ಫೇಸ್ ಬುಕ್ ನಲ್ಲಿ ಗಂಗಾ ನದಿಗೆ ಅವಮಾನಿಸಿದ ಆರೋಪ: ಯುವಕನಿಗೆ 42 ದಿನ ಜೈಲು!

Update: 2017-10-11 10:48 GMT

ಲಕ್ನೋ, ಅ.11: ‘‘ಗಂಗಾ ನದಿಯನ್ನು ಜೀವಂತ ವ್ಯಕ್ತಿಯೆಂದು ಘೋಷಿಸಿರುವುದರಿಂದ ಅದರಲ್ಲಿ ಯಾರಾದರೂ ಮುಳುಗಿ ಸತ್ತರೆ ಗಂಗೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ? ಏರ್ ಇಂಡಿಯಾಗೆ ನೀಡಲಾದ ಹಜ್ ಸಬ್ಸಿಡಿಯನ್ನು ಕೇಂದ್ರ ಏಕೆ ನಿಲ್ಲಿಸುತ್ತಿಲ್ಲ ?, ಸರಕಾರದ ರಾಮ ಮಂದಿರ ನಿರ್ಮಾಣ ಭರವಸೆ ಕೇವಲ ಒಂದು ಗಿಮಿಕ್’’ ಎಂಬಿತ್ಯಾದಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಕ್ಕಾಗಿ 42 ದಿನಗಳ ಕಾಲ ಜೈಲಿನಲ್ಲಿ ಭಯಾನಕ ಅಪರಾಧಿಗಳೊಂದಿಗೆ ಕಾಲ ಕಳೆಯಬೇಕಾಗಿ ಬಂತಲ್ಲದೆ, ಅಲ್ಲಿ ಶೌಚಾಲಯ ಉಪಯೋಗಿಸಲೂ ಹಣ ತೆರುವಂತಾಯಿತು ಎಂದು ಮುಝಫ್ಫರ ನಗರದ 18 ವರ್ಷದ ಯುವಕನೊಬ್ಬ ಆರೋಪಿಸಿದ್ದಾನೆ.

ಈ ರೀತಿಯಲ್ಲಿ ಶಿಕ್ಷೆ ಅನುಭವಿಸುವಂತಾದ ಯುವಕ ಝಾಕಿರ್ ಅಲಿ ತ್ಯಾಗಿಯನ್ನು ಎಪ್ರಿಲ್ 2ರ ರಾತ್ರಿ ಬಂಧಿಸಿದ ಪೊಲೀಸರು ಐಪಿಸಿಯ ಸೆಕ್ಷನ್ 420 (ವಂಚನೆ) ಹಾಗೂ ಐಟಿ ಕಾಯಿದೆಯ ಸೆಕ್ಷನ್ 66ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. 42 ದಿನಗಳ ತರುವಾಯ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ ದೇಶದ್ರೋಹದ ಆರೋಪ ಹೊರಿಸುವ ಸೆಕ್ಷನ್ 124(ಎ) ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಎಪ್ರಿಲ್ 2ರ ರಾತ್ರಿ ವಿಚಾರಣೆಯ ನೆಪದಲ್ಲಿ ಆತನನ್ನು ಸ್ಥಳೀಯ ಮದ್ರಸದ ಜಲ್ಸಾದಿಂದ ಕರೆದೊಯ್ಯಲಾಗಿತ್ತು. ಕೆಲವೇ ಗಂಟೆಗಳ ನಂತರ ಮನೆಗೆ ಕಳುಹಿಸಲಾಗುವುದೆಂಬ ಸುಳ್ಳು ಭರವಸೆಯನ್ನೂ ಆತನಿಗೆ ನೀಡಲಾಗಿತ್ತು.

ಉಕ್ಕಿನ ಕಾರ್ಖಾನೆಯೊಂದರ ಟ್ರಾನ್ಸ್‌ಪೋರ್ಟರ್ ಬಳಿ ಉದ್ಯೋಗದಲ್ಲಿದ್ದ ಆತ ಈಗ ಮಾಸಿಕ ರೂ.8,000 ವೇತನ ದೊರೆಯುತ್ತಿದ್ದ ಉದ್ಯೋಗವನ್ನೂ ಕಳೆದುಕೊಂಡಿದ್ದಾನೆ. ಜಿಎಸ್‌ಟಿಯಿಂದಾಗಿ ನಷ್ಟವಾಗುತ್ತಿರುವುದರಿಂದ ಹೆಚ್ಚು ಉದ್ಯೋಗಿಗಳನ್ನು ಹೊಂದಲು ಸಾಧ್ಯವಿಲ್ಲವೆಂಬ ಸಮಜಾಯಿಷಿಯನ್ನು ಆತನ ಮಾಲಕ ನೀಡಿದ್ದಾನೆ.

ಮಾನವ ಹಕ್ಕುಗಳಿಗಾಗಿ ಹೋರಾಡುವ ಭೀಮ್ ಆರ್ಮಿ ಡಿಫೆನ್ಸ್ ಕಮಿಟಿ ಆತನನ್ನು ದಿಲ್ಲಿಗೆ ಕರೆತಂದು ಪತ್ರಕರ್ತರೆದುರು ಆತನ ಕಥೆಯನ್ನು ವಿವರಿಸಿದೆ.
ಸದ್ಯ ತ್ಯಾಗಿ ಮೀರತ್ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಸುಭರ್ತಿ ವಿಶ್ವವಿದ್ಯಾಲಯದ ಕರೆಸ್ಪಾಂಡೆನ್ಸ್ ಕೋರ್ಸ್ ಮುಖಾಂತರ ಬಿಎ ಶಿಕ್ಷಣ ಪಡೆಯುತ್ತಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News