ಜಯ್ ಶಾ ಕಂಪನಿಗಳ ಕುರಿತು ತನಿಖೆಗೆ ಸಿಪಿಎಂ ಆಗ್ರಹ

Update: 2017-10-12 13:39 GMT

ಹೊಸದಿಲ್ಲಿ,ಅ.12: ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ಗಳು ನಿಷ್ಪಕ್ಷಪಾತ ವಾಗಿ ಕಾರ್ಯಾಚರಿಸುತ್ತಿವೆ ಎನ್ನುವುದನ್ನು ತೋರಿಸಲಾದರೂ ಸರಕಾರವು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಂಬಂಧಿಸಿದ ಕಂಪನಿಗಳ ಹಣಕಾಸು ವ್ಯವಹಾರಗಳ ತನಿಖೆ ಯನ್ನು ಅವುಗಳಿಗೆ ವಹಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ.

 ಭ್ರಷ್ಟಾಚಾರ ಮತ್ತು ಹಣ ಚಲುವೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆರೋಪ ದಲ್ಲಿ ಮೋದಿ ಸರಕಾರವು ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳ ತನಿಖೆಗಳ ಮೂಲಕ ಹಲವಾರು ಉದ್ಯಮಿಗಳು ಮತ್ತು ರಾಜಕಾರಣಿಗಳ ಬೆನ್ನುಬಿದ್ದಿರುವ ಈ ಸಂದರ್ಭದಲ್ಲಿ ಜಯ್ ಶಾ ಪ್ರಕರಣವನ್ನು ಅದು ನಿರ್ವಹಿಸುತ್ತಿರುವ ರೀತಿ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಸಿಪಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಾಟ್ ಅವರು ಪಕ್ಷದ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯ ಇತ್ತೀಚಿನ ಸಂಪಾದಕೀಯ ಲೇಖನದಲ್ಲಿ ಆರೋಪಿಸಿದ್ದಾರೆ.

ಜಯ್ ಶಾ ಅವರ ಪ್ರಕರಣವನ್ನು ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಪ್ರಕರಣದೊಂದಿಗೆ ಹೋಲಿಸಿರುವ ಕಾರಾಟ್, ಕೆಲವು ವಿಷಯಗಳಲ್ಲಿ ಹಾಗೂ ಭದ್ರತೆಯಿಲ್ಲದ ಸಾಲಗಳು ಮತ್ತು ಸರಕಾರಿ ಕೃಪೆಗಳಿಗೆ ಸಂಬಂಧಿಸಿದಂತೆ ಇವೆರಡೂ ಪ್ರಕರಣಗಳಲ್ಲಿ ಸಾಕಷ್ಟು ಹೋಲಿಕೆಗಳಿವೆ ಎಂದಿದ್ದಾರೆ.

ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುವುದರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದೂ ಕಾರಾಟ್ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News