು ರೂಪಿಸಲು ತಾನು ಹೂಡಿಕೆ ಮಾಡುತ್ತಿದ್ದೇನೆ ಮತ್ತು ಸಂಕಷ್ಟದಲ್ಲಿರುವವರೊಂದಿಗೆ ಕೌನ್ಸೆಲಿಂಗ್ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ತರಬೇತುಗೊಳಿಸಿರುವುದಾಗಿ ಸಚಿವಾಲಯವು ತಿಳಿಸಿದೆ. ಆದರೆ ಇದು ಸಾಕಾಗುತ್ತಿಲ್ಲ ಎಂಬಂತೆ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News